ADVERTISEMENT

’ಮಕ್ಕಳಿಗಾಗಿ ಅಂಬೇಡ್ಕರ್’ ಕಮ್ಮಟ | ಮಕ್ಕಳ ನಡುವೆ ಮೂಡಿದ ಸಮಾನತೆಯ ಶಿಲ್ಪಿ

‘ಪ್ರಜಾವಾಣಿ –ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ‘ಮಕ್ಕಳಿಗಾಗಿ ಅಂಬೇಡ್ಕರ್’ ಕಮ್ಮಟ, ಮಹಾಬೆಳಕು ಸಂಸ್ಥೆ ಸಹಯೋಗ

​ಪ್ರಜಾವಾಣಿ ವಾರ್ತೆ
Published 26 ಮೇ 2025, 5:45 IST
Last Updated 26 ಮೇ 2025, 5:45 IST
<div class="paragraphs"><p>ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌, ‘ಮಹಾಬೆಳಕು ಸಂಸ್ಥೆ’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಮಕ್ಕಳಿಗಾಗಿ ಅಂಬೇಡ್ಕರ್’ ಕಮ್ಮಟದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.</p></div>

ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌, ‘ಮಹಾಬೆಳಕು ಸಂಸ್ಥೆ’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಮಕ್ಕಳಿಗಾಗಿ ಅಂಬೇಡ್ಕರ್’ ಕಮ್ಮಟದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

   

ಮೈಸೂರು: ಅಲ್ಲಿ ಚಿಣ್ಣರು ದಿನವಿಡೀ ಬಾಬಾ ಸಾಹೇಬರ ಜೀವನಗಾಥೆಯ ಉಪನ್ಯಾಸಗಳಿಗೆ ಕಿವಿಯಾದರು. ಸಾಕ್ಷ್ಯಚಿತ್ರ, ನಾಟಕ ನೋಡಿ, ಹಾಡು ಕೇಳಿ ಅಂಬೇಡ್ಕರ್ ಎಂಬ ಅರಿವಿನ ಬೆಳಕನ್ನು ಎದೆಯೊಳಗೆ ಇಳಿಸಿಕೊಂಡರು. ಕೊನೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಬೆಳಿಗ್ಗೆಯಿಂದ ಮನದಲ್ಲಿ ಚಿತ್ರಿಸಿಕೊಂಡಿದ್ದ ಬೆಳಕನ್ನು ರೂಪರೇಖೆಗಳಲ್ಲಿ ಹಾಯಿಸಿದರು.

ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌, ‘ಮಹಾಬೆಳಕು ಸಂಸ್ಥೆ’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಮಕ್ಕಳಿಗಾಗಿ ಅಂಬೇಡ್ಕರ್’ ಒಂದು ದಿನ ಕಮ್ಮಟವು 50ಕ್ಕೂ ಹೆಚ್ಚು ಚಿಣ್ಣರ ಭಾವಾಭಿವ್ಯಕ್ತಿಗೆ ಸಾಕ್ಷಿಯಾಯಿತು. 

ADVERTISEMENT

‘ಜೈ ಭೀಮ್‌’ ಗೀತೆ ಹಾಡಿದ ಮಕ್ಕಳೇ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಅಂಬೇಡ್ಕರ್ ವೇಷದಲ್ಲಿ ಬಂದಿದ್ದ ಪುಟಾಣಿ ಅರ್ಜುನ್‌ ‘ಸಂವಿಧಾನದ ಪ್ರಸ್ತಾವನೆ’ ಹೇಳಿದಂತೆ ಎಲ್ಲರೂ ಪುನರುಚ್ಚರಿಸಿದರು.

ಶೇಷಣ್ಣ, ಚಲುವರಾಜಸ್ವಾಮಿ, ಕೃಷ್ಣಮೂರ್ತಿ ಅವರು ‘ಮಹಾರಾಷ್ಟ್ರದ ಹಣತೆ.. ನೀನೊಂದು ಮುಗಿಯದ ಚರಿತೆ’ ಗೀತೆಯನ್ನು ಹಾಡಿ ಮೈನವಿರೇಳಿಸಿದರು. ಗಾಯಕ ರವಿಕುಮಾರ್ ಅವರು ಅಂಬೇಡ್ಕರ್ ಗೀತೆ ಹಾಡಿದರು. ‘ವೀಸಾ ನಿರೀಕ್ಷಣೆಯಲ್ಲಿ’ ಬೀದಿನಾಟಕವೂ ಎಲ್ಲರ ಸೆಳೆಯಿತು.

