ADVERTISEMENT

ನಾಗರಹೊಳೆ: ನಾಳೆಯಿಂದ ಸಫಾರಿ ಆರಂಭ; ಅರಣ್ಯದಂಚಿನ ಗ್ರಾಮಸ್ಥರ ಆತಂಕ

ವೀರನಹೊಸಹಳ್ಳಿ: ಪ್ರತಿಭಟಿಸಲು ಸಿದ್ದತೆ

ಎಚ್.ಎಸ್.ಸಚ್ಚಿತ್
Published 22 ಫೆಬ್ರುವರಿ 2026, 3:33 IST
Last Updated 22 ಫೆಬ್ರುವರಿ 2026, 3:33 IST
ನಾಗರಹೊಳೆ ಹುಲಿ ಸಂರಕ್ಷಿತ ವೀರನಹೊಸಹಳ್ಳಿ ಪ್ರವೇಶ ದ್ವಾರ
ನಾಗರಹೊಳೆ ಹುಲಿ ಸಂರಕ್ಷಿತ ವೀರನಹೊಸಹಳ್ಳಿ ಪ್ರವೇಶ ದ್ವಾರ   

ಹುಣಸೂರು: ನಾಗರಹೊಳೆಯಲ್ಲಿ ಫೆ.23ರಿಂದ ಸಫಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಇದರಿಂದ ಅರಣ್ಯದಂಚಿನ ಗ್ರಾಮಸ್ಥರ ಆತಂಕಗೊಂಡು ವೀರನಹೊಸಹಳ್ಳಿ ಬಳಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ನಾಗರಹೊಳೆ ಮತ್ತು ಬಂಡಿಪುರ ಅರಣ್ಯದಂಚಿನಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ಉಲ್ಬಣಿಸಿದ್ದು, ಸಾರ್ವಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಅರಣ್ಯ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸಿದ್ದು, ಪುನರಾರಂಭಕ್ಕೆ ಶನಿವಾರ ಹಸಿರು ನಿಶಾನೆ ತೋರಿದೆ.

ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಂತೆ ತಾಲ್ಲೂಕಿನಲ್ಲಿ 34 ಹಾಡಿ ಮತ್ತು 10 ಗ್ರಾಮಗಳು ಹರಡಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹುಲಿ ಮತ್ತು ಆನೆ ಸಂಘರ್ಷದಿಂದ ಸಾವು– ನೋವು ಹೆಚ್ಚಾಗಿ ಅರಣ್ಯದಂಚಿನ ಗ್ರಾಮಸ್ಥರು ಸಫಾರಿ ಬಂದ್‌ ಮಾಡುವಂತೆ ಹೇರಿದ್ದ ಒತ್ತಡಕ್ಕೆ ಸರ್ಕಾರ ಮಣಿದಿತ್ತು.

ADVERTISEMENT

‘ಸಫಾರಿ ನಿಷೇಧದಿಂದ ನವೆಂಬರ್‌ನಿಂದ ಈವರಗೆ ಅರಣ್ಯದಂಚಿನ ಪ್ರದೇಶದಲ್ಲಿ ಹುಲಿ, ಆನೆ ದಾಳಿ ಪ್ರಕರಣ ಗಣನೀಯವಾಗಿ ತಗ್ಗಿದೆ’ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಸಫಾರಿ ಕಟ್ಟುನಿಟ್ಟು

‘ನಾಗರಹೊಳೆ ಅರಣ್ಯದಲ್ಲಿ ನಾಗರಹೊಳೆ (ವೀರನಹೊಸಹಳ್ಳಿ) ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ ಸುಂಕದಕಟ್ಟೆ ಎರಡು ಭಾಗಗಳಲ್ಲಿ ಸಫಾರಿ ನಡೆಯಲಿದ್ದು, ಸುಂಕದಕಟ್ಟೆ ಸಫಾರಿ ಕೇಂದ್ರದಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 3 ಗಂಟೆ ನಡೆಸಲಿದ್ದೇವೆ. ಸುಂಕದಕಟ್ಟೆ ಸಫಾರಿ ಕೇಂದ್ರದಲ್ಲಿ ಇಲಾಖೆಗೆ ಸೇರಿದ 13 ವಾಹನ ಮತ್ತು ಜಂಗಲ್‌ ಲಾಡ್ಜಸ್ ಅಂಡ್‌ ರೆಸಾರ್ಟ್‌ಗೆ (ಜೆ.ಎಲ್.ಆರ್‌ಗೆ) ಸೇರಿದ 12 ವಾಹನಗಳು ಇದ್ದು, ನಾಗರಹೊಳೆ ಅರಣ್ಯದಲ್ಲಿ ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ 2 ಗಂಟೆ ಸಫಾರಿ ನಡೆಯಲಿದೆ. ಈ ಕೇಂದ್ರದಲ್ಲಿ ಅರಣ್ಯ ಇಲಾಖೆಯ 6 ಹಾಗೂ ಜೆಎಲ್‌ಆರ್‌ಗೆ ಸೇರಿದ 8 ಸೇರಿದಂತೆ ಒಟ್ಟು 14 ವಾಹನಗಳಿವೆ’ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಯೋಜನೆ ವಿಭಾಗದ ಎಸಿಎಫ್‌ ಲಕ್ಷ್ಮಿಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆದಾಯ: ‘ಪರಿಸರ ಸಫಾರಿ ಪ್ರವಾಸೋದ್ಯಮದಲ್ಲಿ 1.80 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದರಿಂದ ಇಲಾಖೆಗೆ ಸರಾಸರಿ ₹ 11 ಕೋಟಿ ಸಂಗ್ರಹವಾಗಿತ್ತು. 4 ತಿಂಗಳ ರದ್ಧತಿಯಿಂದಾಗಿ ₹ 4.50 ಕೋಟಿ ನಷ್ಟವಾಗಿದೆ. ಇದಲ್ಲದೆ ಸರ್ಕಾರ ಸಫಾರಿ ಕಡಿತಗೊಳಿಸಲಾಗಿ ಮತ್ತಷ್ಟು ಆದಾಯ ತಗ್ಗಲಿದೆ’ ಎಂದರು.

