ADVERTISEMENT

‘ಲಗ್ನ’ದ ನಂತರ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 4:37 IST
Last Updated 6 ಅಕ್ಟೋಬರ್ 2022, 4:37 IST

ಮೈಸೂರು: ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆಗೆ ‘ಲಗ್ನ’ ಮೀರಿದ ನಂತರ ಚಾಲನೆ ನೀಡಲಾಯಿತು! ಇದಕ್ಕೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿಯವರ ನಡುವಿನ ಸಂವಹನದ ಕೊರತೆ ಕಾರಣವಾಯಿತು ಎಂದು ಹೇಳಲಾಗಿದೆ.

ಮೆರವಣಿಗೆಯನ್ನು ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುತ್ತಾರೆ ಎಂದು ಆಹ್ವಾನಪತ್ರಿಕೆಯಲ್ಲಿ ತಿಳಿಸಲಾಗಿತ್ತು. ಆದರೆ, ಅಂಬಾರಿಯಲ್ಲಿ ಶೋಭಾಯಮಾನಗೊಂಡಿದ್ದ ಚಾಮುಂಡೇಶ್ವರಿ ಮೂರ್ತಿಗೆ ಮುಖ್ಯಮಂತ್ರಿ ಮತ್ತು ಗಣ್ಯರು ಪುಷ್ಪಾರ್ಚನೆ ಮಾಡಿದಾಗ 5.37 ಆಗಿತ್ತು.

ಆನೆಗಳನ್ನು ಅರಣ್ಯ ಇಲಾಖೆಯವರು ಸಕಾಲಕ್ಕೆ ಸಜ್ಜುಗೊಳಿಸಿದ್ದರು. ಆದರೆ, ಅಭಿಮನ್ಯುಗೆ ಎಷ್ಟೊತ್ತಿಗೆ ಅಂಬಾರಿ ಕಟ್ಟಬೇಕು ಎನ್ನುವ ನಿಖರ ಮಾಹಿತಿಯನ್ನು ಜಿಲ್ಲಾಡಳಿತದವರು ಕೊಟ್ಟಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, 45 ನಿಮಿಷಗಳವರೆಗೆ ಆನೆಗಳನ್ನು ನಿಲ್ಲಿಸಿಕೊಂಡಿರಲಾಗಿತ್ತು. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಸ್ಥಳಕ್ಕೆ ಹೋಗಿ ಸೂಚಿಸಿದ ಬಳಿಕ ಅಂಬಾರಿ ಕಟ್ಟುವ ಕಾರ್ಯವನ್ನು ತರಾತುರಿಯಲ್ಲಿ ಮಾಡಲಾಯಿತು. ಆದರೆ,ಆ ವೇಳೆಗೆ ಲಗ್ನ ಮೀರಿತ್ತು. ಇದರಿಂದಾಗಿ ಮೆರವಣಿಗೆ ಸಮಿತಿಯವರು ಕೆಲವು ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ನಿಧಾನ ಮಾಡಿದರು. ಕೆಲವೊಮ್ಮೆ ರಾಜಮಾರ್ಗ ‘ಖಾಲಿ’ ಎನಿಸುತ್ತಿತ್ತು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.