ರಾಮಯ್ಯ ಚಾಲನೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಮ್ಮಟಕ್ಕೆ ಚಾಲನೆ ನೀಡಿ, ‘ಭಾರತವು ಬೌದ್ಧಿಕ ದಾರಿದ್ರ್ಯದಲ್ಲಿ ಬದುಕುತ್ತಿದ್ದು, ಅಂಬೇಡ್ಕರ್ ಆಶಯಗಳು ಅನಿವಾರ್ಯವಾಗಿವೆ. ಅವರ ಬರಹಗಳ ಸಮಕಾಲೀನ ಆಲೋಚನೆಗಳಿಗೆ ದೊಡ್ಡದೊಂದು ವಿಶ್ವವಿದ್ಯಾಲಯವೇ ಆಗಬೇಕಿದೆ’ ಎಂದರು.

‘1925ಕ್ಕೂ ಮೊದಲೇ ಅಂಬೇಡ್ಕರ್ ಚಳವಳಿ ಆರಂಭಿಸಿದರು. ಅಲ್ಲಿಂದ ನೂರು ವರ್ಷ ದೇಶವೇಕೆ ಅವರನ್ನು ಕತ್ತಲಲ್ಲಿರಿಸಿತ್ತು ಎಂಬುದನ್ನು ಅರಿಯಬೇಕಿದೆ. 1970–90ರ ದಶಕದವರೆಗೂ ಬಾಬಾ ಸಾಹೇಬರ ನೆನಪು ಭಾರತದೊಳಗೆ ಗೈರಾಗಿತ್ತು. ಭಾರತ ಅವರ ಹಿಂದೆ ನಿಲ್ಲದಿರುವುದು ಚರಿತ್ರೆಯ ದೊಡ್ಡ ವ್ಯಂಗ್ಯ’ ಎಂದು ವಿಷಾದಿಸಿದರು.

‘1976ರವರೆಗೂ ಅವರ ಬರಹ ಲಭ್ಯವಿರಲಿಲ್ಲ. ಪರಿನಿರ್ವಾಣದ ಬರಹಗಳನ್ನು 21 ಪೆಟ್ಟಿಗೆಗಳಲ್ಲಿ ತುಂಬಲಾಗಿತ್ತು. ಅವರ ಅನುಯಾಯಿಗಳು ಏನೂ ಮಾಡಿರಲಿಲ್ಲ. ಬನ್ಸಾಲಿ ಎಂಬ ವಕೀಲ ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ಬಳಿಕ, ಅವರ ಬರಹಗಳ ಪ್ರಕಟಣೆಗೆ ವಸಂತ್ ಮೂನ್ ಸಮಿತಿ ರಚನೆಯಾಯಿತು. 1979ರಲ್ಲಿ ಮೊದಲ ಸಂಪುಟ ಬಂತು’ ಎಂದು ಸ್ಮರಿಸಿದರು. 

‘ಮಹಾಬೆಳಕು’ ಸಂಸ್ಥೆಯ ಕಾತ್ಯಾಯಿನಿ ಯಶೋಮಿತ್ರ ಮಕ್ಕಳಿಗಾಗಿ ರಸಪ್ರಶ್ನೆ ನಡೆಸಿಕೊಟ್ಟು, ಕಮ್ಮಟವನ್ನು ನಿರ್ವಹಿಸಿದರು. ಅವರ ನಿರ್ದೇಶನದಲ್ಲಿ ಮಕ್ಕಳು ಕಿರುನಾಟಕವನ್ನು ಅಭಿನಯಿಸಿದರು. ರಂಗಶಿಕ್ಷಕಿ ಶ್ರುತಿ ತಿಪಟೂರು ಗುಂಪು ಚಟುವಟಿಕೆಗಳ ಮೂಲಕ ಮಕ್ಕಳನ್ನು ಉತ್ತೇಜಿಸಿದರು.

