
ನಂಜನಗೂಡು: ‘ಮಡಿವಾಳ ಮಾಚಯ್ಯ ಅವರಂತಹ ಶರಣರು, ಸಂತರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ನಗರದ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೊಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹನೀಯರು ತೋರಿದ ದಾರಿಯಲ್ಲಿ ನಡೆಯುವುದರಿಂದ ಸಮ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಬಸವಣ್ಣನವರ ಅತ್ಯಪ್ತರಾಗಿದ್ದ ಮಾಡಿವಾಳ ಮಾಚಯ್ಯನವರು ನುಡಿದಂತೆ ನಡೆದ ಶರಣರು. ಅವರು ತಮ್ಮ ನೂರಾರು ವಚನಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ತಿಳಿಸಿದರು.
ಬಸವಣ್ಣನವರ ಕಾಲದ ಅಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯನಂತಹ ಶರಣರ ವಚನಗಳನ್ನು ಕಂಠಪಾಟ ಸ್ಪರ್ಧೆ ಏರ್ಪಡಿಸಿ ಅವರ ಆದರ್ಶ, ಸಮಾಜಮುಖಿ ಚಿಂತನೆಗಳನ್ನು ಪರಿಚಯಿಸುವ ಕೆಲಸ ಶ್ಲಾಘನೀಯ ಎಂದರು.
ಅತ್ಯಂತ ಹಿಂದುಳಿದ ಮಡಿವಾಳ ಸಮುದಾಯದವರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ₹50 ಲಕ್ಷ ಅನುದಾನ ನೀಡಲಾಗಿದೆ. ಸಮುದಾಯಭವನ ನಿರ್ಮಾಣಕ್ಕಾಗಿ ಬೇಕಾದ ಉಳಿದ ಆರ್ಥಿಕ ನೆರವನ್ನು ನೀಡಲು ಬದ್ಧ ಎಂದು ಭರವಸೆ ನೀಡಿದರು.
ಮುಖ್ಯಶಿಕ್ಷಕ ಎಸ್.ಎನ್.ಸಿದ್ದರಾಜಪ್ಪ ಮಾತನಾಡಿ, ‘ವಿಶ್ವ ಸಾಹಿತ್ಯಕ್ಕೆ ಕರ್ನಾಟಕ ವಚನ ಸಾಹಿತ್ಯ ಅನುಪಮ ಕೊಡುಗೆ ನೀಡಿದೆ. ರಾಜ್ಯದ 21 ಸಾವಿರ ವಚನಕಾರರು, 247 ಮಂದಿ ವಚನಕಾರ್ತಿಯರು 33 ಸಾವಿರ ವಚನ ಸಾಹಿತ್ಯ ರಚಿಸಿದ್ದಾರೆ. ರಾಜ್ಯ ಸರ್ಕಾರ ಅವುಗಳನ್ನು ಪ್ರಕಟಿಸಿದೆ. ಮಡಿವಾಳ ಮಾಚಯ್ಯನವರು ಬಿಚ್ಚುಗತ್ತಿ ಹಿಡಿದು ವಚನ ಸಾಹಿತ್ಯವನ್ನು ರಕ್ಷಿಸದಿದ್ದಿದ್ದರೆ ನಮಗೆ ಬಸವಣ್ಣನವರ ಕಾಲದ ವಚನ ಸಾಹಿತ್ಯ ಲಭ್ಯವಾಗುತ್ತಿರಲಿಲ್ಲ. ಜನರ ಮೌಲ್ಯಯುತ ಬದುಕಿಗೆ ಬೇಕಾದ ವಚನಗಳನ್ನು ಮಡಿವಾಳ ಮಾಚಯ್ಯ ರಚಿಸಿದ್ದಾರೆ’ ಎಂದು ಹೇಳಿದರು.
ಶಾಸಕ ದರ್ಶನ್ ದ್ರುವನಾರಾಯಣ ವಚನಗಳ ಕಂಠಪಾಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಲ್ಯಾಪ್ ಟಾಪ್ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಸ್ಮಿತಾರಾಮು, ತಾ.ಪಂ ಇಒ ಜೆರಾಲ್ಡ್ ರಾಜೇಶ್, ಡಿವೈಎಸ್‌ಪಿ ರಘು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಮಾರುತಿ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಗೌಡ, ಮುಖಂಡರಾದ ದೇಬೂರು ಅಶೋಕ್, ಶ್ರೀನಿವಾಸ ಮೂರ್ತಿ, ಮುರುಗೇಶ್, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಹೆಜ್ಜಿಗೆ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಸವರಾಜು, ಗೌರವಾಧ್ಯಕ್ಷ ಶಿವಣ್ಣ, ರವಿ, ಮಹೇಶ್, ನಾಗರಾಜು, ಸೋಮಣ್ಣ, ಮಹದೇವಸ್ವಾಮಿ, ಬಸವರಾಜು, ಸುರೇಶ್, ಪ್ರಭುಸ್ವಾಮಿ, ವೆಂಕಟೇಶ್, ಬೈರ ಶೆಟ್ಟಿ, ಕಂದಾಯ ನಿರೀಕ್ಷಕರಾದ ಹರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.