ADVERTISEMENT

ನಂಜನಗೂಡು | ರೈಲ್ವೆ ಮೇಲ್ಸೇತುವೆ: ಮಾರ್ಗ ಬದಲಿಸದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:42 IST
Last Updated 14 ಮೇ 2025, 15:42 IST
ನಂಜನಗೂಡಿನ ರಾಷ್ಟ್ರಪತಿ ರಸ್ತೆ ಬಳಿ ನಿರ್ಮಿಸಲಿರುವ ರೈಲ್ವೆ ಮೇಲ್ಸೇತುವೆಯ ಮಾರ್ಗ ಬದಲಾವಣೆ ಮಾಡದಂತೆ ಸರಸ್ವತಿ ಕಾಲೊನಿಯ ನಿವಾಸಿಗಳು ಬುಧವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ನಂಜನಗೂಡಿನ ರಾಷ್ಟ್ರಪತಿ ರಸ್ತೆ ಬಳಿ ನಿರ್ಮಿಸಲಿರುವ ರೈಲ್ವೆ ಮೇಲ್ಸೇತುವೆಯ ಮಾರ್ಗ ಬದಲಾವಣೆ ಮಾಡದಂತೆ ಸರಸ್ವತಿ ಕಾಲೊನಿಯ ನಿವಾಸಿಗಳು ಬುಧವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ನಂಜನಗೂಡು: ‘ನಗರದ ರಾಷ್ಟ್ರಪತಿ ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ರೈಲ್ವೆ ಮೇಲ್ಸೇತುವೆಯನ್ನು ಪಟ್ಟಭದ್ರ ಹಿತಾಶಕ್ತಿಗಳ ಒತ್ತಡಕ್ಕೆ ಮಣಿದು ಮಾರ್ಗ ಬದಲಾವಣೆ ಮಾಡದೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿ ಸರಸ್ವತಿ ಕಾಲೊನಿ ನಿವಾಸಿಗಳು ಬುಧವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ರೈಲ್ವೆ ಇಲಾಖೆ ಈಗಾಗಲೇ ನಕ್ಷೆ ತಯಾರಿಸಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಆದರೆ, ರಾಷ್ಟ್ರಪತಿ ರಸ್ತೆಯ ಅಂಗಡಿ ಮಾಲೀಕರು ಮೇಲ್ಸೇತುವೆಯನ್ನು ನೇರವಾಗಿ ನಿರ್ಮಾಣ ಮಾಡಿದಲ್ಲಿ ಅಂಗಡಿ ಮಾಲೀಕರ ಆಸ್ತಿ ನಷ್ಟವಾಗುವ ಜತೆಗೆ ಶ್ರೀಕಂಠೇಶ್ವರ ದೇವಾಲಯದ ಗೋಪುರ ದರ್ಶನಕ್ಕೆ ಅವಕಾಶವಾಗುವುದಿಲ್ಲ, ರಥಬೀದಿಯವರೆಗೆ ಕಾಮಗಾರಿ ನಡೆಯುವುದರಿಂದ ರಥ ಸಂಚಾರಕ್ಕೂ ಅಡ್ಡಿಯಾಗಲಿದೆ ಎಂದು ಆಕ್ಷೇಪಿಸಿದ್ದು, ರೈಲ್ವೆ ಮಾರ್ಗವನ್ನು ನಾಗಮ್ಮ ಶಾಲೆಯಿಂದ ಸರಸ್ವತಿ ಕಾಲೊನಿವರೆಗೆ, ಅಲ್ಲಿಂದ ಪೊಲೀಸ್ ಪರೇಡ್ ಮೈದಾನದ ಮೂಲಕ ಸರ್ಕಾರಿ ಶಾಲೆಯ ಮಾರ್ಗವಾಗಿ ರಾಷ್ಟ್ರಪತಿ ರಸ್ತೆಗೆ ಜೋಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಮಗೆ ಆಕ್ಷೇಪವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಸರಸ್ವತಿ ಕಾಲೊನಿ ಮೂಲಕ ಅಡ್ಡಾದಿಡ್ಡಿಯಾಗಿ ಮೇಲ್ಸೇತುವೆ ನಿರ್ಮಾಣ ಮಾಡಿದ್ದಲ್ಲಿ, 40 ವರ್ಷಗಳಿಂದ ಸರ್ಕಾರದಿಂದ ಹಕ್ಕುಪತ್ರ ಪಡೆದು ವಾಸ ಮಾಡುತ್ತಿರುವ ಕಡು ಬಡವರ ಮನೆಗಳು ನಾಶವಾಗಲಿವೆ. ಈ ನಿರ್ಧಾರದಿಂದ ಸಾಕಷ್ಟು ಬಡವರ ಕುಟುಂಬಗಳು ಆಶ್ರಯವಿಲ್ಲದೆ ಬೀದಿಗೆ ಬೀಳಲಿವೆ. ಸುತ್ತಿ ಬಳಸಿ ಸೇತುವೆ ನಿರ್ಮಾಣಕ್ಕೆ ಇಳಿದರೆ ಸರ್ಕಾರಕ್ಕೂ ಆರ್ಥಿಕ ನಷ್ಟ ಉಂಟಾಗಲಿದೆ, ವಾಹನ ಸಂಚಾರಕ್ಕೂ ಅಡ್ಡಿಯಾಗಲಿದೆ. ಆದ್ದರಿಂದ ಉದ್ದೇಶಿತ ನಕ್ಷೆ ಪ್ರಕಾರವೇ ಮೇಲ್ಸೇತುವೆಯನ್ನು ನೇರವಾಗಿ ನಿರ್ಮಿಸಬೇಕು’ ಎಂದು ಆಗ್ರಹಿಸಲಾಗಿದೆ.

ADVERTISEMENT

11ನೇ ವಾರ್ಡ್‌ನ ನಗರಸಭಾ ಸದಸ್ಯ ಗಂಗಾಧರ ಮಾತನಾಡಿ, ‘ರೈಲ್ವೆ ಮೇಲ್ಸೇತುವೆಯನ್ನು ಈ ಹಿಂದಿನ ನಕ್ಷೆ ಅನುಮೋದನೆ ಪ್ರಕಾರವೇ ನೇರವಾಗಿ ನಿರ್ಮಿಸಬೇಕು. ಈ ಬಗ್ಗೆ ಮಂಗಳವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ, ಹೆಚ್ಚಿನ ಸದಸ್ಯರು ಒತ್ತಾಯಿಸಿರುವುದರಿಂದ ರೈಲ್ವೆ ಮೇಲ್ಸೇತುವೆ ನೇರವಾಗಿ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯ ನಡಾವಳಿಯ ಪುಸ್ತಕದಲ್ಲಿ ಅಂಗೀಕಾರವನ್ನು ದಾಖಲು ಮಾಡಲಾಗಿದೆ, ಜೊತೆಗೆ ನಗರಸಭೆ ಅಧ್ಯಕ್ಷ ಹಾಗೂ ಶಾಸಕ ದರ್ಶನ್ ಧ್ರುವನಾರಾಯಣ ಅವರೂ ನಕ್ಷೆಯ ಪ್ರಕಾರವೇ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.