ಶ್ರೀಸುಮತಿನಾಥ್ ಜೈನ್‌ ನವಯುವಕ್‌ ಮಂಡಳಿ, ಪರಿವರ್ತನಾ ಫೌಂಡೇಶನ್‌ ಮೈಸೂರು, ಲಯನ್ಸ್‌ ಕ್ಲಬ್ ಆಫ್‌ ಮೈಸೂರು– ‍ಪರಿವರ್ತನ ಸಂಸ್ಥೆಗಳು ಸಹಕಾರ ನೀಡಿದವು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಪರಿವರ್ತನಾ ಫೌಂಡೇಶನ್‌ನ ಕೃಷ್ಣಮೂರ್ತಿ ಚಮರಂ, ಆರ್.ಮಂಗಳಾ, ಸಿ.ಎಸ್.ಪೂರ್ಣಿಮಾ, ಹರ್ಷಕುಮಾರ್ ಕುಗ್ವೆ, ರಾಘವೇಂದ್ರ ಅಪುರಾ, ಎಲ್. ಶಿವಲಿಂಗಪ್ಪ, ಭೂ ವಿಜ್ಞಾನಿ ಎಂ.ವೆಂಕಟಸ್ವಾಮಿ, ಹೋರಾಟಗಾರ ಅಹಿಂದ ಜವರಪ್ಪ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್. ಪ್ರಕಾಶ್ ಪಾಲ್ಗೊಂಡಿದ್ದರು.

ಚಿಣ್ಣರು ಪ್ರದರ್ಶಿಸಿದ ‘ವೀಸಾ ನಿರೀಕ್ಷಣೆಯಲ್ಲಿ’ ಬೀದಿನಾಟಕ
ಚಿತ್ರಕಲಾ ಸ್ಪರ್ಧೆ ವಿಜೇತರಾದ ಕೆ.ಆರ್. ಧನುಷ್‌ ರಾಜ್‌ (ಪ್ರಥಮ) ವಿಷ್ಣು ವೈಭವ್‌ (ದ್ವಿತೀಯ) ಹಾಗೂ ಸುಧೀಕ್ಷಾ (ತೃತೀಯ)
ಶೀತಲ್
ನೀರಜ್
ಯಕ್ಷ ಯೋಗೇಂದ್ರ
ಮಹದೇವ್
ಜ್ಞಾನಸಿರಿ
ಅಂಬೇಡ್ಕರ್‌ ಜೀವನ ಕುರಿತ ರಸಪ್ರಶ್ನೆ ಬಹುಮಾನ ಪುಸ್ತಕ ಗಿಟ್ಟಿಸಿದ ಪುಟಾಣಿಗಳು | ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಣೆ

ಚಿಣ್ಣರೇನಂದರು?

ಅವರಂತೆ ಓದುವ ಆಸೆ

ಬಾಬಾ ಸಾಹೇಬರು ನಮಗಾಗಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಕಾರ್ಯಕ್ರಮದಿಂದ ಗೊತ್ತಾಯಿತು. ಚಿತ್ರದಲ್ಲಿ ಮಾತ್ರ ನೋಡಿದ್ದೆ. ನಾನೂ ಅವರಂತೆ ಓದಬೇಕು ಎಂಬ ಆಸೆಯಾಗಿದೆ
ಎಸ್.ಶೀತಲ್, 4ನೇ ತರಗತಿ, ಮಹಾವೀರ್ ಜೈನ್ ವಿದ್ಯಾಲಯ

ಅವರೀಗ ನನ್ನ ಮಾರ್ಗದರ್ಶಕ

‘ಮಹಾನಾಯಕ’ ಟಿ.ವಿ ಧಾರವಾಹಿ ನೋಡುತ್ತಿದ್ದೆ. ಅಲ್ಲಿಂದಲೂ ಅವರೆಂದರೆ ಇಷ್ಟ. ಕಮ್ಮಟದಿಂದ ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡೆ. ಜ್ಞಾನದ ಜ್ಯೋತಿ ಎಂದು ಕರೆಯುವ ಅವರೀಗ ನನ್ನ ಮಾರ್ಗದರ್ಶಕ
ಬಿ.ನೀರಜ್, ಪ್ರಥಮ ಪಿಯು, ಜವಾಹರ ನವೋದಯ ವಿದ್ಯಾಲಯ, ಮಂಡ್ಯ

