
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ
ಪ್ರಜಾವಾಣಿ ಚಿತ್ರ.
ಮೈಸೂರು: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದು ಅಂದುಕೊಂಡಿವೆ. ಅಂಥ ಪತ್ರಿಕೆಗಳಿಗೆ ಕನಕಪ್ರಜ್ಞೆ ಅಗತ್ಯವಾಗಿ ಬೇಕಿದ್ದು, ಅವು ಪ್ರಭುತ್ವವನ್ನು ವಿಮರ್ಶೆ ಮಾಡಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.
ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ‘ಪರಂಪರೆಯನ್ನು ಗೌರವಿಸುತ್ತಲೇ ಅದರಿಂದ ಸಿಡಿದ ಕನಕದಾಸರು, ಪ್ರತ್ಯೇಕವಾದ ತಮ್ಮ ತನವನ್ನು ಬೆಳೆಸಿಕೊಂಡ ಗುಣವೇ ಕನಕ ಪ್ರಜ್ಞೆಯಾಗಿದೆ’ ಎಂದರು.
‘ಪ್ರಭುತ್ವವು ನಮ್ಮ ಮಿದುಳು, ಭಾಷೆ, ಚಿಂತನಾ ಕ್ರಮವನ್ನೇ ಆಕ್ರಮಿಸಿಕೊಳ್ಳುತ್ತದೆ. ಬಹಳಷ್ಟು ಮಂದಿ ಪ್ರಭುತ್ವದ ಭಾಷೆಯಲ್ಲೇ ಮಾತನಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನ ಭಾಷೆಯಲ್ಲಿ ಜನರು ಮಾತನಾಡಿದಾಗ ಪ್ರಭುತ್ವವು ಸಂಭ್ರಮಿಸುತ್ತದೆ. ಅವರಿಂದ ಅಪಾಯವಿಲ್ಲವೆಂಬ ಪ್ರಜ್ಞೆ ಮೂಡಿದಾಗ ಬೇಕಾದ ಪ್ರಶಸ್ತಿಯನ್ನೂ ನೀಡಿ ಗೌರವಿಸುತ್ತದೆ. ಆದರೆ, ಕನಕಪ್ರಜ್ಞೆಯು ಇದಕ್ಕೆ ಹೊರತು’ ಎಂದು ವಿವರಿಸಿದರು.
ಮೈಸೂರಿನ ಕಿರುರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಪ್ರಜಾವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಮಾದ್ಯಮದಲ್ಲಿ ಕನಕ ಪ್ರಜ್ಞೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉದ್ಘಾಟನೆ ಮಾಡಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಮೂಹ ಸಂವಹನ ಮತ್ತು ಪ್ರತಿಕೋಧ್ಯಮ ವಿಭಾಗದ ಅಧ್ಯಕ್ಷೆ ಎನ್. ಮಮತಾ, ದೀಪಕ್, ಕೆ. ನರಸಿಂಹಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.
‘ನೈಷದೀಯ ಚರಿತ್ರೆ ಬರೆದ ಶ್ರೀಹರ್ಷನು ಕಾವ್ಯ ಚೌಕಟ್ಟನ್ನು ಮೀರಿದಂತೆ ಕನಕದಾಸರು ನಳಚರಿತ್ರೆ, ರಾಮಧಾನ್ಯ ಚರಿತೆ ಬರೆದರು. ಕುವೆಂಪು ಅವರೂ ಭಾರತದ ಸಾರ್ವಭೌಮತೆಯನ್ನು ಒಪ್ಪಿಕೊಂಡು, ಅದಕ್ಕೆ ಅಪಾರವಾದ ಗೌರವ ತೋರಿಸುತ್ತಾ ಕರ್ನಾಟಕವನ್ನೇ ಕಾವ್ಯವಾಗಿಸಿದರು. ಈ ಮಾದರಿಯಲ್ಲಿ ಪ್ರಭುತ್ವದಿಂದ ಸಿಡಿದು ಭಿನ್ನವಾಗಿ ಮಾತನಾಡಲು ಮಾಧ್ಯಮಗಳು ಶುರು ಮಾಡಿದರೆ, ಅಲ್ಲಿ ಕನಕಪ್ರಜ್ಞೆ ಕಾಣುತ್ತದೆ’ ಎಂದರು.
