
ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಶಿವರಾತ್ರಿ ಅಂಗವಾಗಿ ಫೆ.15ರಿಂದ ಮೂರು ದಿನ ರಾಮಲಿಂಗೇಶ್ವರ ಜಾತ್ರೆ ಜರುಗಲಿದ್ದು, ಬಸವೇಶ್ವರ ಕೊಂಡೋತ್ಸವಕ್ಕೆ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿವರಾತ್ರಿ ದಿನವಾದ ಭಾನುವಾರ ಜಾತ್ರೆ ಆರಂಭವಾಗಲಿದ್ದು, ದೇವಾಲಯದಲ್ಲಿ ಹೋಮ, ರುದ್ರಾಭಿಷೇಕ, ಶಿವನಿಗೆ ಪ್ರಿಯವಾದ ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಗುವುದು. ಸಂಜೆ ರಾಮಲಿಂಗೇಶ್ವರ ಸ್ವಾಮಿಗೆ ತೈಲಾಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 10ಕ್ಕೆ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಂಘದಿಂದ ‘ಬಾಳಿನ ದಾರಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಸೋಮವಾರ (ಫೆ.16) ಮಧ್ಯಾಹ್ನ 12.38 ರಿಂದ 1.10ರ ಸಮಯದಲ್ಲಿ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಜರುಗಲಿದೆ. ರಥೋತ್ಸವದ ಬಳಿಕ ಎಲ್ಲಾ ಭಕ್ತರಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ. ರಾತ್ರಿ 9ಕ್ಕೆ ಪ್ರಸನ್ನ ಮತ್ತು ತಂಡದಿಂದ ಆರ್ಕೆಸ್ಟ್ರಾವನ್ನು ಏರ್ಪಡಿಸಲಾಗಿದೆ. ರಾತ್ರಿ 10ಕ್ಕೆ ಕಪಿಲಾ ಮತ್ತು ತಾರಕ ನದಿಗಳ ಸಂಗಮ ಸ್ಥಳದಲ್ಲಿ ರಾಮಲಿಂಗೇಶ್ವರ ಸ್ವಾಮಿ ತೆಪ್ಪೋತ್ಸವ ನಡೆಯಲಿದೆ ಎಂದು ಯಜಮಾನರಾದ ಜಯಶಂಕರೇಗೌಡ ತಿಳಿಸಿದರು.
ಮಂಗಳವಾರ (ಫೆ.17) ಬೆಳಿಗ್ಗೆ 8.30ರಿಂದ 9.40ರ ಅವಧಿಯಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಜರುಗಲಿದೆ. ಸಂಜೆ 5 ಗಂಟೆಗೆ ಓಕಳಿಯನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿದ್ದು ತಿಳಿಸಿದರು.
ಕಬಡ್ಡಿ ಟೂರ್ನಿ: ಜಾತ್ರೆ ಅಂಗವಾಗಿ ಫೆ.15 ರಿಂದ 16ರ ವರೆಗೆ ತಾಲ್ಲೂಕು ಮಟ್ಟದ ಮ್ಯಾಟ್ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ. 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತರಿಗೆ ಫೆ. 16ರಂದು ಬಹುಮಾನ ವಿತರಿಸಲಾಗುವುದು. ಜಾತ್ರೆ ಅಂಗವಾಗಿ ರಾಸುಗಳ ಪ್ರದರ್ಶನ ಸಹ ಇರಲಿದೆ’ ಎಂದು ಗ್ರಾಮದ ಚನ್ನೇಗೌಡ ತಿಳಿಸಿದ್ದಾರೆ.
ದೇವಾಲಯವು ಹೊಯ್ಸಳ ಶೈಲಿಯ ಗರ್ಭಗೃಹ ಮತ್ತು ಅರ್ಧಮಂಟಪಗಳನ್ನು ಹೊಂದಿದೆ. ಇದಕ್ಕೆ ಹೊಂದಿಕೊಂಡಂತಿರುವ ನವರಂಗಕ್ಕೆ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಪ್ರವೇಶದ್ವಾರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.