
ಮೈಸೂರು: ಬೇಸಿಗೆ ಬಂದಾಗಲೇ ನೀರಿನ ಮೌಲ್ಯ ನಾಗರಿಕರಿಗೆ ಗೊತ್ತಾಗುತ್ತದೆ. ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿಗೆ ಅಗತ್ಯವಾಗಿ ಬೇಕಾದ ನೀರಿನ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಬಿನಿ– ಕಾವೇರಿಯಿಂದ ನೀರು ಪೂರೈಸಲು ಹೊಸ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ. ಈ ವೇಳೆ ಮಳೆ ನೀರು ಸಂಗ್ರಹ ಮೂಲಕ ಮನೆಗೆ ಅಗತ್ಯವಾದ ನೀರನ್ನು ಸಂಗ್ರಹಿಸಿ ವರ್ಷವಿಡೀ ಬಳಸುವ ಮೂಲಕ ‘ನೀರು ರಕ್ಷಕರು’ ನಗರಕ್ಕೆ ಇಲ್ಲಿ ಮಾದರಿಯಾಗಿದ್ದಾರೆ.
ರೂಪಾ ನಗರದ ವನ್ಯಜೀವಿ ಛಾಯಾಗ್ರಾಹಕ ನಿತಿನ್ ಭಾರದ್ವಾಜ್ ಅವರು ತಮ್ಮ ಮನೆಗೆ ‘ಮಳೆನೀರು ಕೊಯ್ಲು’ ಪದ್ಧತಿ ಅಳವಡಿಸಿಕೊಂಡಿದ್ದು, ನಿತ್ಯದ ಎಲ್ಲ ಬಳಕೆಗೆ ಅದೇ ನೀರನ್ನು ಬಳಸುತ್ತಿದ್ದಾರೆ. ಬಳಸಿದ ನೀರನ್ನು ಮತ್ತೆ ಶುದ್ಧೀಕರಿಸಿ ಅಂಗಳದಲ್ಲಿ ಕೈತೋಟವನ್ನು ಬೆಳೆಸಿದ್ದಾರೆ.
‘ಮಳೆ ನೀರು ಸಂಗ್ರಹ ಪದ್ಧತಿಯ ಸುಸ್ಥಿರ ಮನೆ ನಿರ್ಮಾಣ ಕನಸಾಗಿತ್ತು. ಹೀಗಾಗಿಯೇ ಮೂರು ವರ್ಷದ ಹಿಂದೆ ಅಂದುಕೊಂಡಂತೆಯೇ ಮನೆ ಕಟ್ಟಿಸಿದೆವು. ಅದಕ್ಕೆ ಮನೆಯ ಸಮೀಪದಲ್ಲೇ ಇರುವ ಜಲತಜ್ಞ ಯು.ಎನ್.ರವಿಕುಮಾರ್ ನೆರವಾದರು’ ಎಂದು ನಿತಿನ್ ‘ಪ್ರಜಾವಾಣಿ’ ಜೊತೆ ಮಾತು ಆರಂಭಿಸಿದರು.
‘ಸ್ಥಳೀಯ ಸಂಸ್ಥೆಯವರು ಪೂರೈಸುವ ಕೊಳವೆಬಾವಿ ನೀರಿನಲ್ಲಿ ಲೋಹ– ಲವಣಾಂಶದ ಪ್ರಮಾಣ 100– 150 ಟಿಡಿಎಸ್ ಬದಲು 1,400 ಟಿಡಿಎಸ್ ಇತ್ತು. ಕಬಿನಿ ನದಿ ನೀರನ್ನು ಕೊಳವೆಬಾವಿ ನೀರಿನೊಂದಿಗೆ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಪೂರೈಕೆ ಮಾಡಿದರೂ ಲವಣಾಂಶ ಹೆಚ್ಚೇ ಇತ್ತು’ ಎಂದರು.
