
ಮೈಸೂರು: ‘ರಾಜ್ಯ ಶಿಕ್ಷಣ ನೀತಿ– 2025ಯು ಪ್ರಾದೇಶಿಕ ಅಸ್ಮಿತೆಯ ಜೊತೆಗೆ ದೇಶದ ಒಕ್ಕೂಟದ ತತ್ವದ ಆಶಯಗಳಿಗೆ ಪೂರಕವಾಗಿ ರೂಪುಗೊಂಡಿದ್ದು, ಮುನ್ನೋಟವನ್ನು ಹೊಂದಿದೆ’ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪ್ರತಿಪಾದಿಸಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ರಾಜ್ಯ ಶಿಕ್ಷಣ ನೀತಿ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಣ ನೀತಿಯು ಶೈಕ್ಷಣಿಕ ಚೌಕಟ್ಟಿಗೆ ಸೀಮಿತವಾಗದೇ ರಾಜ್ಯದ ಇತಿಹಾಸ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕತೆಯ ಕನ್ನಡಿಯಾಗಿದೆ’ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ–2020ಕ್ಕೆ ಪರ್ಯಾಯವಾಗಿ ಪ್ರಾದೇಶಿಕ ದೃಷ್ಟಿಕೋನ, ಸಾಮಾಜಿಕ ನ್ಯಾಯ ಮತ್ತು ಭಾಷಾ ಸಮಾನತೆಯ ದೂರದೃಷ್ಟಿಯ ನಿಲುವುಗಳನ್ನು ರಾಜ್ಯ ಶಿಕ್ಷಣ ನೀತಿ ಪ್ರತಿಬಿಂಬಿಸುತ್ತದೆ. ಎಲ್ಲರ ಒಳಗೊಳ್ಳುವಿಕೆ, ಆಡಳಿತದ ಸವಾಲುಗಳು, ರಾಜಕೀಯ ಆರ್ಥಿಕತೆ ಹಾಗೂ ಭಾಷಾ ನೀತಿಗೆ ಪೂರಕವಾಗಿ ರೂಪುಗೊಂಡಿದೆ’ ಎಂದು ಅಭಿಪ್ರಾಯಪಟ್ಟರು.
‘ದೇಶದ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿಯೇ ನೀತಿಯು ರಚಿತವಾಗಿದೆ. ಭಾಷಾ ವೈವಿಧ್ಯ, ಸಾಮಾಜಿಕ ಶ್ರೇಣೀಕರಣ, ಪ್ರಾದೇಶಿಕ ಶಿಕ್ಷಣ ಸವಾಲುಗಳನ್ನು ರಾಜ್ಯವು ಹೊಂದಿದೆ. ಹೀಗಾಗಿ ನೀತಿಯು ರಾಜ್ಯದ ಅಸ್ಮಿತೆಯನ್ನು ಧ್ವನಿಸಿದೆ’ ಎಂದರು.
‘ದೇಶದ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಪ್ರವೇಶ ಪರೀಕ್ಷೆ, ಪಠ್ಯಕ್ರಮ ಚೌಕಟ್ಟು, ಶಿಕ್ಷಣರ ಅರ್ಹತೆಯ ವಿಧಾನಗಳು, ಅನುದಾನ ಹಂಚಿಕೆ ಸೇರಿದಂತೆ ಕೇಂದ್ರೀಕರಣ ಹೊಂದಿದೆ. ಎಸ್‌ಇಪಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಒಕ್ಕೂಟದ ಉದಾರತೆಯನ್ನು ಹೊಂದಿದೆ. ಕರ್ನಾಟಕದ ಹೊಸ ವ್ಯವಸ್ಥೆಯು ದೇಶದ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಯನ್ನು ದ್ವೀಪವಾಗಿಸದಂತೆ ನೀತಿಯನ್ನು ಅನುಷ್ಠಾನಗೊಳಿಸಬೇಕಾಗುತ್ತದೆ’ ಎಂದು ಹೇಳಿದರು.
‘ಎನ್‌ಇಪಿಯ 5+3+3+4ರ ತರಗತಿ ಮಾದರಿ ಬದಲು 2+8+4 ಮಾದರಿಯನ್ನು ಎಸ್‌ಇಪಿ ಹೊಂದಿದೆ. ಇಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಒಂದೇ ಆಗಿದೆ. ಇದು ವಿದ್ಯಾರ್ಥಿಗಳ ಕಲಿಕಾ ಸುಧಾರಣೆಗೆ ಆದ್ಯತೆ ನೀಡುವುದಲ್ಲದೇ ಪರೀಕ್ಷಾ ಒತ್ತಡವನ್ನು ಕಳೆಯುತ್ತದೆ’ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಿ.ಎಸ್.ಪ್ರತಿಮಾ, ಸಂಸ್ಥೆಯ ಮುಖ್ಯಸ್ಥ ಎಂ.ಪುಟ್ಟಸ್ವಾಮಿ, ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಮಹೇಶ, ಪ್ರೊ.ನವಿತಾ ತಿಮ್ಮಯ್ಯ, ಪ್ರಾಂಶುಪಾಲ ಪ್ರೊ.ಎಂ.ಮಹದೇವಸ್ವಾಮಿ, ಟಿ.ರಮೇಶ್ ಪಾಲ್ಗೊಂಡಿದ್ದರು.
ಕಲಿಕಾ ಸುಧಾರಣೆಗೆ ಆದ್ಯತೆ ಪ್ರಾದೇಶಿಕ ಅಸ್ಮಿತೆಯ ಧ್ವನಿ ಶಿಕ್ಷಕರ ಕೊರತೆ ನೀಗಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.