ಮೈಸೂರು: ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ನಾಲ್ವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಜಿಲ್ಲಾ ದಂಡಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ರದ್ದುಗೊಳಿಸಿ ಆದೇಶಿಸಿದ್ದಾರೆ.
ನಗರಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಹುಮತ ಹೊಂದಿತ್ತು. ಆದರೆ,ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಶ್ರೀಕಂಠಸ್ವಾಮಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಸದಸ್ಯರಾದ 1ನೇ ವಾರ್ಡ್‌ನ ಗಿರೀಶ್ ಕುಮಾರ್, 12ನೇ ವಾರ್ಡ್‌ನ ಗಾಯತ್ರಿ ಮುರುಗೇಶ್, 22ನೇ ವಾರ್ಡ್‌ನ ಮೀನಾಕ್ಷಿ ನಾಗರಾಜ್ ಹಾಗೂ 27ನೇ ವಾರ್ಡ್‌ನ ವಿಜಯಲಕ್ಷ್ಮಿ ಕುಮಾರ್ ಅವರು ಪಕ್ಷದ ‘ವಿಪ್’ ಉಲ್ಲಂಘಿಸಿ, ಗೈರು ಹಾಜರಾಗಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿತ್ತು.
ಬಿಜೆಪಿ ನಂಜನಗೂಡು ನಗರ ಘಟಕದ ಅಧ್ಯಕ್ಷ ಸಿದ್ದರಾಜು, ಸದಸ್ಯ ದೇವ ಅವರು 2024ರ ಅ.29ರಂದು ಜಿಲ್ಲಾಧಿಕಾರಿಗೆ ಈ ಕುರಿತು ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯವು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಈ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.