8 ತಿಂಗಳು ತೊಂದರೆ ಇಲ್ಲ:
ನಿತಿನ್ ಅವರು 30 ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ನಿರ್ಮಾಣ ಮಾಡಿದ್ದು, 10x20 ಅಡಿ ಉದ್ದ ಅಗಲವಿದ್ದು, 7 ಅಡಿ ಆಳವಿದೆ. ಮನೆಕಟ್ಟುವಾಗ ನಿರ್ಮಿಸಿದ ಸಂಪ್ ಅನ್ನೇ ವಿಸ್ತರಿಸಿದ್ದು, ಕುಡಿಯಲು, ಸ್ನಾನ, ಪಾತ್ರೆ ತೊಳೆಯುವುದೂ ಸೇರಿದಂತೆ ಎಲ್ಲಕ್ಕೂ ಇದೇ ನೀರು ಸಾಕಾಗುತ್ತದೆ. ನವೆಂಬರ್‌ವರೆಗೂ ಮಳೆ ಬಿದ್ದರೆ ವರ್ಷದ 8 ತಿಂಗಳೂ ಸಮಸ್ಯೆ ಅವರಿಗೆ ಇಲ್ಲವಾಗಿದೆ. ಮಳೆ ಪ್ರಮಾಣ ಕಡಿಮೆಯಾದರೆ ಹಾಗೂ ಉಳಿದ ತಿಂಗಳಿಗೆ ನೀರು ಸರಬರಾಜು ಮಂಡಳಿಯವರು ವಿತರಿಸುವ ನೀರನ್ನು ಅವರು ಬಳಕೆ ಮಾಡುತ್ತಿದ್ದಾರೆ. ಅದಕ್ಕೆ ಬೇರೆಯದಾದ ಟ್ಯಾಂಕ್ ನಿರ್ಮಿಸಿದ್ದಾರೆ.
‘ಬಳಸಿದ ನೀರು ಒಳಚರಂಡಿ ಪಾಲಾಗಿಸುವ ಬದಲು ಗ್ರೇ ವಾಟರ್ ರೀಸೈಕಲಿಂಗ್ ಪಿಟ್ ನಿರ್ಮಾಣ ಮಾಡಿದ್ದೇವೆ. ಆ ನೀರನ್ನು ಕೈತೋಟಕ್ಕೆ ಬಳಸುತ್ತೇವೆ. ಫೆಬ್ರುವರಿ ಅಂತ್ಯದವರೆಗೂ ಯಾವುದೇ ಸಮಸ್ಯೆ ಆಗದು. ಮಳೆ ನೀರು ಚರಂಡಿ ಸೇರಿ ಪೋಲಾಗುವ ಬದಲು ಅದನ್ನು ಬಳಸಿಕೊಂಡರೆ ನಮಗಷ್ಟೇ ಅಲ್ಲ ಸಮಾಜಕ್ಕೂ ಉಳಿತಾಯವಾಗುತ್ತದೆ’ ಎನ್ನುತ್ತಾರೆ ನಿತಿನ್.
‘ಮನೆ ಕಟ್ಟಿಸುವಾಗ ಮಳೆ ನೀರು ಸಂಗ್ರಹ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ನಮಗೂ ಹೆಚ್ಚೇನೂ ಖರ್ಚಾಗಿಲ್ಲ. ಜಲ್ಲಿ, ಮರಳು ಹಾಕಿ ಶುದ್ಧೀಕರಿಸುವ ಫಿಲ್ಟರ್ ಮಾಡಲಾಗಿದೆ. ನೀರು ಶುದ್ಧವಾಗಿರುವುದರಿಂದ ಆ್ಯರೋ ಫಿಲ್ಟರ್ ಏನು ಬೇಕಾಗದು. ಸಾಮಾನ್ಯ ಫಿಲ್ಟರ್ ಬಳಸಿ ಕುಡಿಯಲು ಬಳಸಬಹುದು’ ಎಂದರು.
