ADVERTISEMENT

ಮೈಸೂರು: ಸಂಚಾರಕ್ಕೆ ಸರ್ಕಸ್, ಅಪಘಾತಕ್ಕೆ ಆಹ್ವಾನ!

ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲೇ ಮನೆ ಮನೆ ದಸರಾ

ಎಂ.ಮಹೇಶ
Published 23 ಸೆಪ್ಟೆಂಬರ್ 2022, 19:30 IST
Last Updated 23 ಸೆಪ್ಟೆಂಬರ್ 2022, 19:30 IST
ಮೈಸೂರಿನ ಕುವೆಂಪುನಗರದ ಪಡುವಣ ರಸ್ತೆ ಗುಂಡಿಮಯವಾಗಿದೆ/ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಕುವೆಂಪುನಗರದ ಪಡುವಣ ರಸ್ತೆ ಗುಂಡಿಮಯವಾಗಿದೆ/ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ನಾಡಹಬ್ಬದ ಅಂಗವಾಗಿ ಮನೆ ಮನೆ ದಸರಾ ನಡೆಸಲು ಮಹಾನಗರಪಾಲಿಕೆ ನಿರ್ಧರಿಸಿದ್ದು, ಪ್ರತಿ ವಾರ್ಡ್‌ಗೆ ತಲಾ ₹ 2 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದೆ. ಆದರೆ, ರಸ್ತೆಗಳ ದುರಸ್ತಿಯನ್ನೇ ಮಾಡದೆ ‘ಮನೆ ಮನೆ ದಸರಾ’ ಆಯೋಜಿಸಲು ಮುಂದಾಗಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ವಾರ್ಡ್‌ನಲ್ಲೂ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಒಂದಿಲ್ಲೊಂದು ಸ್ಪರ್ಧೆ ನಡೆಸುವುದು ಕಾರ್ಯಕ್ರಮದ ಉದ್ದೇಶ. ಆ ಸ್ಪರ್ಧೆಗಳನ್ನು ಹಾಳಾಗಿರುವ ರಸ್ತೆಗಳಲ್ಲಿ ನಡೆಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಎರಡು ವರ್ಷಗಳಿಂದ ರಸ್ತೆಗಳ ದುರಸ್ತಿ ಕಾರ್ಯವೇ ನಡೆದಿರಲಿಲ್ಲ.

‘ಎರಡು ವರ್ಷಗಳ ನಂತರ ಮನೆ ಮನೆ ದಸರಾ ನಡೆಸಲು ನಿರ್ಧರಿಸಿರುವುದು ಶ್ಲಾಘನೀಯ. ಆದರೆ, ಬಡಾವಣೆಗಳಲ್ಲಿನ ಒಳ ರಸ್ತೆಗಳಲ್ಲಿ ಕಾರ್ಯಕ್ರಮ ನಡೆಸುವುದು ಜನರಿಂದ ನಗೆಪಾಟಲಿಗೀಡಾಗುವ ಸಾಧ್ಯತೆ ಇದೆ. ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎನ್ನುವಂತಾಗುತ್ತದೆ. ಗಣ್ಯ ವ್ಯಕ್ತಿಗಳು ಸಂಚರಿಸುವ ಮಾರ್ಗದಲ್ಲಷ್ಟೇ ದುರಸ್ತಿಪಡಿಸಲಾಗುತ್ತಿದೆ. ಈ ತಾರತಮ್ಯ ಸರಿಯಲ್ಲ’ ಎಂಬುದು ನಗರಪಾಲಿಕೆಯ ಹಲವು ಸದಸ್ಯರ ಅಸಮಾಧಾನವಾಗಿದೆ.

ADVERTISEMENT

ಸಂಚಾರಕ್ಕೆ ತೊಂದರೆ:‘ದಸರೆಗೆಂದು ಮಹಾನಗರಪಾಲಿಕೆಗೆ ಈ ಸರ್ಕಾರವು ವಿಶೇಷ ಅನುದಾನವನ್ನೇ ಕೊಟ್ಟಿಲ್ಲ. ರಸ್ತೆಗಳ ದುರಸ್ತಿಗಾಗಿ ಪ್ರತಿ ವಾರ್ಡ್‌ಗೆ ತಲಾ ₹ 5 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೆವು. ಆದರೆ, ಅದಕ್ಕೆ ಸ್ಪಂದನೆ ದೊರೆತಿಲ್ಲ. ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ’ ಎಂದು ಮಹಾನಗರಪಾಲಿಕೆ ಸದಸ್ಯ ಆರೀಫ್ ಹುಸೇನ್ ಆಕ್ರೋಶ ವ್ಯಕ್ತ‍ಪಡಿಸಿದರು.

‘ನಗರಪಾಲಿಕೆ ಮತ್ತು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಸಂಚರಿಸಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ನಿತ್ಯ ರಸ್ತೆ ಅಪಘಾತಗಳಾಗುತ್ತಿವೆ. ಇದನ್ನು ತಡೆಯುವುದಕ್ಕಾಗಿ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ.

₹ 250 ಕೋಟಿ:ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ‘ನಗರದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿವಿಧ ಶೀರ್ಷಿಕೆಗಳಲ್ಲಿ ₹ 250 ಕೋಟಿ ಅನುದಾನ ದೊರೆತಿದೆ. ಅಲ್ಲಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳು ಆರಂಭಗೊಂಡಿವೆ. ಮುಂಚಿತವಾಗಿಯೇ ಕೆಲಸ ಕೈಗೊಳ್ಳಲು ಮಳೆಯ ಕಾರಣದಿಂದಾಗಿ ಸಾಧ್ಯವಾಗಿರಲಿಲ್ಲ. ಸದ್ಯಕ್ಕೆ ಮುಖ್ಯ ರಸ್ತೆಗಳಲ್ಲಿ ಮಾತ್ರವೇ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಅವು ದಸರಾ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಜೆಎಲ್‌ಬಿ ರಸ್ತೆಯು ಲೋಕೋಪಯೋಗಿ ಇಲಾಖೆಯವರು ಮಾಡಬೇಕಿದೆ. ಉಳಿದಂತೆ ನ್ಯೂಕಾಂತರಾಜ ಅರಸ್ ರಸ್ತೆ, ಪಂಚಮಂತ್ರ ರಸ್ತೆ, ರಾಮಾನುಜ ರಸ್ತೆ, ಎಂ.ಜಿ.ರಸ್ತೆ ಮೊದಲಾದ ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೆಡೆ ಗುಂಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಪ್ರಮುಖ ವೃತ್ತಗಳಿಗೂ ಆದ್ಯತೆ ನೀಡಿದ್ದು, ಕೆಲಸ ಭರದಿಂದ ಸಾಗಿದೆ. ಅಜೀಜ್ ಸೇಠ್ ಜೋಡಿ ರಸ್ತೆಯಲ್ಲಿ ಅರ್ಧ ಭಾಗ ಮುಗಿದಿದೆ. ನಗರದ ಒಳ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ನಾಡಹಬ್ಬ ಮುಗಿದ ಬಳಿಕ ಪ್ರಾರಂಭಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.