ADVERTISEMENT

ಜಯಲಕ್ಷ್ಮಿ ವಿಲಾಸ ಪರಭಾರೆಗೆ ವಿರೋಧ; ಮೈಸೂರು ವಿಶ್ವವಿದ್ಯಾಲಯದ ಕ್ರಮಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 12:39 IST
Last Updated 4 ಸೆಪ್ಟೆಂಬರ್ 2022, 12:39 IST
ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿವಿಲಾಸ ಅರಮನೆಯ ನೋಟ
ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿವಿಲಾಸ ಅರಮನೆಯ ನೋಟ   

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯವು ಮಾನಸ ಗಂಗೋತ್ರಿಯಲ್ಲಿರುವ ಪಾರಂಪರಿಕ ಜಯಲಕ್ಷ್ಮಿವಿಲಾಸ ಅರಮನೆಯನ್ನು ಸಂಗ್ರಹಾಲಯವನ್ನಾಗಿಯೇ ಉಳಿಸಿಕೊಳ್ಳಬೇಕು. ಕೇಂದ್ರ ಸರ್ಕಾರಕ್ಕಾಗಲಿ, ಬೇರೆ ಕಚೇರಿಗಾಗಲಿ ಪರಭಾರೆ ಮಾಡಬಾರದು’ ಎಂದು ನಿವೃತ್ತ ಕುಲಪತಿ ಪ್ರೊ.ಜೆ.ಶಶಿಧರ್ ಪ್ರಸಾದ್ ಒತ್ತಾಯಿಸಿದರು.

‘ಆ ಕಟ್ಟಡವನ್ನು ಶಾಸ್ತ್ರೀಯ ಕನ್ನಡ ಉತ್ಕೃಷ್ಟ ಸಂಸ್ಥೆಯ ಕಚೇರಿಗಾಗಿ ನೀಡಲು ಮುಂದಾಗಿರುವುದು ಸರಿಯಲ್ಲ. ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಎಚ್ಚರಿಕೆ ನೀಡಿದರು.

ಮುಂದುವರಿಸಬೇಕು:‘ಕಟ್ಟಡವನ್ನು ವಿ.ವಿಯಿಂದಲೇ ದುರಸ್ತಿ ಮಾಡಿ ನಿರ್ವಹಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರಿಂದ ಶಿಥಿಲಾವಸ್ಥೆ ತಲುಪಿದೆ. ದುರಸ್ತಿಗೆ ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಗುತ್ತಿಗೆಗೆ ಕೊಡಲು ನಿರ್ಧರಿಸಲಾಗಿದೆ. 30 ವರ್ಷಗಳವರೆಗೆ ಗುತ್ತಿಗೆಗೆ ಕೊಟ್ಟರೆ ಅದು ವಾಪಸ್ ದೊರೆಯುವುದಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಅಲ್ಲಿ ಜಾನಪದ ವಸ್ತುಸಂಗ್ರಹಾಲಯವಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಒತ್ತಾಯಿಸಿದರು.

‘ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸಲು ವಿ.ವಿ ಬಳಿ ಹಣವಿದೆ. ಜಯಲಕ್ಷ್ಮಿವಿಲಾಸ ಅರಮನೆ ಕಟ್ಟಡ ನಿರ್ವಹಣೆಗೆ ಹಣವಿಲ್ಲದೇ?’ ಎಂದು ಕೇಳಿದರು.

ಸರಿಯಲ್ಲ:ಮೈಸೂರು ವಿ.ವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ಕೆ.ಮಹದೇವ್ ಮಾತನಾಡಿ, ‘2001ರಲ್ಲಿ ಇನ್ಫೊಸಿಸ್‌ನ ಸುಧಾ ಮೂರ್ತಿ ₹ 1.7 ಕೋಟಿ ವೆಚ್ಚದಲ್ಲಿ ಜಯಲಕ್ಷ್ಮಿವಿಲಾಸ ಅರಮನೆಯನ್ನು ನವೀಕರಿಸಿಕೊಟ್ಟಿದ್ದರು. ಅಲ್ಲಿ ಜಾನಪದ ವಸ್ತುಸಂಗ್ರಹಾಲಯವನ್ನು ನಡೆಸಿಕೊಂಡು ಹೋಗಬೇಕು ಮತ್ತು ಸಾರ್ವಜನಿಕರ ವೀಕ್ಷಣೆಗೆ ಉಚಿತವಾಗಿ ಪ್ರವೇಶ ಕೊಡಬೇಕೆಂದು ಎಂಒಯು ಮಾಡಿಕೊಳ್ಳಲಾಗಿತ್ತು. ಆದರೆ, ಈಗ ಅದನ್ನು ಗುತ್ತಿಗೆಗೆ ಕೊಡಲು ಯೋಜಿಸಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯವು ಕೂಡಲೇ ತನ್ನ ನಿರ್ಧಾರ ಬದಲಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ತಿಳಿಸಿದರು.

ಕ್ರಮ ವಹಿಸಬೇಕು:ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ಮಾತನಾಡಿ, ‘ಮಾನಸ ಗಂಗೋತ್ರಿಗೆ ಮುಕುಟದಂತಿರುವ ಜಯಲಕ್ಷ್ಮಿವಿಲಾಸ ಅರಮನೆಯನ್ನು ಮೈಸೂರು ವಿಶ್ವವಿದ್ಯಾಲಯ ಹರಾಜು ಹಾಕುತ್ತಿದೆ. ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ದುರಸ್ತಿಪಡಿಸಲಾಗದೆ, ಕೇಂದ್ರ ಸರ್ಕಾರಕ್ಕೆ ನೀಡಲು ಹುನ್ನಾರ ನಡೆಸಿದೆ’ ಎಂದು ದೂರಿದರು.

‘ವಿ.ವಿಯು ಸರ್ಕಾರದಿಂದ ಹಣ ಪಡೆದು ಕಟ್ಟಡ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಜನರಲ್ಲಿ ಭಿಕ್ಷೆ ಬೇಡಿ, ಚಂದಾ ಎತ್ತಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

ಪರಿಸರ ಹೋರಾಟಗಾರ್ತಿ ಭಾನು ಮೋಹನ್, ಮುಖಂಡ ಅರವಿಂದ ಶರ್ಮ, ಕೆಆರ್‌ಎಸ್ ಪಕ್ಷದ ಸೋಮಶೇಖರ್, ಮಾ.ಸ.ಪ್ರವೀಣ್, ನಾಗರಾಜು, ವಿಜಯ್ ಕುಮಾರ್, ರವಿಕುಮಾರ್, ಮಹೆದೇವಪ್ಪ ಇದ್ದರು.

ಪ್ರತಿಕ್ರಿಯೆಗೆ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.