ಹೋರಾಟ ಇಷ್ಟ

ಚಿತ್ರಕಲೆ ಬರೆಯಲು ಬಂದೆ. ಮೊದಲೆಲ್ಲ ಮಹಿಳೆಯರು– ಮಕ್ಕಳಿಗೆ ಹಕ್ಕುಗಳು ಇರಲಿಲ್ಲ ಎಂಬುದು ಕಾರ್ಯಕ್ರಮದಿಂದ ಗೊತ್ತಾಯಿತು. ಚೆನ್ನಾಗಿ ಓದಿ, ಕಷ್ಟದಲ್ಲಿದ್ದವರಿಗೆ ಸೇವೆ ಮಾಡಬೇಕು.
ಯಕ್ಷ ಯೋಗೇಂದ್ರ, 5ನೇ ತರಗತಿ, ಆಚಾರ್ಯ ವಿದ್ಯಾಕುಲ, ಮೈಸೂರು

ಒಳ್ಳೆಯ ನಾಗರಿಕನಾಗುವ ಗುರಿ

ಅಂಬೇಡ್ಕರ್ ಜೀವನ ಕಥೆಯನ್ನೇ ಇಲ್ಲಿ ಕೇಳಿದೆವು. ಅವಮಾನ, ಕಷ್ಟದ ನಡುವೆಯೂ ಓದಿ, ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ದೇಶದ ಒಳ್ಳೆಯ ನಾಗರಿಕ ಆಗುವ ಗುರಿಯಿದೆ. ಜನರ ಹಕ್ಕುಗಳನ್ನು ಕಾಪಾಡುವೆ
ಮಹದೇವ್‌, 6ನೇ ತರಗತಿ, ಎಸ್‌ಜಿವಿಕೆ ಶಾಲೆ, ಕಡಕೊಳ

ಅವರೆಂದರೆ ಸ್ಫೂರ್ತಿ

ದೇಶದ ಜನರಿಗೆ ಉತ್ತಮ ಸಂವಿಧಾನ ಕೊಟ್ಟಿದ್ದಾರೆ. ಶಿಕ್ಷಣದ ಹಕ್ಕು ನೀಡಿದ್ದಾರೆ. ಸಾಕ್ಷ್ಯಚಿತ್ರ, ನಾಟಕ, ಉಪನ್ಯಾಸ ಎಲ್ಲವೂ ಚೆನ್ನಾಗಿತ್ತು. ದೇಶಪ್ರೇಮ ಹೆಚ್ಚಾಗಿದೆ. ಅವರಂತೆಯೇ ಓದುವೆ
ಜ್ಞಾನಸಿರಿ, ಪ್ರಥಮ ಪಿಯು, ಜ್ಞಾನೋದಯ ಪಿಯು ಕಾಲೇಜು

ಅರಿವು ನೀಡಿದವರು...

