ಮೈಸೂರು: ‘ಸ್ವಾತಂತ್ರ್ಯ ನಂತರ ದೇಶವು ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ತೃತೀಯ ರಾಷ್ಟ್ರಗಳಲ್ಲಿ ರೇಷ್ಮೆ ಉದ್ಯಮದ ಬೆಳವಣಿಗೆಗೂ ನೆರವಾಗಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕ ಡಾ.ಎಸ್.ಮಂಥಿರಾ ಮೂರ್ತಿ ಹೇಳಿದರು.
ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ವಿದೇಶಾಂಗ ಸಚಿವಾಲಯದ ‘ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ’ ಕಾರ್ಯಕ್ರಮದಡಿ ಬುಧವಾರ ಆಯೋಜಿಸಿದ್ದ ‘ರೇಷ್ಮೆ ಕೃಷಿ ಹಾಗೂ ರೇಷ್ಮೆ ಉದ್ಯಮ’ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾ ದೇಶಗಳಲ್ಲಿ ರೇಷ್ಮೆ ಕ್ಷೇತ್ರದ ಉನ್ನತೀಕರಣಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನ ಸಹಕಾರವನ್ನ ನೀಡುತ್ತಿದೆ. ಇದಕ್ಕಾಗಿಯೇ ‘ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ’ ಕಾರ್ಯಕ್ರಮವನ್ನು 1961ರಲ್ಲಿ ಆರಂಭಿಸಿತ್ತು’ ಎಂದು ಸ್ಮರಿಸಿದರು.
‘ತರಬೇತಿ ಕಾರ್ಯಾಗಾರಗಳು ದೇಶಗಳ ಸ್ನೇಹವನ್ನು ಬೆಸೆಯುತ್ತದೆ. ಅಂತರರಾಷ್ಟ್ರೀಯ ಸಹಕಾರವನ್ನು ಗಟ್ಟಿಗೊಳಿಸುತ್ತದೆ. ವಿದೇಶಿಯರಿಗಾಗಿ ಸುಸ್ಥಿರ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಮಂಡಳಿಯ ಸಹಾಯಕ ಕಾರ್ಯದರ್ಶಿಯೂ ಆದ ಅಂತರರಾಷ್ಟ್ರೀಯ ರೇಷ್ಮೆ ಸಮಿತಿಯ (ಐಎಸ್‌ಸಿ) ಸಂಯೋಜಕ ಪದ್ಮನಾಭ ನಾಯಕ ಮಾತನಾಡಿ, ‘ಭಾರತೀಯ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ವಿಶ್ವದ ವಿವಿಧೆಡೆ ರೇಷ್ಮೆ ಅಭಿವೃದ್ಧಿಗೆ ಐಎಸ್‌ಸಿ ಕೈ ಜೋಡಿಸಿದೆ. ಫ್ರಾನ್ಸ್‌ನಲ್ಲಿ 1870ರಲ್ಲಿ ಆರಂಭವಾದ ಸಮಿತಿಯು 2013ರಲ್ಲಿ ಬೆಂಗಳೂರಿಗೆ ಮುಖ್ಯ ಕಚೇರಿಯನ್ನು ವರ್ಗಾವಣೆಯಿಸಿಕೊಂಡಿತು. ಅದಕ್ಕೆ ದೇಶದಲ್ಲಿ ರೇಷ್ಮೆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯೇ ಕಾರಣ’ ಎಂದರು.
‘ಕೃಷಿ ಮತ್ತು ಜವಳಿ ಉದ್ಯಮಗಳ ಪ್ರಗತಿಯಲ್ಲಿ ರೇಷ್ಮೆಯೂ ಪ್ರಮುಖ ಪಾತ್ರವಹಿಸಿದೆ. ತೃತೀಯ ಜಗತ್ತಿನ ದೇಶಗಳಿಗೆ ಭಾರತವು ನೆರವಾಗುವ ಮೂಲಕ ವಿಶ್ವದ ಆರ್ಥಿಕತೆಗೆ ಭಾರತವು ಹೆಗಲಾಗಿದೆ. ಈ ಬಾರಿ 47 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 30 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಇದುವರೆಗೂ 400ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ’ ಎಂದರು.
ಸನ್ಮಾನ: 8 ದೇಶಗಳ 30 ಪ್ರತಿನಿಧಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈಜಿಪ್ಟ್‌ನ 15, ಕ್ಯೂಬಾ, ಇಥಿಯೋಪಿಯಾದ ತಲಾ 3 ಮಂದಿ, ಘಾನಾ, ಥೈಲ್ಯಾಂಡ್ ಹಾಗೂ ಫಿಲಿಪ್ಪೀನ್ಸ್‌ನ ತಲಾ 2 ಮಂದಿ, ಉಗಾಂಡಾ, ತಾಂಜೇನಿಯಾದ ತಲಾ ಒಬ್ಬರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಡಾ.ಪಿ.ದೀಪಾ, ರೇಷ್ಮೆ ವಿಜ್ಞಾನಿಗಳಾದ ಡಾ.ಮಧುಸೂದನ್, ಎಲ್.ಕುಸುಮಾ, ಎಂ.ಎಸ್.ರಂಜಿನಿ ಪಾಲ್ಗೊಂಡಿದ್ದರು.
ಹತ್ತಿ ಬಳಿಕ ರೇಷ್ಮೆ ಕೃಷಿ ಮತ್ತು ಉದ್ಯಮ ನಮ್ಮ ದೇಶದಲ್ಲಿ ಬೆಳವಣಿಗೆ ಕಾಣುತ್ತಿದೆ. ಭಾರತವು ತಾಂತ್ರಿಕ ನೆರವು ನೀಡುತ್ತಿದ್ದು ತರಬೇತಿಗೆ ಬಂದಿರುವೆಮೊಹಮ್ಮದ್ ಘಾದ್ ನ್ಯೂ ವ್ಯಾಲಿ ಈಜಿಪ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.