
ಮೈಸೂರು: ದೇಶದ ಅತ್ಯಂತ ಹಳೆಯ (1892ರಲ್ಲಿ ಸ್ಥಾಪನೆ) ಮತ್ತು ಅತಿ ದೊಡ್ಡದಾದ ಮೃಗಾಲಯಗಳಲ್ಲಿ ಒಂದಾಗಿರುವ, ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ‘ಶ್ರೀಚಾಮರಾಜೇಂದ್ರ ಮೃಗಾಲಯ’ದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ 9 ಮಂದಿ ಮಾತ್ರವೇ ‘ಕಾಯಂ ನೌಕರರು’ ಎಂಬ ಅಂಶ ಹೊರಬಿದ್ದಿದೆ.
ಹೊರಗುತ್ತಿಗೆ ಹಾಗೂ ನೇರಗುತ್ತಿಗೆ ನೌಕರರ ಮೂಲಕವೇ ಸದ್ಯ ನಿರ್ವಹಣೆ ಮಾಡಿಸಲಾಗುತ್ತಿದೆ. ಇಲ್ಲಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ 139.
ಇಲ್ಲಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಈಗ 356 ಮಂದಿಯಿಂದ ಕೆಲಸ
ಸದ್ಯ ಈ ಮೃಗಾಲಯದಲ್ಲಿ ಒಟ್ಟು 356 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ನಿಯೋಜಿತ ಅಧಿಕಾರಿಗಳು 9 ಮಂದಿ ಇದ್ದರೆ, ಕಾಯಂ ನೌಕರರ ಸಂಖ್ಯೆ ಒಂಬತ್ತು ಮಾತ್ರವೇ. ನೇರಗುತ್ತಿಗೆ ಮೂಲಕ 75 ಮಂದಿಯನ್ನು ತೆಗೆದುಕೊಳ್ಳಲಾಗಿದೆ. ಹೊರಗುತ್ತಿಗೆ ನೌಕರರ ಸಂಖ್ಯೆ 164 ಇದೆ. ಭದ್ರತಾ ಸಿಬ್ಬಂದಿಯನ್ನಾಗಿ 99 ಮಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.
‘ಅಗತ್ಯತೆಯ ಆಧಾರದ ಮೇಲೆ ಇ–ಟೆಂಡರ್ ಮೂಲಕ ತಾತ್ಕಾಲಿಕವಾಗಿ ವರ್ಷಕ್ಕೊಮ್ಮೆ ಏಜೆನ್ಸಿ ನೇಮಿಸಿ ಹೊರಗುತ್ತಿಗೆ ಮೂಲಕ ನೌಕರರನ್ನು ತೆಗೆದುಕೊಳ್ಳಲಾಗುತ್ತಿದೆ. 21 ಮಂದಿ 11 ವರ್ಷದಿಂದ, 10 ಮಂದಿ 10 ವರ್ಷಗಳಿಂದ, 28 ಮಂದಿ 9 ವರ್ಷ, 19 ನೌಕರರು 8 ವರ್ಷ, ಇಬ್ಬರು ಏಳು ವರ್ಷ, ಐವರು ಆರು ವರ್ಷ, 26 ಮಂದಿ 4 ವರ್ಷ, 15 ನೌಕರರು ಮೂರು ವರ್ಷ, 13 ಮಂದಿ 2 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. 9 ಮಂದಿಯನ್ನು ಇತ್ತೀಚೆಗೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಇವರೆಲ್ಲರ ಒಟ್ಟು ಸಂಖ್ಯೆ 164 ಆಗಿದೆ’ ಎಂದು ಸಚಿವರು ಮಾಹಿತಿ ಒದಗಿಸಿದ್ದಾರೆ.
