ADVERTISEMENT

ಮೈಸೂರು | ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ ಆಗಲಿ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:01 IST
Last Updated 16 ಸೆಪ್ಟೆಂಬರ್ 2025, 2:01 IST
<div class="paragraphs"><p>ಕಲಾಮಂದಿದರಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಸಚಿವ ಮಧು ಬಂಗಾರಪ್ಪ ಪುಷ್ಪಾರ್ಚನೆ ಮಾಡಿದರು. ವಿಖ್ಯಾತಾನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ರಾಜಶೇಖರ್ ಕದಂಬ, ಕೆ.ಕೆ. ಮನೋಜ್ ಕುಮಾರ್, ಡಿ. ತಿಮ್ಮಯ್ಯ, ಪೋತರಾಜ್ ಜೊತೆಗಿದ್ದರು</p></div>

ಕಲಾಮಂದಿದರಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಸಚಿವ ಮಧು ಬಂಗಾರಪ್ಪ ಪುಷ್ಪಾರ್ಚನೆ ಮಾಡಿದರು. ವಿಖ್ಯಾತಾನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ರಾಜಶೇಖರ್ ಕದಂಬ, ಕೆ.ಕೆ. ಮನೋಜ್ ಕುಮಾರ್, ಡಿ. ತಿಮ್ಮಯ್ಯ, ಪೋತರಾಜ್ ಜೊತೆಗಿದ್ದರು

   

– ಪ್ರಜಾವಾಣಿ ಚಿತ್ರ

ಮೈಸೂರು: ‘ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣ–ವೈಚಾರಿಕತೆಯ ಬೆಳಕು ತೋರಿದ ಸಂತ. ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಯಾದರೆ ಅವರ ಚಿಂತನೆಗಳನ್ನು ಎಲ್ಲೆಡೆ ಪ್ರಸಾರ ಮಾಡಲು ಸಾಧ್ಯವಾಗುತ್ತದೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ADVERTISEMENT

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೇರಳವು ಸಾಕ್ಷರತೆಯಲ್ಲಿ ಪ್ರಗತಿ ಸಾಧಿಸಿದೆ ಎಂದರೆ ಅದಕ್ಕೆ ನಾರಾಯಣ ಗುರುಗಳ ಕೊಡುಗೆ ಕಾರಣ. ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದ ಅವರು, ಸಾಮಾಜಿಕ ಕಳಕಳಿ ಹೊಂದಿದ್ದರು. ದೇವಸ್ಥಾನಗಳನ್ನು ಹೆಚ್ಚು ಕಟ್ಟಬೇಡಿ, ಶಾಲೆಗಳನ್ನು ಹೆಚ್ಚು ಕಟ್ಟಿ ಎಂದು ಹೇಳಿದ್ದರು’ ಎಂದು ನೆನೆದರು.

‘2015ರಲ್ಲಿ ಸರ್ಕಾರದ ಮಟ್ಟದಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಿದೆ. ಬಳಿಕ ಮುಖ್ಯಮಂತ್ರಿ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆಗೆ ತಂದರು’ ಎಂದು ನೆನೆದ ಅವರು ‘ಸಮುದಾಯದ ಜನರು ಸದಾ ಒಗ್ಗಟ್ಟಿನಿಂದ ಇರಬೇಕು. ಸಮಾಜದ ಏಳ್ಗೆಗಾಗಿ ನನ್ನ ಕೈಲಾದ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ’ ಎಂದರು.

ಶಿವಮೊಗ್ಗ ನಾರಾಯಣಗುರು ಮಹಾಸಂಸ್ಥಾನ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ, ‘ಮೈಸೂರಿನಲ್ಲಿ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ 80 ಹೆಣ್ಣು ಹಾಗೂ 100ಕ್ಕೂ ಹೆಚ್ಚು ಗಂಡು ಮಕ್ಕಳು ಓದುತ್ತಿದ್ದಾರೆ. ಅವರಿಗೆ ಸಮುದಾಯದ ದೇಣಿಗೆಯಿಂದ ಸವಲತ್ತು ನೀಡಲಾಗುತ್ತಿದೆ. ಈಡಿಗ ಸಮುದಾಯ ಭವನ ನಿರ್ಮಿಸಿಕೊಡಬೇಕು’ ಎಂದು ಕೋರಿದರು.

ಬ್ರಹ್ಮಶ್ರೀ ನಾರಾಯಣಗುರು ಮಿಷನ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ. ಮನೋಜ್ ಕುಮಾರ್, ‘ನಾರಾಯಣ ಗುರು ಜಯಂತಿಯನ್ನು ದೀನ–ದಲಿತರ ಸ್ವಾತಂತ್ರ್ಯ ದಿನ ಎಂದು ಹೇಳಿದರೆ ತಪ್ಪಾಗಲಾರದು. ಕೇರಳದ ನೆಲದಲ್ಲಿನ ಅನಾಚಾರಗಳನ್ನು ಖಂಡಿಸಿ ಭಾವ ಸಂಬಂಧಗಳನ್ನು ಬೆಸೆದವರು, ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು ಎಂದು ಹೇಳಿದವರು’ ಎಂದು ಸ್ಮರಿಸಿದರು.

ವಿಧಾನಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ ಮಾತನಾಡಿದರು. ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ. ಪೋತರಾಜ್, ಸಮುದಾಯದ ಮುಖಂಡರಾದ ಪಿ. ದೇವರಾಜ್, ಸರೋಜಮ್ಮ ಪಾಪೇಗೌಡ, ರಾಜೇಂದ್ರ, ಹುಣಸೂರು, ಎಚ್.ಎಂ. ವಿಶ್ವನಾಥ್, ಟಿ. ಗಿರೀಶ್, ಶ್ರೀನಿವಾಸ್, ರಾಜಶೇಖರ ಕದಂಬ ಇದ್ದರು.

ಭಾವಚಿತ್ರದ ಮೆರವಣಿಗೆ

ನಾರಾಯಣ ಗುರುಗಳ ಜಯಂತಿ ಅಂಗವಾಗಿ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಕಲಾಮಂದಿರದವರೆಗೆ ಶ್ರೀಗಳ ಭಾವಚಿತ್ರದ ಮೆರವಣಿಗೆಯು ನಡೆಯಿತು. ಕೆ.ಆರ್ ವೃತ್ತ ಡಿ.ದೇವರಾಜ ಅರಸು ರಸ್ತೆ ಮೆಟ್ರೊಪೋಲ್ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಬೆಳ್ಳಿ ರಥದಲ್ಲಿ ಗುರುಗಳ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು ಸಾಥ್‌ ನೀಡಿದವು. ಆರ್ಯ ಈಡಿಗ ಸಮುದಾಯದ ಮುಖಂಡರು ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.