ADVERTISEMENT

‘ಪಿಎಂ–ಸೂರ್ಯ ಘರ್‌’ಗೆ ರಾಜ್ಯದ ನಿರಾಸಕ್ತಿ: ಸಂಸದ ಯದುವೀರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 8:09 IST
Last Updated 9 ಜನವರಿ 2026, 8:09 IST
<div class="paragraphs"><p>ಮೈಸೂರಿನ ಸಿದ್ಧಾರ್ಥ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ‘ಪಿಎಂ–ಸೂರ್ಯ ಘರ್‌ ಯೋಜನೆ’ಯ ಜಾಗೃತಿ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಕೆ.ಟಿ. ಸುರೇಶ, ಸಿ. ಬಸವೇಗೌಡ ಹಾಗೂ ಸಿ.ಎನ್. ನರಸಿಂಹನ್ ಭಾಗವಹಿಸಿದ್ದರು</p></div>

ಮೈಸೂರಿನ ಸಿದ್ಧಾರ್ಥ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ‘ಪಿಎಂ–ಸೂರ್ಯ ಘರ್‌ ಯೋಜನೆ’ಯ ಜಾಗೃತಿ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಕೆ.ಟಿ. ಸುರೇಶ, ಸಿ. ಬಸವೇಗೌಡ ಹಾಗೂ ಸಿ.ಎನ್. ನರಸಿಂಹನ್ ಭಾಗವಹಿಸಿದ್ದರು

   

ಪ್ರಜಾವಾಣಿ ಚಿತ್ರ

ಮೈಸೂರು: ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪಿಎಂ–ಸೂರ್ಯ ಘರ್‌’ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತೀವ್ರ ನಿರಾಸಕ್ತಿ ತೋರುತ್ತಿದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು.

ADVERTISEMENT

ನಗರದ ಸಿದ್ಧಾರ್ಥ ಹೋಟೆಲ್‌ನಲ್ಲಿ ಶುಕ್ರವಾರ ಐಎಸ್‌ಎ (ಇಂಡಿಯನ್‌ ಸೋಲಾರ್‌ ಅಸೋಸಿಯೇಷನ್‌) ವತಿಯಿಂದ ಆಯೋಜಿಸಿದ್ದ ‘ಸೌರವಿದ್ಯುತ್‌ ಚಾವಣಿ ಅಭಿವೃದ್ಧಿದಾರರ ಸಭೆ’ ಹಾಗೂ ‘ಪಿಎಂ–ಸೂರ್ಯ ಘರ್ ಯೋಜನೆ’ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘2024ರ ಫೆಬ್ರುವರಿಯಲ್ಲಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.‌ ಇದರಲ್ಲಿ ಘಟಕ ಅಳವಡಿಕೆ ಮಾಡಿಕೊಳ್ಳುವವರಿಗೆ ಕೇಂದ್ರದಿಂದ ಇಂತಿಷ್ಟು ಸಹಾಯಧನ ನೀಡಲಾಗುತ್ತದೆ. ವಿದ್ಯುತ್ ಸ್ವಾವಲಂಬನೆಗೆ ಈ ಕ್ರಮ ಸಹಕಾರಿಯಾಗಿದೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗಲಿದೆ ಅಥವಾ ಶೂನ್ಯಕ್ಕೇ ತರಬಹುದಾಗಿದೆ’ ಎಂದು ತಿಳಿಸಿದರು.

ಪ್ರೋತ್ಸಾಹ ಕೊಡಬೇಕು:

‘ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗಾಗಿ ಪೂರಕವಾದ ಯೋಜನೆಗಳನ್ನು ನಮ್ಮ ಸರ್ಕಾರ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಪ್ರೋತ್ಸಾಹ ಕೊಡಬೇಕಾಗಿದೆ. ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯ ತಡೆಗೆ ಇಂತಹ ಕ್ರಮಗಳು ಸಹಕಾರಿಯಾಗಿವೆ. ಇದಕ್ಕೂ ರಾಜ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ’ ಎಂದರು.

‘ಕರ್ನಾಟಕದಲ್ಲಿ ಪಿಎಂ–ಸೂರ್ಯ ಘರ್‌ ಯೋಜನೆ ಕುಂಟುತ್ತಿದೆ. ಇಲ್ಲಿನ ಅಧಿಕಾರಿಗಳು ಸಹಕರಿಸುತ್ತಿಲ್ಲ. ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಕರ್ನಾಟಕದಲ್ಲಿ 2 ಲಕ್ಷ ಅರ್ಜಿಗಳು ಬಂದಿದ್ದರೆ, ಅಳವಡಿಕೆಯಾಗಿರುವುದು 10ಸಾವಿರ ಮಾತ್ರವೇ. ಇಂತಹ ಒಳ್ಳೆಯ ಯೋಜನೆ ಜನರಿಗೆ ತಲುಪುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಅಸಹಕಾರವೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು.

