ADVERTISEMENT

ಸೀಗೆಕಾಯಿ ಉತ್ಪನ್ನ ತಯಾರಿಲು ಮಹಿಳೆಯರಿಗೆ ಮಮತಾ ಎಚ್.ಎನ್. ಸಲಹೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:45 IST
Last Updated 4 ನವೆಂಬರ್ 2025, 4:45 IST
ಮೈಸೂರಿನಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ರೈತ ಮುಖಂಡ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು
ಮೈಸೂರಿನಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ರೈತ ಮುಖಂಡ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು   

ಮೈಸೂರು: ‘ಸೀಗೆಕಾಯಿ ಉತ್ಪನ್ನಗಳನ್ನು ತಯಾರಿಸಿ ಪ್ಯಾಕಿಂಗ್ ಮಾಡಿ, ಮಾರಾಟಕ್ಕೆ ರೈತ ಮಹಿಳೆಯರು ಮುಂದಾಗಬೇಕು’ ಎಂದು ಜಾಗೃತಕೋಶದ ಉಪ ಕೃಷಿ ನಿರ್ದೇಶಕಿ ಮಮತಾ ಎಚ್.ಎನ್. ಸಲಹೆ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಎನ್.ಆರ್.ಎಲ್.ಎಂ. ಸಹಯೋಗದಲ್ಲಿ ರಾಜ್ಯವಲಯ ಯೋಜನೆಯಡಿ ಈಚೆಗೆ ಪಿರಿಯಾಪಟ್ಟಣ ತಾಲ್ಲೂಕಿನ ರೈತ ಮಹಿಳೆಯರಿಗೆ ಸೀಗೆಕಾಯಿ ಉತ್ಪನ್ನಗಳು, ಅರಣ್ಯ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆ ಕುರಿತು ಏರ್ಪಡಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಸೀಗೆಪುಡಿ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರು ಇಲ್ಲ. ಈ ಅವಕಾಶ ಬಳಸಿಕೊಂಡು ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಚಾಮರಾಜನಗರ ಜಿಲ್ಲೆಯ ರೈತ ಮುಖಂಡ ಹೊನ್ನೂರು ಪ್ರಕಾಶ್, ‘ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ತರಕಾರಿ, ಹಣ್ಣು ಮತ್ತು ಬೆಳೆಗಳನ್ನು ನಮ್ಮ ಜಮೀನಿನಲ್ಲಿಯೇ ಬೆಳೆದು ತಿನ್ನುವುದರಿಂದ ರೈತರು ಸ್ವಾವಲಂಬಿಗಳಾಗಬಹುದು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಅಭಿಜಿತ್ ‘ಸೀಗೆಪುಡಿ, ಅಂಟವಾಳ ಕಾಯಿ, ಇತರ ಸೊಪ್ಪು, ಗಿಡಮರಗಳ ತೊಗಟೆ, ಎಲೆಗಳು, ಬೇರುಗಳು ಮತ್ತು ಹುತ್ತದ ಮಣ್ಣಿನಿಂದ ಶಾಂಪು, ಸೋಪು ಮತ್ತು ಹಲ್ಲು ಪುಡಿ ತಯಾರಿಕೆ ಕುರಿತು ಮಾಹಿತಿ ನೀಡಿದರು.

ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಭಾಗೀರಥಿ, ಸಹಾಯಕ ಪ್ರಾಧ್ಯಾಪಕ ಗಣೇಶ್‌ಪ್ರಸಾದ್, ಮಂಡ್ಯ ವಿ.ಸಿ. ಫಾರಂನ ಸಹಾಯಕ ಪ್ರಾಧ್ಯಾಪಕ ಮಹದೇವು ಜೆ., ಹನುಮನಹಳ್ಳಿ ಪ್ರಗತಿಪರ ರೈತ ಮಹಿಳೆ ಇಂದ್ರಮ್ಮ ಮಾತನಾಡಿದರು.

ಕುಶಾಲನಗರ ತಾಲ್ಲೂಕು ಬಸವನಹಳ್ಳಿಯ ಯಶವಂತ್ ಅವರ ಜಮೀನಿನಲ್ಲಿ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.

ಸಹಾಯಕ ಕೃಷಿ ನಿರ್ದೇಶಕಿ ಮಧುಲತಾ ಎಚ್‌.ಬಿ., ತರಬೇತಿ ಸಂಯೋಜಕಿ ಗೌರವ್ವ ಅಗಸೀಬಾಗಿಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.