ಜೀವ ಪಣಕ್ಕಿಟ್ಟು
‘ಮೃಗಾಲಯದಲ್ಲಿ ಪ್ರಾಣಿಗಳ ಸಂರಕ್ಷಣೆ, ಪೋಷಣೆ ಮೋದಲಾದ ಸವಾಲಿನ ಕೆಲಸಗಳು ಇರುತ್ತವೆ. ಜೀವವನ್ನೇ ಪಣಕಿಟ್ಟು ದುಡಿಯುವ ಈ ನೌಕರರಲ್ಲಿ ಕೆಲವರು 11 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. 18 ಮಂದಿ ಅನುಕಂಪ ಆಧಾರದ ಮೇರೆಗೆ ದುಡಿಯುತ್ತಿದ್ದು ಒಳಗುತ್ತಿಗೆಯವರಿಗೆ ಮಾಸಿಕ ₹ 24ಸಾವಿರ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸಗಾರರಿಗೆ ಮಾಸಿಕ ₹ 14ಸಾವಿರ ನಿಗದಿಪಡಿಸಲಾಗಿದೆ. ಈ ಕಾರ್ಮಿಕರ ಜೀವನೋಪಾಯದ ಆರ್ಥಿಕ ಭದ್ರತೆಗಾಗಿ ಎಲ್ಲರನ್ನೂ ಕಾಯಂಗೊಳಿಸಬೇಕು’ ಎಂದು ಶ್ರೀವತ್ಸ ಒತ್ತಾಯಿಸಿದ್ದಾರೆ.
ಈ ಮೃಗಾಲಯವು 168ಕ್ಕೂ ಹೆಚ್ಚು ಪ್ರಭೇದಗಳ 1,450ಕ್ಕೂ ಹೆಚ್ಚು ಪ್ರಾಣಿ–ಪಕ್ಷಿಗಳಿಗೆ ನೆಲೆಯಾಗಿದೆ. ಅಪರೂಪದ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಂಬಾವಿಲಾಸ ಅರಮನೆಯ ನಂತರ ಮೈಸೂರಿನಲ್ಲಿ ಹೆಚ್ಚು ಭೇಟಿ ನೀಡುವ 2ನೇ ತಾಣವಾಗಿದೆ. ಮಕ್ಕಳಿಗೆ ಪ್ರಿಯವಾದ ಸ್ಥಳವೂ ಹೌದು. ಇದರ ನಿರ್ವಹಣೆಯಲ್ಲಿ ನೌಕರರ ಪಾತ್ರ ಪ್ರಮುಖವಾಗಿದೆ.
ಈ ಮೃಗಾಲಯದ ನೌಕರರು ಇತ್ತೀಚೆಗೆ ಸಂಘವನ್ನೂ ರಚಿಸಿಕೊಂಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಅವರ ಗಮನಕ್ಕೂ ತಂದಿದ್ದಾರೆ.
ಮೈಸೂರು ಮೃಗಾಲಯದಲ್ಲಿ 139 ಮಂಜೂರಾದ ಹುದ್ದೆಗಳಿದ್ದು ಖಾಲಿ ಹುದ್ದೆ ಭರ್ತಿಗೆಂದು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ..– ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ
ಮೃಗಾಲಯದ ನಿರ್ವಹಣೆಯು ನೇರ ಹಾಗೂ ಹೊರಗುತ್ತಿಗೆ ನೌಕರರ ಮೇಲೆಯೇ ಅವಲಂಬಿತವಾಗಿದ್ದು ಅವರನ್ನೇ ಕಾಯಂಗೊಳಿಸುವಂತೆ ಕೋರಿರುವೆ.– ಟಿ.ಎಸ್. ಶ್ರೀವತ್ಸ, ಶಾಸಕ ಕೃಷ್ಣರಾಜ ಕ್ಷೇತ್ರ
ಅರಣ್ಯ ಸಚಿವರ ಸ್ಪಂದನೆ ಏನು?
‘ಒಳಮೀಸಲಾತಿ ನ್ಯಾಯಾಲಯದ ತೀರ್ಪಿನ ಕಾರಣದಿಂದಾಗಿ ಮೈಸೂರು ಮೃಗಾಲಯದಲ್ಲಿ ನೇಮಕಾತಿ ವಿಳಂಬವಾಗಿದೆ. ಈ ನೇರ ನೇಮಕಾತಿಯ ವೇಳೆ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅನುಭವದ ಆಧಾರದಲ್ಲಿ ಆದ್ಯತೆ (ವೈಟೇಜ್) ನೀಡಿ ಹುದ್ದೆ ಭರ್ತಿ ಮಾಡಲಾಗುವುದು. ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳ ದಾವೆಗಳಿವೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.