ಹೆಚ್ಚು ದಿನ ಇರುವುದೇ ಸಾಧನೆಯಲ್ಲ:

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದೀರ್ಘಾವಧಿಗೆ ಇದ್ದಾರೆ ಎಂದೆಲ್ಲಾ ಪ್ರಚಾರವಾಗುತ್ತಿದೆ. ಹೆಚ್ಚು ದಿನ ಅಧಿಕಾರದಲ್ಲಿ ‌ಇರುವುದೇ ಸಾಧನೆಯಲ್ಲ. ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು’ ಎಂದರು.

‘ಅಧಿಕಾರಿಗಳು ಇಂತಹ ಕಾರ್ಯಕ್ರಮಕ್ಕೆ ಬಾರದಿರುವುದೂ ಸರಿಯಲ್ಲ. ಅಧಿಕಾರಿಗಳು ರಾಜಕೀಯ ಮಾಡದೇ ಕೆಲಸ ನಿರ್ವಹಿಸಬೇಕು. ಅರ್ಧ ಗಂಟೆ ಸಮಯ ಮಾಡಿಕೊಂಡು ಪಾಲ್ಗೊಳ್ಳಬಹುದಿತ್ತು. ಹಲವು ಬಾರಿ ಹೇಳಿದರೂ ಜಿಲ್ಲೆಯಲ್ಲಿ ಯೋಜನೆಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ. ಮುಂದಿನ ಪೀಳಿಗೆಗೆ ಬೇಕಾಗಿರುವ ಯೋಜನೆ ‌ಇದು. ನಮ್ಮ‌ ಮನೆಗೆ ನಾವೇ ವಿದ್ಯುತ್ ಉತ್ಪಾದಿಸಿ ವಿಕಸಿತ ಭಾರತಕ್ಕಾಗಿ ಕೊಡುಗೆ ನೀಡಬಹುದಾದ ಕಾರ್ಯಕ್ರಮ’ ಎಂದು ಹೇಳಿದರು.

ರಾಜಕೀಯ ಮಾಡಬಾರದು:

ಐಎಸ್‌ಎ ಅಧ್ಯಕ್ಷ, ಮಾಜಿ ಸಂಸದ ಸಿ.ನರಸಿಂಹನ್ ಮಾತನಾಡಿ, ‘ಮನೆಗಳು, ಕಟ್ಟಡಗಳ ಮೇಲೆ ಸೌರ ವಿದ್ಯುತ್‌ ಚಾವಣಿ ಹಾಕಿಸಿಕೊಳ್ಳಲು ಎಲ್ಲರನ್ನೂ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಪಿಎಂ ಸೂರ್ಯ ಘರ್ ಯೋಜನೆಯ ಲಾಭವನ್ನು ಜನರು ಪಡೆದುಕೊಳ್ಳುವಂತಾಗಬೇಕು. ರಾಜ್ಯ ಸರ್ಕಾರಗಳು ರಾಜಕೀಯ ಮಾಡದೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನವೀಕರಿಸಬಹುದಾದ ಇಂಧನ ಬಳಕೆ ಪ್ರಮಾಣ ಜಾಸ್ತಿಯಾಗಿದೆ. ಜಾಗೃತಿಯೂ ಹೆಚ್ಚುತ್ತಿದೆ. 2023ರ ವೇಳೆಗೆ ದೇಶದಲ್ಲಿ ಒಟ್ಟಾರೆ ಇಂಧನ ಬಳಕೆಯಲ್ಲಿ ನವೀಕರಿಸಬಹುದಾದ ಇಂಧನದ ಪ್ರಮಾಣ ಶೇ 50ರಷ್ಟು ಆಗಿರಬೇಕು ಎಂದು ಆಶಿಸಲಾಗಿದೆ. ಇದಕ್ಕೆ ಪೂರಕವಾಗಿ ಉಚಿತವಾಗಿ ಸಿಗುವ ಸೌರಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಕಾರ್ಯ ರಾಜ್ಯ ಸರ್ಕಾರಗಳಿಂದ ಆಗಬೇಕು. ಜನರು ಸರ್ಕಾರದಿಂದ ಸಹಾಯಧನ, ಬ್ಯಾಂಕ್‌ಗಳಿಂದ ಸೌಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಐಎಸ್‌ಎ ಪದಾಧಿಕಾರಿಗಳಾದ ರವೀಂದ್ರನಾಥ ರೆಡ್ಡಿ, ಕೆ.ಟಿ. ಸುರೇಶ, ಸಿ. ಬಸವೇಗೌಡ, ಪ್ರೊ.ದಾಸನ್, ಶ್ವೇತಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.