ADVERTISEMENT

ವಿರೋಧ ಹೆಚ್ಚಿದಷ್ಟು ಸಾವರ್ಕರ್‌ ಜನಪ್ರಿಯ: ಬಿ.ಎಲ್. ಸಂತೋಷ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 0:00 IST
Last Updated 3 ಸೆಪ್ಟೆಂಬರ್ 2025, 0:00 IST
ಕಾರ್ಯಕ್ರಮದಲ್ಲಿ ಬಿ. ಎಲ್. ಸಂತೋಷ್ ಮಾತನಾಡಿದರು. ಎಸ್. ಯಶಸ್ವಿನಿ ಹಾಗೂ ಡಾ. ಚಂದ್ರಶೇಖರ್ ಜೊತೆಗಿದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಬಿ. ಎಲ್. ಸಂತೋಷ್ ಮಾತನಾಡಿದರು. ಎಸ್. ಯಶಸ್ವಿನಿ ಹಾಗೂ ಡಾ. ಚಂದ್ರಶೇಖರ್ ಜೊತೆಗಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಸಿದ್ದರಾಮಯ್ಯ ಅಂತಹವರ ವಿರೋಧದಿಂದಾಗಿ ಸಾವರ್ಕರ್ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ವಿರೋಧ ಹೆಚ್ಚಿದಷ್ಟೂ ದೇಶಭಕ್ತಿ ಪ್ರಖರವಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ಸಾವರ್ಕರ್ ಪ್ರತಿಷ್ಠಾನ ಮೈಸೂರು ಸಂಘಟನೆಯು ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್‌ ಸಿಂಧೂರ್‌’ ಕುರಿತು ಅವರು ಮಾತನಾಡಿದರು.

‘ಕಾಂಗ್ರೆಸ್ ತನಗೆ ಅನುಕೂಲಕರವಲ್ಲದ ಸತ್ಯದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇದೆ. ಸ್ವಾತಂತ್ರ್ಯ ಗಳಿಸುವಲ್ಲಿ ಅಸಹಕಾರ ಆಂದೋಲನದ ಬಹುದೊಡ್ಡ ಪಾತ್ರವಿರುವುದು ನಿಜ. ಕಾಂಗ್ರೆಸ್ ಹೋರಾಟವೂ ನಿಜ. ಅಂದು ಇದ್ದದ್ದೇ ಒಂದು ಪಕ್ಷ. ಅದನ್ನು ನಾವು ಅಲ್ಲಗೆಳೆಯುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಆದರೆ ಆಜಾದ್, ಭಗತ್ ಸಿಂಗ್, ಮದನ್‌ಲಾಲ್ ಅಂಥವರ ಪ್ರಾಣಾರ್ಪಣೆಗೆ ಬೆಲೆ ಕೊಡದಿದ್ದಾಗ ಸಂಕಟವಾಗುತ್ತದೆ. ಸತ್ಯ ಹೇಳಲೇ ಬೇಕಾಗುತ್ತದೆ. ನೇತಾಜಿ ಹಾಗೂ ಸಾವರ್ಕರ್ ಬಗ್ಗೆ ಸ್ವಾತಂತ್ರ್ಯೋತ್ತರ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕಿಂತ ಅತಿ ದೊಡ್ಡ ಸುಳ್ಳು ಇಲ್ಲ’ ಎಂದು ಟೀಕಿಸಿದರು.

‘ದೇಶದ ತೀವ್ರ ರಾಷ್ಟ್ರೀಯವಾದಿಗಳಲ್ಲಿ ಅಂಬೇಡ್ಕರ್ ಒಬ್ಬರು. ದೇಶದ ಸೈನ್ಯದಲ್ಲಿ ಹೆಚ್ಚು ಮುಸಲ್ಮಾನರಿರುವುದರ ಬಗ್ಗೆ 1940 ರಲ್ಲೇ ಆಕ್ಷೇಪಿಸಿದ್ದರು. ಹಿಂದೂಗಳು ಹೆಚ್ಚು ಸೈನ್ಯ ಸೇರುವಂತೆ ಮಾಡಿದ್ದು ಸಾವರ್ಕರ್‌. ದೇಶ ಸುಭದ್ರತೆಗೆ ಸೇನೆ ಬಲವಾಗಿರಬೇಕು ಎಂಬುದು ಅವರ ಆಶಯವಾಗಿತ್ತು. ಅದನ್ನು ಪ್ರಧಾನಿ ಮೋದಿ ಕಾರ್ಯಗತಗೊಳಿಸಿದ್ದರಿಂದ ಆಪರೇಷನ್ ಸಿಂಧೂರ ಯಶಸ್ವಿಯಾಯಿತು’ ಎಂದು ಪ್ರತಿಪಾದಿಸಿದರು.

