ADVERTISEMENT

ಹುಣಸೂರು: ಭತ್ತ, ತರಕಾರಿ ಬೆಳೆದ ವಿದ್ಯಾರ್ಥಿಗಳು

ಕೋವಿಡ್‌ ಸಂದರ್ಭದಲ್ಲಿ ದೇವಗಳ್ಳಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 21:08 IST
Last Updated 30 ನವೆಂಬರ್ 2020, 21:08 IST
ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರು ಮಾದರಿ ಭತ್ತದ ಗದ್ದೆ ನಿರ್ಮಿಸಿ ಭತ್ತ ನಾಟಿ ಮಾಡಿದ್ದು
ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರು ಮಾದರಿ ಭತ್ತದ ಗದ್ದೆ ನಿರ್ಮಿಸಿ ಭತ್ತ ನಾಟಿ ಮಾಡಿದ್ದು   

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಕೃಷಿಯನ್ನು ಒಂದು ಪಠ್ಯವಾಗಿ ಸ್ವೀಕರಿಸಿ ಮಾದರಿಯಾಗಿದ್ದಾರೆ.

ಮಾದರಿ ಗದ್ದೆ ನಿರ್ಮಿಸಿ, ಭತ್ತ ನಾಟಿಮಾಡಿದ್ದಾರೆ. ಜೊತೆಗೆ ರಾಗಿ, ತರಕಾರಿ ಬೆಳೆಯುವ ಸಾಹಸ ಕೂಡ ಮಾಡಿದ್ದಾರೆ. ಶಾಲೆಯ 20 ಗುಂಟೆ ಭೂಮಿಯಲ್ಲಿ ನೆಟ್ಟ ಸಸಿ, ಮಾಡಿದ ಬಿತ್ತನೆಗೆ ಕೋವಿಡ್‌ ಪಿಡುಗಿನ ರಜೆ‌ ಸಮಯದಲ್ಲಿ ನಿತ್ಯ ಶಾಲೆಗೆ ಹಾಜರಾಗಿ, ನೀರುಣಿಸಿದ್ದಾರೆ. ವಿದ್ಯಾರ್ಥಿಗಳು ತಂಡವಾಗಿ ಕೆಲಸ ಹಂಚಿಕೊಂಡು, ಬೆಳೆಯನ್ನು ಪೋಷಿಸಿದ್ದಾರೆ.

ಭತ್ತ ಕೃಷಿಗೆ ಆಸಕ್ತಿ ತೋರಿದ ವಿದ್ಯಾರ್ಥಿಗಳಾದ ಕಿರಣ್, ಕಿಶೋರ್, ಪವನ್, ಅರವಿಂದ್, ಲಿಖಿತ್, ದರ್ಶನ್ ಅವರು ಕೊಳವೆ ಬಾವಿ ನೀರನ್ನು ಹರಿಸಿ, ಭತ್ತದ ಪೈರು ನಾಟಿ ಮಾಡಿ, ನಿತ್ಯ ನಿರ್ವಹಣೆ ಮಾಡಿದ್ದು, ಸಾವಯವ ಭತ್ತ ಈಗ ಕಟಾವಿಗೆ ಬಂದಿದೆ.

ADVERTISEMENT

‘ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳು ರೈತಾಪಿ ಕುಟುಂಬದ ಹಿನ್ನೆಲೆಯಿಂದಬಂದರೂಮಕ್ಕಳಲ್ಲಿ ಕೃಷಿ ಆಸಕ್ತಿ ಗರಿಗೆದರಿಸುವ ಕೆಲಸ ಶೈಕ್ಷಣಿಕ ಚಟುವಟಿಕೆಯಿಂದಲೇ ಆಗಬೇಕು’ ಎನ್ನುತ್ತಾರೆ ವಿಜ್ಞಾನ ಶಿಕ್ಷಕಿ ಶಶಿಕಲಾ.

‘ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಕೃಷಿ ನಂಟು ಬೆಸೆದರೆ, ಕೃಷಿ ಪ್ರೀತಿಸುವ ಮನಸ್ಸು ಹುಟ್ಟು ಹಾಕಬಹುದು. ಯುವ ಸಮೂಹ ಉದ್ಯೋಗಕ್ಕಾಗಿ ನಗರಾಭಿಮುಖರಾಗುವುದನ್ನು ತಪ್ಪಿಸಬಹುದು’ ಎಂಬುದು ಅವರ ಅನಿಸಿಕೆ.

ಹನಿ ನೀರಾವರಿ ಮುಖಾಂತರ ಮರಗೆಣಸು ಬೆಳೆದಿದ್ದಾರೆ. ತರಕಾರಿ, ಬಾಳೆ ಹಾಗೂ ಹೂವಿನ ಪುಟ್ಟ ತೋಟ ಮಾಡಿದ್ದಾರೆ. ಶಾಲಾ ಆವರಣವನ್ನೂ ಹಸಿರಾಗಿಸಿದ್ದಾರೆ.ಈ ಎಲ್ಲದರ ನಡುವೆ ಈ ಮಕ್ಕಳು ಆನ್‌ಲೈನ್‌ ಪಾಠಕ್ಕೂ ಹಾಜರಾಗುತ್ತಿದ್ದಾರೆ.

***

ಶಿಕ್ಷಣದಲ್ಲಿ ಕೃಷಿ ವಿಷಯ ಪಠ್ಯವನ್ನಾಗಿಸಿ ಶಾಲೆಯಿಂದ ಪದವಿವರೆಗೂ ಜಾರಿಗೊಳಿಸುವುದರಿಂದ ವೃತ್ತಿಪರ ಕೃಷಿ ಕೌಶಲ್ಯತೆ ಮೈಗೂಡಿಸಲು ಸ್ಪೂರ್ತಿ ಆಗಲಿದೆ. ದೇವಗಳ್ಳಿ ಶಾಲೆ ಮಕ್ಕಳು ಕೃಷಿ ಚಟುವಟಿಕೆ ಪ್ರಸಂಶನೀಯ.

-ಡಾ.ಪುಷ್ಪ ಅಮರನಾಥ್ ಜಿ.ಪ.ಸದಸ್ಯೆ

***

ವ್ಯವಸಾಯ ಮೂಲ ಶಿಕ್ಷಣದ ಭಾಗವಾಗಬೇಕು ಹೀಗಾದಲ್ಲಿ ಯುವಕರಿಗೆ ವೃತ್ತಿಪರ ಜೀವನಕ್ಕೆ ಅಡಿಪಾಯ ಆಗಲಿದೆ.

-ನಾಗರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.