ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಪೋಸ್ಟಲ್ ತರಬೇತಿ ಸಂಸ್ಥೆಯ ನಿರ್ದೇಶಕರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಜ್ಞಾಪಕ ಪತ್ರ ಮತ್ತು ಒಡಂಬಡಿಕೆಗೆ ಶನಿವಾರ ಸಹಿ ಹಾಕಿದರು
ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಪೋಸ್ಟಲ್ ತರಬೇತಿ ಸಂಸ್ಥೆಯು ತರಬೇತಿ, ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಹಾಗೂ ನವೀನ ಮಾದರಿಯ ಕೋರ್ಸ್ ಅಭಿವೃದ್ಧಿಪಡಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಜ್ಞಾಪಕ ಪತ್ರ ಮತ್ತು ಒಡಂಬಡಿಕೆಗೆ ಶನಿವಾರ ಎರಡೂ ಸಂಸ್ಥೆಯ ನಿರ್ದೇಶಕರು ಸಹಿ ಹಾಕಿದರು.
ಪೊಲೀಸ್ ಅಕಾಡಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ಮಾತನಾಡಿ, ‘ಎರಡು ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಕೊಡುವುದಕ್ಕೆ ಈ ಒಡಂಬಡಿಕೆ ನಾಂದಿಯಾಗಲಿದೆ. ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಉತ್ತಮ ಅಭ್ಯಾಸಗಳ್ಳನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಅಭಿವೃದ್ಧಿಗೆ ಶ್ರಮಿಸಲಿವೆ’ ಎಂದರು.
‘ಅಂಚೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಸಂಬಂದಿಸಿದ ಸೈಬರ್ ಭದ್ರತೆ, ಬೆರಳಚ್ಚು ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ವಿಷಯಗಳ ಬಗ್ಗೆ ತಿಳಿದುಕೊಂಡರೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಅಂಚೆ ಇಲಾಖೆಗೆ ಸಂಬಂಧಿಸಿದ ಸಣ್ಣ ಹೂಡಿಕೆ ಅವಕಾಶಗಳು, ಹಣಕಾಸು ನಿರ್ವಹಣೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಷಯಗಳ ಮೇಲೆ ಪರಿಣತಿ ಹೊಂದಬಹುದಾಗಿದೆ’ ಎಂದು ಹೇಳಿದರು.
ಅಂಚೆ ತರಬೇತಿ ಸಂಸ್ಥೆ ನಿರ್ದೇಶಕ ಡಾ.ಆಶಿಶ್ ಸಿಂಗ್ ಠಾಕೂರ್ ಮಾತನಾಡಿದರು.
ಅಕಾಡೆಮಿಯ ಸಹಾಯಕ ನಿರ್ದೇಶಕರಾದದ ಎಚ್.ಎಸ್. ರೇಣುಕಾರಾಧ್ಯ, ಎನ್. ಸುದರ್ಶನ, ಎಸ್. ವೆಂಕಟೇಶ್, ಎಂ. ಕ್ರಾಂತಿರಾಜ್ ಒಡೆಯರ್, ಅಂಚೆ ತರಬೇತಿ ಸಂಸ್ಥೆ ಸಹಾಯಕ ನಿರ್ದೇಶಕರಾದ ಬಾಲರಾಜ್, ಶ್ರೀಧರ್, ಶ್ರದ್ಧಾ ಗೋಕರ್ಣ, ಮಂಜುನಾಥ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.