‘ಸಿಡಿಎಸ್‌ ನೇಮಕ ಸೇರಿ, 11 ವರ್ಷದಲ್ಲಿ ಭಾರತೀಯ ಸೇನೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಸೇನಾ ಮುಖ್ಯಸ್ಥರಿಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಸಿಕ್ಕಿದೆ. ಸ್ವದೇಶಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ’ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಎಸ್. ಯಶಸ್ವಿನಿ ಅಧ್ಯಕ್ಷತೆ ವಹಿಸಿದ್ದರು. ಆದಿತ್ಯ ಅಧಿಕಾರಿ ಆಸ್ಪತ್ರೆ ವೈದ್ಯ ಚಂದ್ರಶೇಖರ್ ಪಾಲ್ಗೊಂಡರು.

‘ಕಾಂಗ್ರೆಸ್ ನಾಯಿ ಹೋರಾಟ ಮಾಡಿತ್ತೆ?’

‘ಬಿಜೆಪಿ ನಾಯಿ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುವ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಮನೆಯ ಯಾವ ನಾಯಿ ಹೋರಾಡಿತ್ತು ಎಂದು ಬಹಿರಂಗಪಡಿಸಲಿ’ ಎಂದು ಬಿ.ಎಲ್. ಸಂತೋಷ್ ಸವಾಲು ಹಾಕಿದರು.

‘ಸಂಘ ಶುರುವಾಗಿದ್ದು 1951ರಲ್ಲಿ. ಬಿಜೆಪಿ ಹುಟ್ಟಿದ್ದೇ 1980ರ ದಶಕದಲ್ಲಿ. ನಾವೆಲ್ಲಿ ಹೋರಾಡಲು ಸಾಧ್ಯ? ಆದರೆ ಹೆಗಡೇವಾರ್ ಅಂತಹವರು ಹೋರಾಟದ ಹಾದಿಯಿಂದಲೇ ಬಂದವರು’ ಎಂದರು.

‘ರಾಜ್ಯ ಸರ್ಕಾರದಲ್ಲಿ ಮೂವರು ಬಚ್ಚಲುಬಾಯಿ ಮಂತ್ರಿಗಳಿದ್ದಾರೆ. ದೇಶದಲ್ಲಿ ಎಲ್ಲಿ ಹೋದರೂ ಇಂದಿರಾ- ರಾಜೀವ್ ಹೆಸರಿದೆ. ಆದರೆ ಬೆಂಗಳೂರಿನಲ್ಲಿ ಒಂದು ಫ್ಲೈ ಓವರ್ ಗೆ ಸಾವರ್ಕರ್ ಹೆಸರು ಇಡಲು ವಿರೋಧವೇಕೆ’ ಎಂದು ಪ್ರಶ್ನಿಸಿದರು.

ದೇಶದಲ್ಲಿ ಈಚೆಗೆ ಪ್ರತಿಯೊಂದಕ್ಕೂ ಜಾತಿ– ಸಾಕ್ಷಿ ಕೇಳುವ ಬ್ರಿಗೇಡ್ ಹೆಚ್ಚಾಗಿದೆ. ನಗರ ನಕ್ಸಲರ ಕಾಟ ಹೆಚ್ಚಾಗಿದೆ. ನಾಚಿಕೆಗೇಡಿನ ಶಕ್ತಿಗಳು ನಮ್ಮಲ್ಲಿವೆ.
-ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.