‘1875ರಲ್ಲಿ ದೇಶದಲ್ಲಿ 374 ಪತ್ರಿಕೆಗಳಿದ್ದವು. ಅವುಗಳಲ್ಲಿ ಸ್ಥಳೀಯ ಭಾಷೆಯ 70 ಪತ್ರಿಕೆಗಳನ್ನು ಬ್ರಿಟಿಷರು ನಿಷೇಧ ಮಾಡಿದ್ದರು. ಆ ಕಾಲದಲ್ಲಿನ ಇಂಗ್ಲಿಷ್ ಪತ್ರಿಕೆಗಳು ಅಪಾಯವೆಂದು ಅವರಿಗೆ ಅನ್ನಿಸಿರಲಿಲ್ಲ. ಈಗಲೂ ರಾಷ್ಟ್ರವಾದಿ ಪತ್ರಕರ್ತ ಎಂದುಕೊಳ್ಳುವವರಿಗೆ ಎಂದಿಗೂ ಪ್ರಭುತ್ವ ತಲೆಕೆಡಿಸಿಕೊಳ್ಳುವುದಿಲ್ಲ. ಇವ ನಮ್ಮವನೆಂಬ ಪ್ರಜ್ಞೆ ಅದಕ್ಕಿರುತ್ತದೆ. ಆಗ, ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದ ಸ್ಥಳೀಯ ಪತ್ರಿಕೆಗಳೇ ಕನಕಪ್ರಜ್ಞೆಯದ್ದಾಗಿವೆ’ ಎಂದು ವಿಶ್ಲೇಷಿಸಿದರು.
‘1908ರಲ್ಲಿ ಮೈಸೂರು ಸಂಸ್ಥಾನ ಪತ್ರಿಕಾ ಪ್ರತಿಬಂಧಕ ಶಾಸನ ಜಾರಿಗೊಳಿಸಲು ಚಿಂತನೆ ನಡೆದಿತ್ತು. ಪ್ರತಿಭಟನೆ ಹೆಚ್ಚಾದ್ದರಿಂದ ಅದು ಜಾರಿಗೆ ಬರಲಿಲ್ಲ. ಪ್ರತಿಭಟನಾ ಗುಣ ಇರಬೇಕು’ ಎಂದರು.
‘ಮಾಧ್ಯಮಗಳು ಕನಕಪ್ರಜ್ಞೆಯನ್ನು ಮೈಗೂಡಿಸಿಕೊಂಡರೆ ಸವಾಲುಗಳು ಸಹಜ. ಪ್ರಭುತ್ವದಿಂದ ಸಿಡಿದು ಅದನ್ನು ವಿಮರ್ಶೆ ಮಾಡಲು ಹೊರಟಾಗ ತೊಂದರೆ ಎದುರಾಗುತ್ತವೆ. ಪತ್ರಿಕೆಯ ಪ್ರಸರಣ, ನೋಡುವವರು ಕಡಿಮೆಯಾಗುತ್ತಾರೆ. ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗೆಂದು ವೀಸಾ ಕೊಡುವವರು ಹೆಚ್ಚಾಗುತ್ತಾರೆ. ಏನೇ ಆದರೂ, ಕನಕ ಪ್ರಜ್ಞೆಯನ್ನು ವಿಸ್ತರಿಸುವ ಧೀಮಂತ ಶಕ್ತಿಯನ್ನು, ಓದುಗ ವರ್ಗವನ್ನು ಸೃಷ್ಟಿಸಿಕೊಳ್ಳುವ ಜವಾಬ್ದಾರಿ ಇಂದಿನ ಪತ್ರಿಕೆಗಳಿಗೆ ಬೇಕಿದೆ. ಅಂಥವನ್ನು ಬೆಳೆಸುವ ನೈತಿಕ ಜವಾಬ್ದಾರಿ ಜನರ ಮೇಲಿದೆ’ ಎಂದರು.
ಇದಕ್ಕೂ ಮೊದಲು ‘ಕನಕ ಕೀರ್ತನೆಗಳನ್ನು’ ಎಂ.ಮಹಾಲಿಂಗು ಮತ್ತು ತಂಡದವರು ಹಾಡಿದರು. ಚಾರ್ವಿ ಸತೀಶ್ ಅವರು ಹರಿಭಕ್ತಿಸಾರ ಕಾವ್ಯದ ‘ಕನಕ ಗಮಕ’ ವಾಚನ ಮಾಡಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ ಪಾಲ್ಗೊಂಡಿದ್ದರು.
ಮೈಸೂರಿನ ಕಿರುರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಪ್ರಜಾವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಮಾದ್ಯಮದಲ್ಲಿ ಕನಕ ಪ್ರಜ್ಞೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಮೂಹ ಸಂವಹನ ಮತ್ತು ಪ್ರತಿಕೋಧ್ಯಮ ವಿಭಾಗದ ಅಧ್ಯಕ್ಷೆ ಎನ್. ಮಮತಾ, ಕೆ. ನರಸಿಂಹಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.