ADVERTISEMENT

ಹುಣಸೂರು: ತೆಂಗಿಗೆ ಕೆಂಪು ಮೂತಿ ಕೀಟ ಬಾಧೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:00 IST
Last Updated 21 ಫೆಬ್ರುವರಿ 2026, 5:00 IST
   

ಹುಣಸೂರು: ತೆಂಗಿನ ತೋಟದಲ್ಲಿ ಕೆಂಪು ಮೂತಿ ಹುಳುವಿನ ಬಾಧೆಗೆ ಮರಗಳು ನಲುಗುತ್ತಿದ್ದು, ಈ ಬಗ್ಗೆ ರೈತರು ಆತಂಕಗೊಳ್ಳದೆ ತಜ್ಞರು ನೀಡಿದ ಸಲಹೆಯಂತೆ ಕ್ರಮವಹಿಸುವುದರಿಂದ ಮರವನ್ನು ರಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆದಿದ್ದು, ವಾಣಿಜ್ಯ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೆಂಪು ಮೂತಿ ಹುಳುಬಾಧೆ ಕಾಡುತ್ತಿದ್ದು, ಸುಳಿ ಒಣಗಿ ಮರದ ಕಾಂಡದಲ್ಲಿ ನೀರು ಸೋರುವಿಕೆ ಕಾಣಿಸಿಕೊಂಡು ಕ್ರಮೇಣ ಮರ ನಾಶವಾಗುತ್ತಿದೆ. ಈ ರೀತಿಯಾಗಿ ತಾಲ್ಲೂಕಿನ 2 ರಿಂದ 3 ಮೂರು ಸಾವಿರ ಮರಗಳಲ್ಲಿ ಬಾಧೆ ಕಾಣಿಸಿಕೊಂಡಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಂತ್ರಣ: ಕೆಂಪು ಮೂತಿ ಹುಳುವಿನ ಬಾಧೆಗೊಳಗಾದ ತೆಂಗಿನ ಮರದಲ್ಲಿ ಹುಳು ಪತ್ತೆಯಾದಲ್ಲಿ ಸಾಯಿಸುವ ಕ್ರಮ ಪ್ರಥಮ ಹಂತದಲ್ಲೇ ಆಗಬೇಕು. ನಂತರದಲ್ಲಿ ಮರಕ್ಕೆ ಅಂತರ ಬೇಸಾಯ ಮಾಡುವ ಹಂತದಲ್ಲಿ ಗಾಯಗೊಂಡಲ್ಲಿ ಆ ಭಾಗಕ್ಕೆ ಕ್ಲೋರೋಪೈರಿಪಾಸ್‌ ಹಾಗೂ ಮಣ್ಣಿನ ದ್ರಾವಣವನ್ನು ಹಾಕಿ ಗಾಯಗೊಂಡ ಭಾಗವನ್ನು ಮುಚ್ಚಬೇಕು. ಹಸಿ ಗರಿಗಳನ್ನು ಮನಸೋ ಇಚ್ಚೆಯಂತೆ ಕತ್ತರಿಸದೆ ಗಿಡದಿಂದ 2 ಅಡಿ ಬಿಟ್ಟು ಕತ್ತರಿಸಬೇಕು. ಪ್ರತಿ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗಿನ ಮಧ್ಯೆ ಮೋಹಕ ಬಲೆಯನ್ನು ತೂಗು ಹಾಕುವುದರಿಂದ ಕೆಂಪು ಮೂತಿ ಹುಳು ಆಕರ್ಷಿತಗೊಂಡು ಬಲೆಗೆ ಸಿಲುಕುವುದರಿಂದ ಅತಿ ವೇಗವಾಗಿ ಹುಳು ನಿಯಂತ್ರಿಸಬಹುದಾಗಿದೆ’ ಎಂದು ಸಲಹೆ ನೀಡಿದರು.

ADVERTISEMENT

ಪೋಷಕಾಂಶ: ‘ತೆಂಗಿನ ತೋಟದ ನಿರ್ವಹಣೆ ಪ್ರಮುಖವಾಗಿದ್ದು, ಕೊಟ್ಟಿಗೆ ಗೊಬ್ಬರ ಪ್ರತಿ ಗಿಡಕ್ಕೆ 20ರಿಂದ 25 ಕೆ.ಜಿ ಬೇವಿನ ಹಿಂಡಿ 3 ಕೆ.ಜಿ. ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೈಟ್‌ 500 ಗ್ರಾಂ. ಡಿಎಪಿ 750 ಗ್ರಾಂ, ಎಂಒಪಿ 1 ಕೆಜಿ ಪ್ರತಿ ಗಿಡಕ್ಕೆ ಪಾತಿ ಮಾಡಿ ನೀಡಬೇಕು.

‘ಕೆಂಪು ಮೂತಿ ರೋಗಕ್ಕೆ ತುತ್ತಾದ ಗಿಡಗಳಿಗೆ ಪ್ರತಿ ಲೀಟರ್‌ ನೀರಿಗೆ 10 ಮಿಲಿ ಡೈಕ್ಲೋರ್‌ವಾಸ್‌ 10 ಇ.ಸಿ. ದ್ರಾವಣವನ್ನು ಬೆರೆಸಿ ರಂಧ್ರಗಳಿಗೆ ಸುರಿಯಬೇಕು ಅಥವಾ ಅಲ್ಯೂಮಿನಿಯಂ ಫಾಸ್ಪೇಟ್‌ ಮಾತ್ರೆಯನ್ನು ಹಾಕಿ ರಂಧ್ರವನ್ನು ಸಗಣಿಯಿಂದ ಮುಚ್ಚಬೇಕು. ಇದರೊಂದಿಗೆ ಲೆಸೆನ್ಟಾ ಕೀಟನಾಶಕವನ್ನು 1 ಗ್ರಾಂ 1 ಲೀಟರ್‌ ನೀರಿಗೆ ಮಿಶ್ರಣ ಮಾಡಿ ತೆಂಗಿನ ಸುಳಿಗೆ ಸುರಿದಲ್ಲಿ ಬಾಧೆ ನಿಯಂತ್ರಣ ಮಾಡಬಹುದು’ ಎಂದರು.

‘ಬೇರಿನ ಮೂಲಕವೂ ಈ ಮೇಲಿನ ಔಷಧವನ್ನು ಮಣ್ಣಿನ ಬಣ್ಣ ಹೋಲುವ ಬೇರನ್ನು ಅಡ್ಡಲಾಗಿ ಕತ್ತರಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ಸಿದ್ಧಪಡಿಸಿದ ಔಷಧ ಕಟ್ಟಿದ್ದಲ್ಲಿ ಬೇರಿನ ಮೂಲಕ ಔಷಧ ಗಿಡ ಸಂಪೂರ್ಣ ಆವರಿಸಲಿದೆ. ಔಷಧ ನೀಡಿದ 15 ದಿನಗಳ ಕಾಲ ಎಳನೀರು ಕಟಾವು ಮಾಡದಂತೆ ರೈತರು ಎಚ್ಚರವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.