‘ಶೇ 95ರಷ್ಟು ನೀರು ಹಿಡಿದಿಡಲು ಸಾಧ್ಯ’
‘ಮೈಸೂರಿನಲ್ಲಿ ವರ್ಷಕ್ಕೆ 789 ಮಿ.ಮೀ ಮಳೆಯಾಗುತ್ತದೆ. ಅದರಲ್ಲಿ ಶೇ 95ರಷ್ಟು ನೀರನ್ನು ಹಿಡಿದಿಡಲು ಸಾಧ್ಯ. ಸಾವಿರ ಚದರ ಅಡಿಯ ಮನೆಯಲ್ಲಿ 72 ಸಾವಿರ ನೀರು ಸಂಗ್ರಹಿಸಬಹುದು’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರತಿ ವ್ಯಕ್ತಿಗೆ ವರ್ಷಕ್ಕೆ 50 ಸಾವಿರ ಲೀಟರ್ ನೀರು ಬೇಕು. ಬಳಸಿದ ನೀರನ್ನು ಕೈತೋಟಕ್ಕೆ ಮರುಪೂರಣ ಮಾಡಿಕೊಂಡರೆ 1.6 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ನೀರಿನ ಅಭಾವವಿದ್ದ ಕಾಲದಲ್ಲಿ ನಾವು ಬದುಕುವ ಬಗೆಯೊಂದನ್ನು ಮಳೆನೀರು ಕೊಯ್ಲು ವ್ಯವಸ್ಥೆಯು ಕಲಿಸುತ್ತದೆ. ಮೈಸೂರಿನಲ್ಲಿ 5 ಲಕ್ಷ ಮನೆಗಳಿದ್ದು ಕನಿಷ್ಟ 20 ಸಾವಿರ ಮಂದಿ ಅಳವಡಿಸಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು’ ಎಂದರು.
‘ಸುಸ್ಥಿರ ಆಲೋಚನೆ ಅಗತ್ಯ’
‘ಮನೆಯಲ್ಲಿ ಮಳೆ ನೀರು ಸಂಗ್ರಹದ ಜೊತೆಗೆ ಸೋಲಾರ್ ಗ್ರಿಡ್ ಅಳವಡಿಕೆ ಮಾಡಿಕೊಂಡಿರುವುದರಿಂದ ವಿದ್ಯುತ್ ಕೂಡ ಹೆಚ್ಚಿಗೆ ಬೇಕಾಗದು’ ಎಂದು ನಟ ಕೆ.ಜೆ.ಸಚ್ಚಿದಾನಂದ ಹೇಳಿದರು. ರಾಜರಾಜೇಶ್ವರಿ ನಗರದಲ್ಲಿ 2025ರ ಮೇನಲ್ಲಿ 9 ಸಾವಿರ ಲೀಟರ್ ಸಾಮರ್ಥ್ಯದ ಮಳೆ ನೀರು ಸಂಗ್ರಹದ ಸಂಪ್ ಅನ್ನು ನಿರ್ಮಿಸಿಕೊಂಡಿರುವ ಅವರು ನೀರು ಸರಬರಾಜು ಮಂಡಳಿ ಪೂರೈಸುವ ನೀರನ್ನು ದಿನ ಬಳಕೆಗೆ ಹಾಗೂ ಮಳೆನೀರನ್ನು ಕುಡಿಯಲು ಬಳಸುತ್ತಿದ್ದಾರೆ.
‘10x6 ಉದ್ದಗಲದ 6 ಅಡಿ ಆಳದ ಸಂಪ್ ಆಗಿದ್ದು ಅರ್ಧದಷ್ಟು ನೀರು ಹಾಗೆ ಇದೆ. ಮನೆ ಕಟ್ಟಿಸಿ ವರ್ಷ ಆಗದ್ದರಿಂದ ಅದರ ಅಂಕಿ– ಅಂಶ ನಿಖರವಾಗಿ ಸಿಕ್ಕಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡದಿರುವುದು ಮನೆಯಲ್ಲಿಯೇ ಹಸಿ ಕಸವನ್ನು ಗಿಡ ತೋಟಗಳಿಗೆ ಬಳಲು ಗೊಬ್ಬರ ಮಾಡಿಕೊಳ್ಳುವ ಹನಿ ನೀರನ್ನು ಕಾಪಾಡುವ ಸುಸ್ಥಿರ ಆಲೋಚನೆಗಳು ಮೈಸೂರಿಗರಿಗೆ ಬರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.