ಮೈಸೂರು: ‘ಸರ್ಕಾರವಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದರೆ ತಿ.ನರಸೀಪುರದ ಜನರು ಡಾ.ಎಚ್.ಸಿ. ಮಹಾದೇವಪ್ಪ ಹಾಗೂ ಚಾಮುಂಡೇಶ್ವರಿ ಕ್ಷೇತ್ರದವರು ಸಿದ್ದರಾಮಯ್ಯ ಅವರನ್ನೇಕೆ ಸೋಲಿಸುತ್ತಿದ್ದರು?’ ಎಂದು ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಗಿ ಕೇಳಿದರು.
ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಿರುವ ಯೋಗಕ್ಕೆ ಸಂಬಂಧಿಸಿದ ಡಿಜಿಟಲ್ ವಸ್ತುಪ್ರದರ್ಶನವನ್ನು ಶನಿವಾರ ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಇದನ್ನೂ ಓದಿ: ಸಂಸದಪ್ರತಾಪಗೆ ಲಕ್ಷ್ಮಣ ಪಂಥಾಹ್ವಾನ: ದಿನಾಂಕ ನಿಗದಿ
‘ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳೇನಾದರೂ ಇದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಬನ್ನಿ. ಸುಮ್ಮನೆ ಮಾಧ್ಯಮದ ಮುಂದೆ ಬೊಗಳೆ ಬಿಡುವುದು ಬೇಡ’ ಎಂದು ಮಹಾದೇವಪ್ಪ ಅವರಿಗೆ ತಿರುಗೇಟು ನೀಡಿದರು.
‘ಮೈಸೂರಿಗೆ ಯಾರ ಕೊಡುಗೆಗಳು ಎಷ್ಟಿದೆ ಎಂಬುದರ ಬಹಿರಂಗ ಚರ್ಚೆಗೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಪಂಥಾಹ್ವಾನ ನೀಡಿದ್ದೆ. ಬಾರದೇ ಮಾಧ್ಯಮದ ಮುಂದೆ ಬೊಗಳೆ ಬಿಡುತ್ತಿದ್ದಾರೆ. ಅವರ ಮಾತಿನಲ್ಲಿ ವಿಚಾರಕ್ಕಿಂತ ಉಗುಳೇ ಹೆಚ್ಚಾಗಿದೆ. ಇದಕ್ಕೇನೂ ಮಾಡಲಾಗದು’ ಎಂದು ತಿರುಗೇಟು ನೀಡಿದರು.
‘ಯೋಗ ಪ್ರದರ್ಶನ ವೀಕ್ಷಣೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೇಂದ್ರ ಆಯುಷ್ ಸಚಿವಾಲಯದ ಸೂಚನೆ ಮೇರೆಗೆ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದು ಪ್ರದರ್ಶನ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತಿದೆ. ಭಾನುವಾರದವರೆಗೂ ವೀಕ್ಷಣೆಗೆ ಅವಕಾಶವಿದೆ. ಬೇಡಿಕೆ ಬಂದಲ್ಲಿ ಮತ್ತಷ್ಟು ದಿನಗಳವರೆಗೆ ಮುಂದುವರಿಸಲು ಕ್ರಮ ವಹಿಸಲಾಗುವುದು’ ಎಂದರು.
ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಡಿಡಿಪಿಐ ರಾಮಚಂದ್ರರಾಜೇ ಅರಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.