ADVERTISEMENT

ಕುಡಿಯಲು ಮಳೆ ನೀರೇ ಯೋಗ್ಯ

ಮಳೆ ನೀರು ಶುದ್ಧೀಕರಣಕ್ಕೊಂದು ಅಗ್ಗದ ತಂತ್ರಜ್ಞಾನ

ಕೆ.ಎಸ್.ಗಿರೀಶ್
Published 3 ಜೂನ್ 2019, 19:45 IST
Last Updated 3 ಜೂನ್ 2019, 19:45 IST
ಅಗ್ಗದ ನೀರು ಶುದ್ಧೀಕರಣ ಯಂತ್ರ
ಅಗ್ಗದ ನೀರು ಶುದ್ಧೀಕರಣ ಯಂತ್ರ   

ದಿನದಿಂದ ದಿನಕ್ಕೆ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ, ಸಿಗುತ್ತಿರುವ ನೀರು ಕಲುಷಿತವಾಗುತ್ತಿರುವುದು ಮತ್ತೊಂದು ಕಡೆ. ಶುದ್ಧ ನೀರಿನ ಲಭ್ಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಮಳೆ ನೀರೇ ಪರಿಶುದ್ಧ ಎಂದು ಇಲ್ಲೊಬ್ಬರು ನಿರೂಪಿಸಿದ್ದಾರೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾಗಿರುವ ಡಾ.ಕೆ.ಎಂ.ಜಯರಾಮಯ್ಯ ಅವರು ಕುವೆಂಪುನಗರದ ಪಡುವಣ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಇಂತಹ ಅಗ್ಗದ ತಂತ್ರಜ್ಞಾನದ ಮೊರೆ ಹೊಕ್ಕು ಯಶಸ್ವಿಯಾಗಿದ್ದಾರೆ. ಮಳೆ ನೀರು ಸಂಗ್ರಹಕ್ಕೆ ಒಂದು, ನದಿ ಮೂಲದ ನೀರಿಗೆ ಮತ್ತೊಂದು ಸಂಪು ನಿರ್ಮಿಸಿ ಎಂದು ಹೇಳುವವರಿಗೆ ಇವರು ಮಾದರಿಯಾಗಿದ್ದಾರೆ.

ಏನಿದು ತಂತ್ರಜ್ಞಾನ?: ‘ಎರಡು ಪದರದ ಸ್ಟೇನ್‌ಲೆಸ್ ಸ್ಟೀಲ್‌ನ ದಪ್ಪದಾದ ಕಾಟ್ರಿಜ್ ಫಿಲ್ಟರ್‌ ಅನ್ನು ಮಳೆ ನೀರು ಶುದ್ಧೀಕರಣಕ್ಕೆಂದು ಅಳವಡಿಸಿಕೊಂಡಿದ್ದೇವೆ. ಇದರಿಂದ ಮಳೆ ನೀರು ಸಂಪೂರ್ಣವಾಗಿ ಶುದ್ಧಗೊಂಡು ಕುಡಿಯಲು ಯೋಗ್ಯವಾಗುತ್ತದೆ. ನಾವು ಇದೇ ನೀರನ್ನು ಬಳಸುತ್ತೇವೆ’ ಎಂದು ಅವರು ಹೇಳುತ್ತಾರೆ.

ADVERTISEMENT

ಮಳೆ ಬಂದ ಮೊದಲ 15 ನಿಮಿಷಗಳಲ್ಲಿ ಸಂಗ್ರಹವಾಗುವ ನೀರನ್ನು ಸಂಪಿಗೆ ಬಿಡಬಾರದು. ಆ ನೀರಿನಲ್ಲಿ ತಾರಸಿಯ ಕೊಳೆ, ಕಶ್ಮಲಗಳು ಮಿಶ್ರಣಗೊಳ್ಳುತ್ತವೆ. ಆ ನೀರು ಹೊರಗೆ ಹರಿದುಹೋಗಲೆಂದೇ ಪ್ರತ್ಯೇಕವಾದ ಕೊಳವೆ ಇದೆ. 15 ನಿಮಿಷಗಳ ನಂತರ ಆ ಕೊಳವೆಯ ವಾಲ್ವ್‌ ಅನ್ನು ಬಂದ್ ಮಾಡಿ, ಫಿಲ್ಟರ್‌ ಇರುವ ಕಡೆಯ ವಾಲ್ವ್‌ ಅನ್ನು ಆನ್ ಮಾಡಬೇಕು. ಆಗ ನೀರು ಫಿಲ್ಟರ್‌ಗೆ ಬಂದು ಅಲ್ಲಿ ತೇಲುವ ಕಶ್ಮಲಗಳೆಲ್ಲ ಶುದ್ಧೀಕರಣಗೊಂಡು ನೀರು ಸಂಪ್‌ ಸೇರುತ್ತದೆ. ಈ ನೀರು ಕೊಳವೆ ಬಾವಿ ಮತ್ತು ನದಿ ನೀರಿಗಿಂತ ಶುದ್ಧವಾದ ನೀರು ಎಂದು ಜಯರಾಮಯ್ಯ ಹೇಳುತ್ತಾರೆ.‌

‘ಈಗಾಗಲೇ ಪಾಲಿಕೆಯ ಆಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ. ಈ ಅಗ್ಗದ ತಂತ್ರಜ್ಞಾನವನ್ನು ಎಲ್ಲರೂ ಅಳವಡಿಸಿಕೊಂಡರೆ ಮಳೆ ನೀರು ಮರು ಬಳಕೆಯಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಸ್ಥಳಾವಕಾಶ ಇದ್ದವರು, ಹಣವಿದ್ದವರು ಎರಡರಿಂದ ಮೂರು ಸಂಪ್‌ಗಳನ್ನು ಅಳವಡಿಸಿಕೊಂಡರೆ ಇನ್ನಷ್ಟು ಮಳೆ ನೀರು
ಸಂಗ್ರಹವಾಗುತ್ತದೆ. ಮಳೆ ಬಂದಾಗೆಲ್ಲ ಈ ನೀರನ್ನು ಹಿಡಿದಿಟ್ಟುಕೊಂಡರೆ ಅನ್ಯ ಜಲಮೂಲಗಳ ಮೇಲೆ ಅವಲಂಬಿಸುವ ಪ್ರಮೇಯವೇ ಇರುವುದಿಲ್ಲ ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.