ADVERTISEMENT

ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ್: ಕುಂಟುತ್ತಿದೆ ‘ಸೂರು’ ಕಲ್ಪಿಸುವ ಕಾರ್ಯ

ಎಂ.ಮಹೇಶ
Published 28 ಜುಲೈ 2025, 0:18 IST
Last Updated 28 ಜುಲೈ 2025, 0:18 IST
   

ಮೈಸೂರು: ಗ್ರಾಮೀಣ ವಸತಿರಹಿತರಿಗೆ ‘ಸೂರು’ ಕಲ್ಪಿಸುವ ಉದ್ದೇಶವುಳ್ಳ, ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ್ (ಪಿಎಂಎವೈ–ಜಿ) ರಾಜ್ಯದಲ್ಲಿ ಕುಂಟುತ್ತಿದೆ.

2024–25ನೇ ಸಾಲಿನಲ್ಲಿ 7.02 ಲಕ್ಷ ಗುರಿಯಲ್ಲಿ ಮಂಜೂರಾಗಿರುವುದು 2.62 ಲಕ್ಷ ಮಾತ್ರ. 4.40 ಲಕ್ಷ ಫಲಾನುಭವಿಗಳಿಗೆ ಮಂಜೂರಾತಿ ನೀಡಬೇಕಾಗಿದೆ.

ಯೋಜನೆಯಡಿ ಈವರೆಗೆ ಶೇ 37.33 ಮಾತ್ರ ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯು ಶೇ 64.39ರಷ್ಟು ಪ್ರಗತಿ ಸಾಧಿಸಿ ಅನುಷ್ಠಾನದಲ್ಲಿ ಮೊದಲನೇ ಸ್ಥಾನದಲ್ಲಿದೆ. 20,908 ಮನೆಗಳ ಗುರಿಯ ಪೈಕಿ 13,462 ಮಂಜೂರಾಗಿದ್ದು, 7,466 ಮನೆಗಳನ್ನು ಮಂಜೂರಾತಿ ಬಾಕಿ ಇದೆ. ನಂತರದ ಸ್ಥಾನದಲ್ಲಿ ವಿಜಯನಗರ ಜಿಲ್ಲೆ ಇದ್ದು, ಶೇ 63.85 ಸಾಧನೆಯಾಗಿದೆ. ಉಳಿದ ಜಿಲ್ಲೆಗಳು ಶೇ 60ರಷ್ಟು ಗುರಿ ಸಾಧನೆಯನ್ನೂ ಮಾಡಿಲ್ಲ.

ADVERTISEMENT

ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ₹ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 1.75 ಲಕ್ಷ ಸಹಾಯಧನ ನೀಡಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 90 ದಿನ ಮಾನವ ದಿನಗಳನ್ನು ಬಳಸಿಕೊಳ್ಳಲು (ಕೆಲಸ ಮಾಡಿಸಿಕೊಳ್ಳಲು) ಎಲ್ಲ ವರ್ಗದವರಿಗೂ ಅವಕಾಶವಿದೆ. ಇದರಲ್ಲಿ ₹ 31,410 ಸಿಗುತ್ತದೆ. ಶೌಚಾಲಯ ನಿರ್ಮಾಣ ಸಹಾಯಧನಕ್ಕೆ ಅರ್ಹತೆ ಇದ್ದರೆ ಸಾಮಾನ್ಯ ವರ್ಗದವರಿಗೆ ₹ 12 ಸಾವಿರ ಹಾಗೂ ಪರಿಶಿಷ್ಟರಿಗೆ ₹20 ಸಾವಿರ ದೊರೆಯುತ್ತದೆ.