ಅಂಬೇಡ್ಕರ್ ಬಾಲ್ಯ ಜೀವನದ ಕುರಿತು ಆರ್.ಮಂಗಳಾ ಮಾತನಾಡಿ ಅಂಬೇಡ್ಕರ್ ಹುಟ್ಟಿದ ಸ್ಥಳ ಪೋಷಕರು ಬಾಲ್ಯ ಜೀವನದಲ್ಲಿ ಎದುರಿಸಿದ ಸಂಕಷ್ಟಗಳನ್ನು ವಿವರಿಸಿದರು. ಲೇಖಕ ಕೃಷ್ಣಮೂರ್ತಿ ಚಮರಂ ಅವರು ಬಾಬಾ ಸಾಹೇಬರ ಶಿಕ್ಷಣದ ಬಗ್ಗೆ ಪರಿಚಯಿಸಿದರು. ‘ಜ್ಯೋತಿಬಾಫುಲೆ ಸಾವಿತ್ರಿ ಬಾಫುಲೆ ದಂಪತಿಗಳು ದೇಶದ ಬಡ ಜನತೆಗೆ ಅಕ್ಷರ ನೀಡಿದ ತಂದೆ- ತಾಯಿಗಳು. ಅವರಿಂದಲೇ ಸಾರ್ವತ್ರಿಕ ಶಿಕ್ಷಣ ಸಿಗುವಂತಾಯಿತು. ಅಂಬೇಡ್ಕರ್ ಅವರು ಹಿಂಸೆ ಅವಮಾನದ ನಡುವೆಯೂ ಸಯ್ಯಾಜಿರಾವ್ ಗಾಯಕ್‌ವಾಡ್‌ ನೀಡಿದ ವಿದ್ಯಾರ್ಥಿ ವೇತನದ ನೆರವಿನಿಂದ ಉನ್ನತ ಶಿಕ್ಷಣ ಪಡೆದರು’ ಎಂದರು.  ಟಿ.ಪದ್ಮಶ್ರೀ ಅವರು ‘ಚೌಡಾರ್‌ ಕೆರೆ ಸತ್ಯಾಗ್ರಹ’ ‘ಮನುಸ್ಮೃತಿ ದಹನ’ ‘ಕಾಳಾರಾಮ ಮಂದಿರ ಪ್ರವೇಶ’ ಸೇರಿದಂತೆ ಹೋರಾಟದ ಜೀವನ ಕಟ್ಟಿಕೊಟ್ಟರು. ‘ಅಂಬೇಡ್ಕರ್ ಜೀವನವೇ ಒಂದು ಹೋರಾಟ. ಹೀಗಾಗಿ ಅವರ ಬದುಕು ಮತ್ತು ಹೋರಾಟವನ್ನು ಪ್ರತ್ಯೇಕಿಸಲು ಆಗದು. ಪ್ರತಿ ನಾಗರಿಕನ ಹಕ್ಕಿಗಾಗಿ ಅವರು ಹೋರಾಟ ಮಾಡಿದ್ದಾರೆ’ ಎಂದು ಹೇಳಿದರು. ಸಿ.ಎಸ್‌.ಪೂರ್ಣಿಮಾ ಅಂಬೇಡ್ಕರ್ ಕೊನೆಯ ದಿನಗಳ ಬಗ್ಗೆ ಮಾಹಿತಿ ನೀಡಿದರು. ‘ಬಾಬಾ ಸಾಹೇಬರ ಕಡೇ ದಿನಗಳಲ್ಲಿ ಆರೋಗ್ಯ ಸಮಸ್ಯೆ ಬಿಗಡಾಯಿಸಿತ್ತು. ಸವಿತಾ ಎಂಬ ವೈದ್ಯೆಯನ್ನು ಮದುವೆಯಾದರು. ದೃಷ್ಟಿದೋಷದ ನಡುವೆ ಅಧ್ಯಯನದ ತುಡಿತ ಹೊಂದಿದ್ದರು. ಕೊನೆಗೆ ಬೌದ್ಧ ಧರ್ಮ ಸ್ವೀಕರಿಸಿದರು’ ಎಂದರು. ಹರ್ಷಕುಮಾರ್ ಕುಗ್ವೆ ‘ಅಂಬೇಡ್ಕರ್ ಯಾಕೆ ಬೇಕು’ ಎಂಬುದರ ಬಗ್ಗೆ ಬೆಳಕು ಚೆಲ್ಲಿದರು. ‘ಸಮಾಜದ ಏಳಿಗೆಗೆ ರಕ್ತಪಾತ ಇಲ್ಲದೆಯೇ ಸಾಧಿಸಬಹುದಾದ ಮಾರ್ಗ ಎಂದರೆ ಅದು ಪ್ರಜಾಪ್ರಭುತ್ವ. ಸಂವಿಧಾನದ ಮೂಲಕ ದೇಶದಲ್ಲಿ ರಕ್ತಕ್ರಾಂತಿ ಆಗುವುದನ್ನು ಬಾಬಾ ಸಾಹೇಬರು ತಡೆದರು’ ಎಂದರು.  ‘ಕಳೆದ ದಶಕದವರೆಗೂ ಅಂಬೇಡ್ಕರ್ ವಿಚಾರದಲ್ಲಿ ಸರ್ಕಾರಗಳು ನಿದ್ದೆ ಮಾಡುತ್ತಿದ್ದವು. ಈಗ ಜನರಿಗೆ ಅಂಬೇಡ್ಕರ್ ವಿಚಾರಧಾರೆಗಳ ಅರಿವುವಾಗುತ್ತಿದೆ. ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷ ಶಾಲೆಗಳಲ್ಲಿ ಆಚರಿಸಬೇಕಿದೆ’ ಎಂದರು.

