ADVERTISEMENT

ರಂಗಭೂಮಿಯಲ್ಲಷ್ಟೇ ಪ್ರಶ್ನಿಸುವ ಚೈತನ್ಯ: ಸಂಗೀತ ನಿರ್ದೇಶಕ ಹಂಸಲೇಖ

‘ಶ್ರಾವಣ ರಂಗೋತ್ಸವ’ ಉದ್ಘಾಟಿಸಿದ ಹಂಸಲೇಖ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 5:04 IST
Last Updated 16 ಆಗಸ್ಟ್ 2025, 5:04 IST
ಮೈಸೂರಿನ ಜಿಪಿಐಇಆರ್‌ ರಂಗತಂಡವು 31ನೇ ವಾರ್ಷಿಕೋತ್ಸವದ ಅಂಗವಾಗಿ ಕಿರುರಂಗಮಂದಿರದಲ್ಲಿ ಶನಿವಾರದಿಂದ ಆಯೋಜಿಸಿರುವ ‘ಶ್ರಾವಣ ರಂಗೋತ್ಸವ’ವನ್ನು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹಾರ್ಮೋನಿಯಂ ಬಾರಿಸಿ ಉದ್ಘಾಟಿಸಿದರು. ಹರಿದತ್ತ, ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಮೈಮ್‌ ರಮೇಶ್‌, ಗೀತಾ ಮೋಂಟಡ್ಕ, ರಿಷಿ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಜಿಪಿಐಇಆರ್‌ ರಂಗತಂಡವು 31ನೇ ವಾರ್ಷಿಕೋತ್ಸವದ ಅಂಗವಾಗಿ ಕಿರುರಂಗಮಂದಿರದಲ್ಲಿ ಶನಿವಾರದಿಂದ ಆಯೋಜಿಸಿರುವ ‘ಶ್ರಾವಣ ರಂಗೋತ್ಸವ’ವನ್ನು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹಾರ್ಮೋನಿಯಂ ಬಾರಿಸಿ ಉದ್ಘಾಟಿಸಿದರು. ಹರಿದತ್ತ, ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಮೈಮ್‌ ರಮೇಶ್‌, ಗೀತಾ ಮೋಂಟಡ್ಕ, ರಿಷಿ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಎಲ್ಲವನ್ನೂ ಒಪ್ಪಿಕೊಳ್ಳುವ ಸಾಮಾಜಿಕ ವ್ಯವಸ್ಥೆಯಲ್ಲಿ, ಏಕೆ ಎಂದು ಪ್ರಶ್ನಿಸುವ ಚೈತನ್ಯ ರಂಗಭೂಮಿಯಲ್ಲಷ್ಟೇ ಉಳಿದಿದೆ’ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಪಾದಿಸಿದರು.

ಜಿಪಿಐಇಆರ್‌ ರಂಗತಂಡವು 31ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರದ ಕಲಾಮಂದಿರ ಆವರಣದಲ್ಲಿ ಆಯೋಜಿಸಿರುವ ‘ಶ್ರಾವಣ ರಂಗೋತ್ಸವ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಸಂವಿಧಾನವನ್ನು ಸಮರ್ಪಿಸುವಾಗ, ದೇಶದ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಭಯವಿದೆ ಎಂದಿದ್ದರು. ದೇಶದಲ್ಲಿನ ರಾಜಕೀಯ ಒಳಜಗಳಗಳು ಅವರ ಚಿಂತೆಗೆ ಕಾರಣವಾಗಿತ್ತು. ಪ್ರಸ್ತುತ ನಮ್ಮ ಧ್ವನಿ ಬಿಗಿಯಾಗುತ್ತಿದೆ. ಲೇಖನಿ ಮುಚ್ಚಿದೆ. ಎಲ್ಲಿ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇವೋ ಎಂಬ ಭಯ ಆವರಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರದ ಸ್ಪಷ್ಟತೆ ನಮ್ಮಲ್ಲಿರಬೇಕು. ಜೋಪಾನ ಮಾಡಿಟ್ಟುಕೊಂಡು ಎಚ್ಚರಿಕೆಯಿಂದ ಆಚರಿಸುವುದೇ ಸ್ವಾತಂತ್ರ್ಯ ಎಂಬುವುದನ್ನು ಅರಿಯಬೇಕು. ಅದು ರಂಗಕರ್ಮಿಯ ಆತ್ಮವಾಗಬೇಕು. ನಮ್ಮ ವಿಚಾರಗಳನ್ನು ಅಭಿವ್ಯಕ್ತಗೊಳಿಸಲು ಮಾತು, ಹೋರಾಟಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಹೀಗಾಗಿ ಅದಕ್ಕೆ ರಂಗಭೂಮಿ, ಮೈಮ್‌ ಉತ್ತಮ ವೇದಿಕೆ ಆಗಬಲ್ಲದು’ ಎಂದು ತಿಳಿಸಿದರು.

ಶಾಸಕ ಕೆ.ಹರೀಶ್‌ ಗೌಡ ಮಾತನಾಡಿ, ‘ಎಲ್ಲಾ ಧರ್ಮದವರೂ ಸೇರಿ ಹೋರಾಡಿ ನಮಗೆ ಸ್ವಾತಂತ್ರ್ಯ ಕೊಡಿಸಿದರು. ಆದರೆ, ನಾವು ಭಾರತಾಂಬೆ ನನ್ನ ಧರ್ಮಕ್ಕೆ ಸೇರಿದವರು ಎಂದು ಕಿತ್ತಾಡುತ್ತಿದ್ದೇವೆ. ಶಾಲಾ– ಕಾಲೇಜುಗಳಲ್ಲಿ ಒಂದು ಧರ್ಮವನ್ನು ಓಲೈಸುವ ಮಕ್ಕಳಲ್ಲಿ ಮತಾಂಧತೆ ತುಂಬುವ ಕೆಲಸವಾಗುತ್ತಿದೆ. ಇವುಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

ಚಲನಚಿತ್ರ ನಟ ರಿಷಿ, ರಂಗಾಯಣ ಕಲಾವಿದೆ ಗೀತಾ ಮೋಂಟಡ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಜಿಪಿಐಇಆರ್‌ ರಂಗತಂಡದ ನಿರ್ದೇಶಕ ಮೈಮ್‌ ರಮೇಶ್‌, ಸಂಚಾಲಕ ಹರಿದತ್ತ ಭಾಗವಹಿಸಿದ್ದರು.

ನಂತರ, ಬೆಂಗಳೂರಿನ ರಂಗಪಯಣ ತಂಡದವರು ರಾಜಗುರು ಹೊಸಕೋಟೆ ನಿರ್ದೇಶನದಲ್ಲಿ ‘ಹೆಸರೇ ಇಲ್ಲದವರು’ ನಾಟಕ ಪ್ರಸ್ತುತಪಡಿಸಿದರು.

ಮೂರು ದಿನ ನಡೆಯಲಿರುವ ರಂಗೋತ್ಸವ ಹಿರಿಯ ರಂಗಕರ್ಮಿಗಳು ಭಾಗಿ ‘ಹೆಸರೇ ಇಲ್ಲದವರು’ ನಾಟಕ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.