
ಪಿರಿಯಾಪಟ್ಟಣ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯರುವ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ 32ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ನಡೆಯಿತು.
ದೇವಸ್ಥಾನದ ಮುಖ್ಯ ಅರ್ಚಕ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ, ಮುತ್ತುರಾಯಸ್ವಾಮಿ ಚಾರಿಟಬಲ್ ಟ್ರಸ್ಟ್ ಸೇವಾ ಸಮಿತಿಯಿಂದ ರಾತ್ರಿಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 6.30ಕ್ಕೆ ಗೋಧೂಳಿ ಲಗ್ನದಲ್ಲಿ ಹೊಳೆಮಜ್ಜನ ಸೇವೆ, ಗಣಪತಿಹೋಮ, ನವಗ್ರಹಹೋಮ, ಶಾಂತಿಹೋಮ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿತರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದವರು ಹಾಗೂ ಕೊಡಗು, ಮೈಸೂರು, ಬೆಂಗಳೂರಿನಿಂದ ಅಪಾರ ಸಂಖ್ಯೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು, ಸಾವಿರಾರು ಜನರು ಒಂದೇ ಸಮಯದಲ್ಲಿ ಜಾತ್ರೆಗೆ ಬಂದ ಕಾರಣ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಯಿತು.
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ, ಮಾಜಿ ಶಾಸಕ ಕೆ.ಮಹದೇವ್, ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ ತಹಶೀಲ್ದಾರ್ ವಿನೋದ್ ಕುಮಾರ್, ಇನ್‌ಸ್ಪೆಕ್ಟರ್ ಗೋವಿಂದ್ ರಾಜು, ಸಮಿತಿಯ ಕಾರ್ಯದರ್ಶಿ ಪಾಪಣ್ಣ, ಸದಸ್ಯರಾದ ಶ್ರೀನಿವಾಸ್, ಶಿವರಾಜ್, ಕಾಂತರಾಜು, ಕೃಷ್ಣೆಗೌಡ, ರಾಮೇಗೌಡ, ಸುರೇಶ್, ರಮೇಶ್, ಕುಮಾರ, ವಿ.ಎಸ್.ರಾಮಕೃಷ್ಣ, ಶಿವಣ್ಣ, ರಘು, ಮುತ್ತುರಾಜು, ನವೀನ್, ಸುಬ್ರಮಣಿ, ಸತೀಶ, ಪ್ರಭು ಕುಮಾರ್, ರಾಮಕೃಷ್ಣ, ಅರವಿಂದ, ನಂದಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ಭಾಗವಹಿಸಿದ್ದರು.