ಚಿತ್ರಕಲಾ ಸ್ಪರ್ಧೆ: ಧನುಷ್‌ ಪ್ರಥಮ

ಸಮಾರೋಪ ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನವು ಅಂಬೇಡ್ಕರ್‌ ಕುರಿತ ಮಕ್ಕಳ ಅಭಿವ್ಯಕ್ತಿಗೆ ವೇದಿಕೆಯಾಯಿತು. ಸಂವಿಧಾನ ಶಿಲ್ಪಿಯ ಕುರಿತು ತಾವು ಗ್ರಹಿಸಿದ್ದನ್ನು ಮಕ್ಕಳು ಕ್ವಾನ್ವಾಸ್‌ ಮೇಲೆ ತೆರೆದಿಟ್ಟರು. ಅಂಬೇಡ್ಕರ್‌ ವ್ಯಕ್ತಿಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಉನ್ನತಿ ಗುರುಕುಲ ವಿದ್ಯಾರ್ಥಿ ಕೆ.ಆರ್. ಧನುಷ್‌ ರಾಜ್‌ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು. ಹೊಸಕೋಟೆ ನವೋದಯ ವಿದ್ಯಾಲಯದ ವಿಷ್ಣು ವೈಭವ್‌ ದ್ವಿತೀಯ ಹಾಗೂ ಮೈಸೂರಿನ ಕೇಂದ್ರೀಯ ವಿದ್ಯಾಲಯದ ಸುಧೀಕ್ಷಾ ತೃತೀಯ ಬಹುಮಾನ ಪಡೆದರು. ತೀರ್ಪುಗಾರರಾಗಿ ಪಾಲ್ಗೊಂಡ ಹಿರಿಯ ಚಿತ್ರಕಲಾವಿದ ಎಲ್. ಶಿವಲಿಂಗಪ್ಪ ‘ಸಾವಿರ ಪದಗಳು ಹೇಳಬೇಕಾದ್ದನ್ನು ಮಕ್ಕಳು ಒಂದು ಚಿತ್ರದ ಮೂಲಕ ಹೇಳಿದ್ದಾರೆ. ಇದೊಂದು ಅಪರೂಪದ ಕಾರ್ಯಕ್ರಮ’ ಎಂದು ಬಣ್ಣಿಸಿದರು.

‘ಪದವಿ ವಿದ್ಯಾರ್ಥಿಗಳಿಗೂ ವಿಸ್ತರಿಸಿ’

‘ಮಕ್ಕಳಿಗಾಗಿ ಅಂಬೇಡ್ಕರ್ ಒಂದು ಮಾದರಿ ಕಾರ್ಯಕ್ರಮ. ಇದನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು’ ಎಂದು ಲೇಖಕ ಎಂ. ವೆಂಕಟಸ್ವಾಮಿ ಆಶಿಸಿದರು. ಕಮ್ಮಟದ ಸಮಾರೋಪದಲ್ಲಿ ಮಾತನಾಡಿ ‘ಇಂದು ಅಂಬೇಡ್ಕರ್ ಜಯಂತಿಯು ಭಾರತದ ಹಳ್ಳಿಹಳ್ಳಿಯಲ್ಲಿ ಮಾತ್ರವಲ್ಲ ಉತ್ತರ ಕೊರಿಯಾದಂತಹ ಸರ್ವಾಧಿಕಾರಿ ಇರುವ ರಾಷ್ಟ್ರದಲ್ಲಿಯೂ ಆಚರಣೆ ಮೂಲಕ ಅಚ್ಚರಿ ತಂದಿದೆ.‌ ಇಡೀ ಜಗತ್ತು ಅಂಬೇಡ್ಕರ್ ಕಡೆಗೆ ನೋಡುತ್ತಿದ್ದು ಇದಕ್ಕೆ ಅವರ ಶಿಕ್ಷಣ ಕಾರಣ. ಮಕ್ಕಳು ಅವರಂತೆಯೇ ಓದುವ ಛಲ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.