ADVERTISEMENT

ಚರಿತ್ರೆಯಲ್ಲಿ ಕಳೆದು ಹೋದವರ ಮರುಶೋಧ ಅಗತ್ಯ: ಲೇಖಕ ಮಹಾದೇವ ಶಂಕನಪುರ ಪ್ರತಿಪಾದನೆ

’ನನ್ನ ಬದುಕು–ನನ್ನ ಬರಹ’ದ ಕುರಿತು ಮಾತು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 4:24 IST
Last Updated 28 ನವೆಂಬರ್ 2021, 4:24 IST
ಮೈಸೂರಿನಲ್ಲಿ ಶನಿವಾರ ಏರ್ಪಡಿಸಿದ್ದ ‘ನಾಲಿಗೆ ಮೇಲಿನ ಚರಿತೆಗಾರನ ಹಾಡು ಪಾಡು’ ಕಾರ್ಯಕ್ರಮದಲ್ಲಿ ಮೈಸೂರು ಗೆಳೆಯರು ಲೇಖಕ ಮಹಾದೇವ ಶಂಕನಪುರ ಮತ್ತು ಶಾಂತಾ ದಂಪತಿಯನ್ನು ಸನ್ಮಾನಿಸಿದರು. ಪಿ.ಬೆಟ್ಟೇಗೌಡ, ಎಚ್‌.ಎಸ್‌.ರೇಣುಕಾರಾಧ್ಯ, ಪ್ರೊ.ಎಂ.ಎಸ್.ಶೇಖರ್, ಮಹೇಶ್‌ ಹರವೆ, ರಂಗನಾಥ ಕಂಟನಕುಂಟೆ, ರಾಜು ಬಿ ಕನ್ನಲಿ, ಎಸ್‌.ತುಕಾರಾಂ, ತ್ರಿವೇಣಿ ಮತ್ತು ಗೀತಾ ಬೆಟ್ಟೇಗೌಡ ಇದ್ದಾರೆ.
ಮೈಸೂರಿನಲ್ಲಿ ಶನಿವಾರ ಏರ್ಪಡಿಸಿದ್ದ ‘ನಾಲಿಗೆ ಮೇಲಿನ ಚರಿತೆಗಾರನ ಹಾಡು ಪಾಡು’ ಕಾರ್ಯಕ್ರಮದಲ್ಲಿ ಮೈಸೂರು ಗೆಳೆಯರು ಲೇಖಕ ಮಹಾದೇವ ಶಂಕನಪುರ ಮತ್ತು ಶಾಂತಾ ದಂಪತಿಯನ್ನು ಸನ್ಮಾನಿಸಿದರು. ಪಿ.ಬೆಟ್ಟೇಗೌಡ, ಎಚ್‌.ಎಸ್‌.ರೇಣುಕಾರಾಧ್ಯ, ಪ್ರೊ.ಎಂ.ಎಸ್.ಶೇಖರ್, ಮಹೇಶ್‌ ಹರವೆ, ರಂಗನಾಥ ಕಂಟನಕುಂಟೆ, ರಾಜು ಬಿ ಕನ್ನಲಿ, ಎಸ್‌.ತುಕಾರಾಂ, ತ್ರಿವೇಣಿ ಮತ್ತು ಗೀತಾ ಬೆಟ್ಟೇಗೌಡ ಇದ್ದಾರೆ.   

ಮೈಸೂರು:‘ಬ್ರಾಹ್ಮಣಶಾಹಿ ತಿರುಚಿದ ದೇಶದ ಚರಿತ್ರೆಯಲ್ಲಿ ಕಳೆದು ಹೋದವರ ಮರುಶೋಧ ಇಂದಿನ ಅಗತ್ಯ’ ಎಂದು ಲೇಖಕ ಮಹಾದೇವ ಶಂಕನಪುರ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ಮೈಸೂರು ಗೆಳೆಯರು ಏರ್ಪಡಿಸಿದ್ದ ‘ನಾಲಿಗೆ ಮೇಲಿನ ಚರಿತೆಗಾರನ ಹಾಡು–ಪಾಡು’ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ’ನನ್ನ ಬದುಕು–ನನ್ನ ಬರಹ’ದ ಬಗ್ಗೆ ಮಾತನಾಡಿದ ಅವರು, ’ಅಂಬೇಡ್ಕರ್‌ ಅವರ ಚಿಂತನೆಯನ್ನು ನಾನು ಓದಿಕೊಳ್ಳದೇ ಇದ್ದಿದ್ದರೆ, ಚರಿತ್ರೆಯಿಂದ ವಂಚಿತರಾದವರನ್ನು ಹುಡುಕಿ ಬರೆಯಲು, ಚರಿ
ತ್ರೆಯ ಉತ್ತಮ ಬೋಧಕನಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದವರು.

