ಬಂಧನ
ಮೈಸೂರು: ತಾಲ್ಲೂಕಿನ ದಾಸನಕೊಪ್ಪಲಿನ ಮನೆಯೊಂದಕ್ಕೆ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಎಂಟು ಜನರನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
‘ಒಡನಾಡಿ ಸಂಸ್ಥೆಯು ನೀಡಿದ ಮಾಹಿತಿ ಆಧರಿಸಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ಮಾಡಲಾಯಿತು. ಪ್ರಮುಖ ಆರೋಪಿ ಮಂಜು ಸಹಿತ ಎಂಟು ಜನರನ್ನು ಬದಲಿಸಲಾಗಿದೆ. ಮಂಜು 30 ದಿನಗಳಿಗೆ ಒಮ್ಮೆ ಮನೆ ಬದಲಾಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐ ಶಿವನಂದ ಶೆಟ್ಟಿ, ಸೆನ್ ಸಿಪಿಐ ಸುನಿಲ್, ಜಯಪುರ ಪಿಎಸ್‌ಐ ಕಾಳೇಗೌಡ ಮತ್ತು ತಂಡ ಕಾರ್ಯಾಚರಣೆ ನಡೆಸಿತು. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 ಗ್ರಾಂ ಚಿನ್ನದ ಸರಗಳವು
ಮೈಸೂರು: ವಿದ್ಯಾರಣ್ಯಪುರಂ ಆರನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರತ್ನ ಅವರ ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಅಪರಿಚಿತರು ಬಂದ ಕಸಿದು ಪರಾರಿಯಾಗಿದ್ದಾರೆ.
‘ನಾಗರತ್ನ ಅವರು ಸೋಮವಾರ ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮಕ್ಕೆ ತೆರಳಲು ಮನೆಯಿಂದ ಹೋಗುತ್ತಿದ್ದಾಗ ಸರಗಳ್ಳರು, 60 ಗ್ರಾಂ ತೂಕದ ಚಿನ್ನದ ಸರವನ್ನು ಕೀಳಲು ಯತ್ನಿಸಿದ್ದಾರೆ. ಈ ವೇಳೆ ನಾಗರತ್ನ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ ಕಳ್ಳರ ಪಾಲಾಗಿದೆ’ ಎಂದು ಪೊಲೀಸರು ತಿಳಿಸಿದರು. ಸ್ಥಳಕ್ಕೆ ಡಿಸಿಪಿ ಕೆ.ಎನ್. ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ: ಪ್ರಯಾಣಿಕರಿಗೆ ಗಾಯ
ಮೈಸೂರು: ನಂಜನಗೂಡು ರಸ್ತೆಯ ಗುಂಡೂರಾವ್ ನಗರದ ಬಳಿ ಸೋಮವಾರ ಮಧ್ಯಾಹ್ನ ಲಾರಿಗೆ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
‘ಬಸ್ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುತ್ತಿತ್ತು, ನಂಜನಗೂಡು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಲಾರಿಯ ಚಾಲಕ ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದು, ಹಿಂದೆ ಇದ್ದ ಬಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗದಲ್ಲಿದ್ದ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.