ADVERTISEMENT

₹25 ಕೋಟಿ ಬೆಲೆಯ ತಿಮಿಂಗಿಲದ ವಾಂತಿ ವಶ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:12 IST
Last Updated 23 ಮೇ 2023, 14:12 IST
ವಶವಾದ ಅಂಬರ್‌ಗ್ರೀಸ್
ವಶವಾದ ಅಂಬರ್‌ಗ್ರೀಸ್   

ಎಚ್.ಡಿ.ಕೋಟೆ: ಕೇರಳದಿಂದ ಮೈಸೂರು ಜಿಲ್ಲೆಗೆ ಸಾಗಣೆ ಮಾಡುತ್ತಿದ್ದ ₹25 ಕೋಟಿ ಬೆಲೆಯ ತಿಮಿಂಗಿಲದ ವಾಂತಿ/ಅಂಬರ್ಗ್ರಿಸ್‌ ಅನ್ನು ವಾಹನ ಸಹಿತ ವಶಕ್ಕೆ ಪಡೆದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮೈಸೂರು ಜಿಲ್ಲಾ ಸೆನ್‌ (ಸೈಬರ್‌, ಮಾದಕವಸ್ತು, ಆರ್ಥಿಕ ಅಪರಾಧ ನಿಯಂತ್ರಣ) ವಿಭಾಗದ ಪೊಲೀಸರು ಎಚ್.ಡಿ.ಕೋಟೆ ಪೋಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ 9.5 ಕೆಜಿ ನಿಷೇಧಿತ ತಿಮಿಂಗಿಲದ ಅಂಬರ್ಗ್ರಿಸ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

 ಕೇರಳದ ಅಝೀರ್‌, ಕುಂಞಿ, ಅನೀಫ್‌ ಆರೋಪಿಗಳು. ಬಸುರಿ ತಿಮಿಂಗಿಲದಿಂದ ಸಂಗ್ರಹಿಸಿದ ಅಂಬರ್ಗ್ರಿಸ್‌ ಅನ್ನು ಕೇರಳ ಕಣ್ಣೂರು ಸಮುದ್ರದ ತೀರದಿಂದ ತಂದು ಮಾರಾಟ ಮಾಡಲು ಸಂಚು ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಎಚ್.ಡಿ.ಕೋಟೆ ಪೊಲೀಸರು ಹಾಗೂ ಮೈಸೂರಿನ ಸೈಬರ್ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ಹ್ಯಾಂಡ್‌ ಪೋಸ್ಟ್‌ನಲ್ಲಿ ಆರೋಪಿಗಳಿದ್ದ ಕಾರನ್ನು ತಡೆದ ಎಚ್.ಡಿ.ಕೋಟೆ ಸರ್ಕಲ್ ಇನ್‌ಸ್ಪೆಕ್ಟರ್‌ ಶಬ್ಬಿರ್ ಹುಸೇನ್  ನೇತೃತ್ವದ ಪೊಲೀಸರ ತಂಡ ಅಂಬರ್ಗ್ರಿಸ್‌ ಕಾರಿನಲ್ಲಿರುವುದನ್ನು ಖಚಿತ ಪಡಿಸಿ, ತಪಾಸಣೆ ನಡೆಸಿದಾಗ 9.5 ಕೆ.ಜಿ. ದ್ರವ್ಯ 4 ಬಾಕ್ಸ್‌ಗಳಲ್ಲಿ ಪತ್ತೆಯಾಗಿದೆ. ಮೌಲ್ಯ ₹25 ಕೋಟಿಗಳಿಗೂ ಅಧಿಕವಾಗಿದ್ದು,  ಆರೋಪಿಗಳನ್ನು ಕಾರಿನ ಸಮೇತ ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿ , ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಅವರಿಗೆ  ನ್ಯಾಯಾಂಗ ಬಂಧನ ವಿಧಿಸಿದೆ.

ಎಚ್‌.ಡಿ.ಕೋಟೆ ಪೊಲೀಸ್‌ ಸೇರಿದಂತೆ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾ ಎಸ್‌ಪಿ ಸೀಮಾ ಲಾಟ್ಕರ್  ಬಹುಮಾನ ಘೋಷಿಸಿದ್ದಾರೆ. ಸೆನ್ ಪೊಲೀಸ್ ಇನ್‌ಸ್ಪೆಕ್ಟರ್ ಪುರುಷೋತ್ತಮ, ಸಿಬ್ಬಂದಿ ಮಂಜುನಾಥ್‌, ರಂಗಸ್ವಾಮಿ, ಮಂಜುನಾಥ, ಯೋಗೇಶ್, ಯತೀಶ್, ಮೋಹನ್, ಮಹದೇವಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಎಸ್‌ಪಿ ನಂದಿನಿ ಹುಣಸೂರು, ಡಿವೈಎಸ್‌ಪಿ ಮಹೇಶ್ ಅವರ ಮಾರ್ಗದರ್ಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.