‘ವಿವಿಧ ಪ್ರಕಾರಗಳಲ್ಲಿರುವ ನನ್ನ ಬರಹಗಳೆಲ್ಲವೂ ಚರಿತ್ರೆಯಲ್ಲಿ ಕಳೆದುಹೋದವರ ಮರುಶೋಧಗಳೇ ಆಗಿವೆ. ಸಂಶೋಧನೆ, ಕಾವ್ಯ, ಚರಿತ್ರೆ ಹಾಗೂ ಸಂಕೀರ್ಣ ಬರಹಗಳೆಲ್ಲವನ್ನು ಸ್ವಯಂ ಬಿಡುಗಡೆಗಾಗಿ ಬರೆದೆ. ಆದರೆ ಅವುಗಳ ಬಗ್ಗೆ ಮೈಸೂರು ಗೆಳೆಯರು ಚರ್ಚಿಸುತ್ತಿರುವುದು ಇದುವರೆಗೆ ದೊರಕಿರುವ ಪ್ರಶಸ್ತಿಯಷ್ಟೇ ಸಮನಾದ ಗೌರವವನ್ನು ತಂದಿದೆ’ ಎಂದರು.

ADVERTISEMENT

ಸಂಶೋಧನೆ ಮತ್ತು ಸಂಕೀರ್ಣ ಬರಹಗಳ ಕುರಿತು ಮಾತನಾಡಿದ ವಿಮರ್ಶಕ ರಂಗನಾಥ ಕಂಟನಕುಂಟೆ, ‘ಮಂಟೇಸ್ವಾಮಿ ಮತ್ತು ಮಹದೇಶ್ವರ ಪರಂಪರೆಯ ಬಗ್ಗೆ ವಿಶೇಷ ಪರಿಶ್ರಮವುಳ್ಳ ಮಹಾದೇವ ಶಂಕನಪುರ ಅವರು ಈ ಧಾರೆಗಳಲ್ಲೇ ಹೆಚ್ಚು ಕ್ಷೇತ್ರ ಕಾರ್ಯ, ಅಧ್ಯಯನ ಮತ್ತು ಬರವಣಿಗೆಯನ್ನು ನಡೆಸಿದ್ದಾರೆ. ಹೀಗಾಗಿ ಅವರನ್ನು ಮಂಟೇಸ್ವಾಮಿ ಪರಂಪರೆಯ ತಜ್ಞರು ಎಂದು ನಿಸ್ಸಂದೇಹವಾಗಿ ಕರೆಯಬಹುದು’ ಎಂದರು.

‘ಮುಖ್ಯಧಾರೆಯ ಮಹಾಕಾವ್ಯ ಗಳಾದ ರಾಮಾಯಣ, ಮಹಾಭಾರತ ಹಿಂಸೆಯನ್ನು ತಾತ್ವೀಕರಿಸುತ್ತವೆ. ಆದರೆ ಜಾನಪದ ಕಾವ್ಯಗಳು ಅಹಿಂಸೆಯನ್ನು ಪ್ರತಿಪಾದಿಸುತ್ತವೆ. ಇಂತಹ ಜಾನಪದ ಸಂಸ್ಕೃತಿಯನ್ನೇ ಮಹಾದೇವರ ಬರಹಗಳು ಉಸಿರಾಡುತ್ತವೆ’ ಎಂದರು.

ಕಾವ್ಯ ಕುರಿತು ಮಾತನಾಡಿದ ಲೇಖಕಿ ತ್ರಿವೇಣಿ, ‘ಮಹಾದೇವ ಅವರ ಕವಿತೆಗಳು ಶೋಷಿತ ವರ್ಗದ ಗಂಭೀರ ಸಮಸ್ಯೆಗಳನ್ನು ವಿಶಿಷ್ಟ ಶೈಲಿ ಮತ್ತು ಭಾಷೆಯಲ್ಲಿ ಅಭಿವ್ಯಕ್ತಿಸುತ್ತವೆ’ ಎಂದರು.

ಪ್ರೊ.ಎಂ.ಎಸ್.ಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ದೇವಾನಂದ ವರಪ್ರಸಾದ್‌ ತತ್ವಪದಗಳನ್ನು ಹಾಡಿದರು. ಗೆಳೆಯರ ಬಳಗದ ಎಚ್‌.ಎಸ್‌.ರೇಣುಕಾಪ್ರಸಾದ್‌, ಮಹೇಶ್‌ ಹರವೆ, ಡಾ.ಪಿ.ಬೆಟ್ಟೇಗೌಡ, ಎಸ್‌.ತುಕಾರಾಂ, ರಾಜು ಬಿ.ಕನ್ನಲಿ, ಗೀತಾ ಬೆಟ್ಟೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.