ವಸತಿರಹಿತ ಕುಟುಂಬಗಳು, ಭಿಕ್ಷುಕರು, ಸ್ವಚ್ಛತಾ ಸಿಬ್ಬಂದಿ, ಬುಡಕಟ್ಟು ಗುಂಪುಗಳು, ಜೀತವಿಮುಕ್ತಗೊಂಡ ಕುಟುಂಬಗಳು ‘ಪಿಎಂಎವೈ–ಜಿ’ ಫಲಾನುಭವಿಗಳಾಗಬಹುದು. ಶಿಥಿಲಗೊಂಡ ಚಿಕ್ಕ ಮನೆಯಲ್ಲಿರುವ ಕುಟುಂಬಗಳಿಗೆ ಮೂಲಸೌಕರ್ಯಗಳೊಂದಿಗೆ ‘ಪಕ್ಕಾ ಮನೆ’ ಕಟ್ಟಿಸಿಕೊಡಬಹುದು.

ಸ್ಥಳೀಯ ಸಂಸ್ಥೆಗಳ ಮೂಲಕ ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಅನುದಾನ ಅಲಭ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಯೋಜನೆಯು ಚುರುಕಾಗಿ ನಡೆಯುತ್ತಿಲ್ಲ. ಇದರಿಂದಾಗಿ ವಸತಿರಹಿತರಾದ ನೈಜ ಫಲಾನುಭವಿಗಳು ಮನೆಗಾಗಿ ಕಾಯುತ್ತಲೇ ಇದ್ದಾರೆ. 

ದರ ಹೆಚ್ಚು: ‘ಇಟ್ಟಿಗೆ, ಕಬ್ಬಿಣ, ಮರಳು, ಸಿಮೆಂಟ್‌ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ದರ ಜಾಸ್ತಿಯಾಗಿದ್ದು, ಯೋಜನೆಯ ಸಹಾಯಧನ ಬಹಳ ಕಡಿಮೆ ಎಂದು ಫಲಾನುಭವಿಗಳು ಉತ್ಸಾಹ ತೋರದಿರುವುದರಿಂದ ಯೋಜನೆ ಸಫಲವಾಗುತ್ತಿಲ್ಲ’ ಎಂಬ ಮಾತುಗಳೂ ಅಧಿಕಾರಿಗಳ ವಲಯದಲ್ಲಿದೆ. ಕಾರ್ಯಾದೇಶ ದೊರೆತವರಿಗೆ ಸಕಾಲಕ್ಕೆ ಕಂತು ಪಾವತಿಯಾಗದಿರುವುದೂ ವಿಳಂಬಕ್ಕೆ ಕಾರಣ’ ಎನ್ನಲಾಗುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಂಕಿ–ಅಂಶಗಳ ಪ್ರಕಾರ, ಉಡುಪಿ (ಶೇ 0.10) ಹಾಗೂ ಬೆಂಗಳೂರು (ಶೇ 0.06) ಕಳಪೆ ಸಾಧನೆ ಮಾಡಿರುವ ಜಿಲ್ಲೆಗಳು. ಅತಿ ಹೆಚ್ಚು ಮನೆಗಳ ನಿರ್ಮಾಣದ ಗುರಿ ನೀಡಿರುವುದು, ಬಹಳಷ್ಟು ದೊಡ್ಡ ವಿಸ್ತೀರ್ಣವನ್ನು ಹೊಂದಿರುವ ಬೆಳಗಾವಿಗೆ. ಅಲ್ಲಿಗೆ 74,139 ಗುರಿ ಕೊಡಲಾಗಿದ್ದು, ಅದರಲ್ಲಿ 30,947 ಮಾತ್ರವೇ ಮಂಜಾರಾಗಿ ನೀಡಲಾಗಿದೆ. 43,192 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಕೊಡುವುದು ಬಾಕಿ ಇದೆ.

ಪಿಎಂಎವೈ–ಜಿ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಹೆಚ್ಚಿನ ಫಲಾನುಭವಿಗಳು ಸಕಾಲದಲ್ಲಿ ಮನೆ ನಿರ್ಮಿಸಿಕೊಳ್ಳುವಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಸ್ಯುಕೇಶ್‌ಕುಮಾರ್‌ ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.