ADVERTISEMENT

ರಾಜಕಾರಣದಲ್ಲಿ ಮಹಿಳೆಯರ ಒಳಗೊಳ್ಳುವಿಕೆಗೆ ಮೀಸಲು ಅಗತ್ಯ: ಪ್ರೊ.ಆರ್.ಇಂದಿರಾ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 11:28 IST
Last Updated 22 ಜುಲೈ 2022, 11:28 IST
   

ಮೈಸೂರು: ‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಸಿಗಬೇಕು. ಎಲ್ಲ ರಾಜಕೀಯ ಪಕ್ಷದವರೂ ಪ್ರಜ್ಞಾಪೂರ್ವಕವಾಗಿ ಟಿಕೆಟ್ ನೀಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್‌ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಒತ್ತಾಯಿಸಿದರು.

ಇಲ್ಲಿನ ಮಾನಸ ಗಂಗೋತ್ರಿಯ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ‘ಕರ್ನಾಟಕ ರಾಜಕಾರಣದಲ್ಲಿ ಮಹಿಳೆಯರ ಒಳಗೊಳ್ಳುವಿಕೆ’ ವಿಷಯದ ಕುರಿತು ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾತಿನಿಧ್ಯವನ್ನು ತ್ವರಿತವಾಗಿ ನಿಗದಿಪಡಿಸಿ ಮೀಸಲಾತಿ ಅನುಷ್ಠಾನಗೊಳಿಸಬೇಕು. ಕೋಟಾದಲ್ಲಿ‌ ಕೋಟಾ ಕೇಳಲಾಗುತ್ತಿದೆ ಎನ್ನುವುದನ್ನೆ ಮುಂದಿಟ್ಟುಕೊಂಡು ವಿಳಂಬ ಮಾಡುವುದು ಸರಿಯಲ್ಲ’ ಎಂದರು.

ADVERTISEMENT

ಇಚ್ಛಾಶಕ್ತಿ ಅಗತ್ಯ:

‘ರಾಜಕಾರಣದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಅಗತ್ಯವಾಗಿದೆ. ಅಧಿಕಾರದ ಸದ್ಬಳಕೆ ಮಾಡಿಕೊಂಡಿದ್ದೇ ಆದಲ್ಲಿ ಇಡೀ ಸಮಾಜದ ಹಾಗೂ ಬದುಕಿನ ಗುಣಮಟ್ಟ ಹೆಚ್ಚುತ್ತದೆ. ಇದಕ್ಕಾಗಿ ನಿರ್ಧಾರದ ಸ್ಥಾನಕ್ಕೆ ಮಹಿಳೆಯರು ಬರಬೇಕು. ಇದಕ್ಕೆ ಇಚ್ಛಾಶಕ್ತಿಯ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಹಿಳೆ‌ ಅಧಿಕಾರದ ಒಳಗೆ ಬಂದರೆ, ಪುರುಷರು ಮಕ್ಕಳನ್ನು ನೋಡಿಕೊಳ್ಳಬೇಕು. ಅದರಲ್ಲಿ ತಪ್ಪೇನಿದೆ?’ ಎಂದು ಕೇಳಿದರು.

‘ಪ್ರಸ್ತುತ, ಪ್ರಶ್ನೆ ಮಾಡುವವರೆ ಬೇಡ ಎನ್ನುವ ಪರಿಸ್ಥಿತಿ ಇದೆ’ ಎಂದು ವಿಷಾದಿಸಿದರು.

‘ಪಕ್ಷ ರಾಜಕಾರಣದ ಪ್ರಭಾವದಿಂದ ಟಿಕೆಟ್ ‌ಪಡೆದುಕೊಂಡವರನ್ನು ಮಾತ್ರ ಕಾಣುತ್ತೇವೆ. ಪಕ್ಷೇತರರಾಗಿ ಸ್ಪರ್ಧಿಸುವ ಮಹಿಳೆಯರು ಎಷ್ಟು ಮಂದಿ ಗೆದ್ದಿದ್ದಾರೆ? ರಾಜಕಾರಣವೆಂದರೆ ಪುರುಷ ಪ್ರಧಾನವಾದುದು ಎನ್ನುವಂತಾಗಿದೆ. ಇದು ದೂರಾಗಲು, ಮಹಿಳೆಯನ್ನು‌ ನೋಡುವ ಮನೋಭಾವ ಬದಲಾಗಬೇಕು. ಮೀಸಲಾತಿಯ ಲಾಭ ಎಲ್ಲರಿಗೂ ಸಿಗಬೇಕು. ಪ್ರಭಾವಿಗಳಿಗೆ ಸೀಮಿತವಾಗಬಾರದಯ’ ಎಂದು ಹೇಳಿದರು.

ಹೊಂದಾಣಿಕೆ ರಾಜಕಾರಣ:

‘ಅಧಿಕಾರದೊಳಗೆ ಪ್ರವೇಶಿಸಬೇಕಾದರೆ ಹಾಗೂ ಮುಂದುವರಿಯಬೇಕಾದರೆ ರಾಜಕೀಯ ಪ್ರಭಾವದ ನೆರವು ಅನಿವಾರ್ಯವಾಗಿದೆ ಎಂಬ ಸ್ಥಿತಿ ‌ಇದೆ. ಎಲ್ಲ ಕ್ಷೇತ್ರಗಳಲ್ಲೂ‌ ಹೊಂದಾಣಿಕೆಯ ರಾಜಕಾರಣ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.

‘ಕೆಲವು ಪುರುಷರು ಕ್ಷೇತ್ರಗಳನ್ನು ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿರುವ ಉದಾಹರಣೆಯೂ ಇದೆ. ಮಹಿಳಾ ಮೀಸಲು ಬಂದರೆ ನನ್ನ ಪತ್ನಿಗೇ ಅವಕಾಶವಿರಲಿ ಎನ್ನುವವರೂ ಇದ್ದಾರೆ’ ಎಂದು ನುಡಿದರು.

‌‘ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಆದರೆ, ಪ್ರಸ್ತುತ ಮಹಿಳೆಯರ ಮತಗಳಷ್ಟೆ ಬೇಕು; ಅವರನ್ನು ನಾಯಕಿಯರನ್ನಾಗಿ ಮಾಡಲು ಬಹುತೇಕರಿಗೆ ಮನಸ್ಸಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರದ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್‌, ‘ಒಳಗೊಳ್ಳುವಿಕೆ ರಾಜಕಾರಣದಲ್ಲಿ ಕರ್ನಾಟಕವು ತನ್ನದೇ ಆದ ಕೊಡುಗೆ ನೀಡಿದೆ’ ಎಂದರು.

‘ರಾಜಕಾರಣದಲ್ಲಿ ಒಳಗೊಳ್ಳಲು ಜಾತಿ ಹಾಗೂ ಲಿಂಗದ ಸವಾಲನ್ನು ಮೀರಬೇಕು. ಪ್ರಜಾಪ್ರಭುತ್ವದ ‌ಶಿಕ್ಷಣವೂ ಅಗತ್ಯ’ ಎಂದು ಅಭಿ‍ಪ್ರಾಯಪಟ್ಟರು.

ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನವೀನ್‌ಕುಮಾರ್‌ ಎನ್. ಬುದ್ಧವಂದನೆ ಸಲ್ಲಿಸಿದರು. ಕೆ.ಮಣಿಕಂಠ ಸ್ವಾಗತಿಸಿದರು. ಸಿದ್ದಾರ್ಥ ಟಿ.ಸಿ. ನಿರೂಪಿಸಿದರು. ಅಶೋಕ್‌ಕುಮಾರ್‌ ಆರ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.