
ಮೈಸೂರಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಎದುರು ದ್ವಿಚಕ್ರವಾಹನಗಳಿಂದ ಬೇರ್ಪಡಿಸಿದ್ದ 378 ದೋಷಪೂರಿತ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹತ್ತಿಸಿ ನಾಶ ಪಡಿಸಲಾಯಿತು
ಮೈಸೂರು: ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ಪೊಲೀಸರು ವಶಪಡಿಸಿಕೊಂಡಿದ್ದ ದ್ವಿಚಕ್ರವಾಹನಗಳ ದೋಷಪೂರಿತ ಸೈಲೆನ್ಸರ್ ಅನ್ನು ಮಂಗಳವಾರ ಕಾನೂನು ಪ್ರಕಾರ ವಿಲೇವಾರಿ ಮಾಡಿದರು.
ನಗರದ ಲಲಿತ ಮಹಲ್ ರಸ್ತೆಯಲ್ಲಿರುವ ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆ ಎದುರು ದ್ವಿಚಕ್ರವಾಹನಗಳಿಂದ ಬೇರ್ಪಡಿಸಿದ್ದ 378 ದೋಷಪೂರಿತ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹತ್ತಿಸಿ ನಾಶ ಪಡಿಸಿದರು.
‘ನಗರದಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ತಪಾಸಣೆ ಕೈಗೊಳ್ಳಲಾಗಿತ್ತು. ಸವಾರರ ವಿರುದ್ಧ ಐಎಂವಿ (ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್) ಪ್ರಕಾರ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
‘ಮುಂದಿನ ದಿನಗಳಲ್ಲಿಯೂ ಈ ವಿಶೇಷ ತಪಾಸಣೆ ಮುಂದುವರಿಯಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ವಶಪಡಿಸಿಕೊಂಡು, ವಾಹನ ಸವಾರರ ಡಿಎಲ್ ರದ್ದುಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ದೇವರಾಜ ಸಂಚಾರ ಠಾಣೆಯಲ್ಲಿ 26, ಕೆ.ಆರ್. ಸಂಚಾರ ಠಾಣೆಯಲ್ಲಿ 59, ಎನ್.ಆರ್. ಸಂಚಾರ ಠಾಣೆಯಲ್ಲಿ 50, ಸಿದ್ಧಾರ್ಥನಗರ ಸಂಚಾರ ಠಾಣೆಯಲ್ಲಿ 43, ವಿವಿ ಪುರಂ ಸಂಚಾರ ಠಾಣೆಯಲ್ಲಿ 200 ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳಲಾಗಿದೆ.
ಡಿಸಿಪಿ ಕೆ.ಎಸ್.ಸುಂದರ್ ರಾಜ್, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಶಿವಶಂಕರ್ ಇದ್ದರು.
4 ವೀಲಿಂಗ್ ಪ್ರಕರಣ ದಾಖಲು
ನಗರದ ವಿವಿಧ ಸಂಚಾರ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ 4 ವೀಲಿಂಗ್ ಪ್ರಕರಣ ದಾಖಲಾಗಿದೆ. ಈ ಪೈಕಿ ಸಿದ್ಧಾರ್ಥ ಸಂಚಾರ ಠಾಣೆಯಲ್ಲಿ 3 ವಿವಿ ಪುರಂ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. 2025ನೇ ಸಾಲಿನಲ್ಲಿ 15 ಪ್ರಕರಣ ದಾಖಲಾಗಿದ್ದವು. ದೇವರಾಜ ಸಂಚಾರ ಠಾಣೆಯಲ್ಲಿ 1 ಕೆ.ಆರ್ ಸಂಚಾರ 4 ಎನ್.ಆರ್. ಸಂಚಾರ 1 ಸಿದ್ದಾರ್ಥ ಸಂಚಾರ 4 ಹಾಗೂ ವಿವಿ ಪುರಂ ಸಂಚಾರ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿದ್ದವು. ‘ವೀಲಿಂಗ್ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ಕ್ರಮವಹಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.