
ಮೈಸೂರು: ಕಡೂರಿನ ನವೀನ್ ಕುಮಾರ್ ತಂಡದ ‘ವೀರಗಾಸೆ’, ಶಕೀಲ್ ಅಹ್ಮದ್ ನಿರ್ದೇಶನದ ‘ನಿರ್ದಿಗಂತ’ ಪ್ರಸ್ತುತಿ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನದೊಂದಿಗೆ ಭಾನುವಾರ, ಇಲ್ಲಿನ ಕಿರುರಂಗಮಂದಿರದಲ್ಲಿ 5 ದಿನ ನಡೆದ ‘ನಿರಂತರ ರಂಗ ಉತ್ಸವ’ಕ್ಕೆ ವೈಭವದ ತೆರೆಬಿತ್ತು.
ಜಾನಪದ, ರಂಗಗೀತೆ, ಹಿಂದೂಸ್ಥಾನಿ ಸಂಗೀತ, ನಾಟಕಗಳ ಹೂರಣದ ಸವಿಯನ್ನು ಎಲ್ಲರು ಸವಿದರು.
ಇದಕ್ಕೂ ಮೊದಲು ನಡೆದ ಸಮಾರೋಪದಲ್ಲಿ ಮಾತನಾಡಿದ ಲೇಖಕ ದೇವನೂರ ಬಸವರಾಜು, ‘ರಂಗಭೂಮಿ ಸದಭಿರುಚಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯ ಬೆಳೆಸುವ ಸಂಜೀವಿನಿ. ಜನರ ಬದುಕನ್ನು ಹಸನು ಮಾಡುವ ಅದು, ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ನೆಲೆಗೊಳಿಸುತ್ತದೆ’ ಎಂದರು.
‘ಪ್ರಸಕ್ತ ಕಾಲಘಟ್ಟವು ವಿಷಮಯವಾಗಿದ್ದು, ಜಾತಿ, ಧರ್ಮದ ಅಸಹನೆ ಹೆಚ್ಚಾಗಿದೆ. ಜನರಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಮರುನಿರ್ಮಿಸಲು ರಂಗಭೂಮಿ ಅತ್ಯುತ್ತಮ ಮಾರ್ಗವಾಗಿದೆ. ಮಾನವೀಯತೆ ಎಲ್ಲೆಡೆ ನೆಲೆಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯ ನೆಮ್ಮದಿ ಹಾಳಾಗಲಿದೆ’ ಎಂದು ಹೇಳಿದರು.
ರಂಗಕರ್ಮಿ ಚಿದಂಬರರಾವ್ ಜಂಬೆ ಮಾತನಾಡಿ, ‘ನಿರಂತರವು ಸಹಜರಂಗ ರಂಗ ತರಬೇತಿ ಶಿಬಿರ, ಕಾವ್ಯ ಓದು, ಸಾಹಿತ್ಯ ಹಾಗೂ ನಾಟಕಗಳ ಅಧ್ಯಯನದ ಮೂಲಕ ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನತ್ತ ಕರೆದೊಯ್ಯುತ್ತಿದೆ’ ಎಂದರು.
ನಿರಂತರ ಫೌಂಡೇಷನ್ ಅಧ್ಯಕ್ಷ ಎಂ.ಎಂ.ಸುಗುಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.