ವಿರೋಧ: ‘ನಾಗರಹೊಳೆ ಅರಣ್ಯದಲ್ಲಿ ಸರ್ಕಾರ ಸಫಾರಿ ಆರಂಭಿಸಲು ಹಸಿರು ನಿಶಾನೆ ತೋರಿಸಿ ರೆಸಾರ್ಟ್‌ ಮಾಫಿಯಾಗೆ ಮಣಿದಿದೆ. ಗ್ರಾಮಗಳಲ್ಲಿ ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಸ್ವಲ್ಪಮಟ್ಟಿಗೆ ತಗ್ಗಿತ್ತು. ಕೆಲವರ ಹಿತಾಸಕ್ತಿ ಕಾದುಕೊಳ್ಳಲು ಇಲಾಖೆ ಮತ್ತೊಮ್ಮೆ ಸಫಾರಿ ಆರಂಭಿಸಿದೆ. ಬೇಸಿಗೆ ಆರಂಭವಾಗುತ್ತಿದ್ದು, ಕಾಡ್ಗಿಚ್ಚು ಆತಂಕದಲ್ಲಿ ಅರಣ್ಯ ಇರುವುದರಿಂದ ಸಫಾರಿ ಪ್ರವಾಸೋದ್ಯಮ ಅಗತ್ಯವಿತ್ತೆ?, ರಾಜ್ಯ ಸರ್ಕಾರ ಹೈಕೋರ್ಟ್‌ ತೀರ್ಪನ್ನು ಪಾಲಿಸುವಲ್ಲಿ ವಿಫಲವಾಗಿದೆ. ಈ ತೀರ್ಮಾನ ವಿರೋಧಿಸಿ ಫೆ.28ರಂದು ಆದಿವಾಸಿಗಳ ಸಂಘಟನೆ ಪ್ರತಿಭಟಿಸಲಿದೆ’ ಎಂದು ಡೀಡ್‌ ಸಂಸ್ಥೆ ನಿರ್ದೇಶಕ ಮತ್ತು ಪರಿಸರವಾದಿ ಶ್ರೀಕಾಂತ್‌  ತಿಳಿಸಿದರು.

ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸರ್ಕಾರ ಆದೇಶಿಸಿದ್ದು ಆದೇಶ ಪತ್ರ ಇಲಾಖೆ ಫೆ. 21ರಂದು ಕೈ ಸೇರಿದೆ. ಈ ಸಂಬಂಧ ಇಲಾಖೆ ಸಭೆ ನಡೆಸಿ ಹಿರಿಯ ಅಧಿಕಾರಿಗಳ ಸೂಚನೆ ಪಡೆದು 23ರಿಂದ ಸಫಾರಿ ಆರಂಭಿಸಲಿದ್ದೇವೆ.
- ಲಕ್ಷ್ಮಿಕಾಂತ್‌, ಎಸಿಎಫ್‌ ನಾಗರಹೊಳೆ
ಸಫಾರಿ ರದ್ಧತಿಯಿಂದ 4 ತಿಂಗಳು ನೆಮ್ಮದಿಯಿಂದಿದ್ದ ಅರಣ್ಯದಂಚಿನ ಗ್ರಾಮಸ್ಥರಿಗೆ ಪುನರಾಂಭಿಸಲು ಮುಂದಾಗಿರುವುದು ನಾಗರಿಕರ ನಿದ್ರೆಗೆಡಿಸಿದೆ. ಫೆ. 23ರಂದು ಸಫಾರಿ ವಿರೋಧಿಸಿ ವೀರನಹೊಸಹಳ್ಳಿ ಅರಣ್ಯದಂಚಿನ ಗ್ರಾಮಸ್ಥರು ಪ್ರತಿಭಟಿಸಲಿದ್ದೇವೆ.
- ಲೋಕೇಶ್‌, ನೇಗತ್ತೂರು ಗ್ರಾಮದ ನಿವಾಸಿ
ಸಫಾರಿ ರದ್ದುಗೊಳಿಸುವುದರಿಂದ ಮಾನವ ವನ್ಯಪ್ರಾಣಿ ಸಂಘರ್ಷ ನಿಲ್ಲುವುದಿಲ್ಲ ಇಲಾಖೆ ರೈಲ್ವೆ ಕಂಬಿ ತಡಗೋಡೆಗೆ ಮೆಷ್‌ ತಂತಿ ಅಳವಡಿಸುವುದರಿಂದ ಹುಲಿ ಜಿಂಕೆ ಅಂತಹ ಪ್ರಾಣಿಗಳ ಚಲನವಲನಕ್ಕೆ ತಡೆಯೊಡ್ಡಬಹುದು.
- ಸುಭಾಷ್‌, ಮುದಗನೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.