ಮೈಸೂರು: ಇಲ್ಲಿನ ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವದ ಸವಿನೆನಪಿನ ಸಂದರ್ಭದಲ್ಲೇ ‘ಚರ್ಮ ಬ್ಯಾಂಕ್’ ಸ್ಥಾಪನೆ ಆಗಲಿದ್ದು, ಸುಟ್ಟರೋಗಿಗಳ ಪಾಲಿಗೆ ಸಂಜೀವಿನಿ ಆಗಲಿದೆ.
ಕೆ.ಆರ್. ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಈ ಬ್ಯಾಂಕ್ ಸ್ಥಾಪನೆಗೆ ಮೈಸೂರು ಮೆಡಿಕಲ್ ಕಾಲೇಜು ಯೋಜಿಸಿದ್ದು, ಪ್ರಾಯೋಜಕತ್ವಕ್ಕಾಗಿ ರೋಟರಿ ಕ್ಲಬ್ ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಸಂಪರ್ಕದಲ್ಲಿದೆ. ಸೆಪ್ಟೆಂಬರ್‌ನಲ್ಲಿ ಕಾಲೇಜಿನ ಶತಮಾನೋತ್ಸವ ಸಂಭ್ರಮ ನಡೆಯಲಿದ್ದು, ಆ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.
ಏನಿದು ಚರ್ಮ ಬ್ಯಾಂಕ್: ವ್ಯಕ್ತಿಯೊಬ್ಬರು ಸತ್ತ ಬಳಿಕ ಆತ/ಆಕೆಯ ದೇಹದ ಇತರ ಅಂಗಾಂಗಗಳನ್ನು ದಾನ ಮಾಡುವಂತೆ ಚರ್ಮವನ್ನು ದಾನ ಮಾಡಬಹುದಾಗಿದೆ. ವ್ಯಕ್ತಿ ಮೃತಪಟ್ಟ 6 ಗಂಟೆಗಳ ಒಳಗೆ ಅವರ ಚರ್ಮವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿದಲ್ಲಿ ಅದನ್ನು ಸಂಸ್ಕರಿಸಿ 2–3 ವಾರ ಕಾಲ ಶೇಖರಿಸಿಟ್ಟು ಮತ್ತೊಬ್ಬರಿಗೆ ಬಳಸಬಹುದಾಗಿದೆ. ಹೀಗೆ ಚರ್ಮವನ್ನು ಸಂಗ್ರಹಿಸುವ ಕೆಲಸವನ್ನು ಈ ‘ಸ್ಕಿನ್ ಬ್ಯಾಂಕ್’ ಮಾಡಲಿದೆ.
‘ಸುಟ್ಟ ಗಾಯಗಳಿಂದ ಬಳಲುವ ವ್ಯಕ್ತಿಗಳಿಗೆ ಬದಲಿ ಚರ್ಮ ಬಳಸಲು ಅವಕಾಶ ಇದೆ. ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾದ ಬದಲಿ ಚರ್ಮವು ಮುಂದಿನ 2–3 ವಾರಗಳ ಕಾಲ ಮಾತ್ರವೇ ಜೀವಂತವಾಗಿರುತ್ತದೆ. ಆ ಅವಧಿಯಲ್ಲಿ ಸೋಂಕಿನಿಂದ ರೋಗಿಯನ್ನು ರಕ್ಷಿಸುತ್ತದೆ. ಈ ಎರಡು ವಾರಗಳ ಅವಧಿಯಲ್ಲಿ ರೋಗಿಯು ಗಾಯದಿಂದ ಚೇತರಿಕೆ ಹೊಂದಿ, ಆತನ ದೇಹದಲ್ಲೇ ಹೊಸತಾಗಿ ಚರ್ಮ ಬೆಳೆಯುತ್ತದೆ. ಚರ್ಮ ಬ್ಯಾಂಕ್ ಸ್ಥಾಪನೆಯಿಂದ ಸಾಕಷ್ಟು ರೋಗಿಗಳಿಗೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ್ ಜಿ. ಕಾಕೋಳ.
‘ರಾಜ್ಯದಲ್ಲಿ ಸದ್ಯ ಬೆಂಗಳೂರು, ಬೆಳಗಾವಿ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಮಾತ್ರವೇ ಚರ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ನಾಲ್ಕನೇ ಬ್ಯಾಂಕ್ ಇದಾಗಲಿದೆ. ಸದ್ಯ ಇಲ್ಲಿನ ರೋಗಿಗಳಿಗೆ ಚರ್ಮದ ಅಗತ್ಯ ಇದ್ದಲ್ಲಿ ಬೆಂಗಳೂರಿನಿಂದ ತರಿಸಲಾಗುತ್ತಿದೆ. ಇಲ್ಲಿ ಈ ಕೇಂದ್ರ ಸ್ಥಾಪನೆ ಆಗುವುದರಿಂದ ಮೈಸೂರಿನ ಜೊತೆಗೆ ಸುತ್ತಲಿನ ಜಿಲ್ಲೆಗಳ ರೋಗಿಗಳಿಗೂ ಅನುಕೂಲ ಆಗಲಿದೆ. ಇಲ್ಲಿಂದ ಬೇರೆಡೆಗೆ ಕಳುಹಿಸಲೂ ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.
ಜಾಗೃತಿಯ ಆಶಯ: ಚರ್ಮ ದಾನದ ಕುರಿತು ಜನರಲ್ಲಿ ಜಾಗೃತಿ ಕಡಿಮೆ ಇದೆ. ಹೀಗಾಗಿ ಚರ್ಮ ಬ್ಯಾಂಕ್ ಸ್ಥಾಪನೆಯ ಬಳಿಕ ಜನರಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮೆಡಿಕಲ್ ಕಾಲೇಜು ಯೋಜಿಸಿದೆ.
ಸುಟ್ಟಗಾಯಗಳ ವಿಭಾಗದಲ್ಲಿ ಚರ್ಮ ಬ್ಯಾಂಕ್ ಸ್ಥಾಪನೆ ಸಾಕಷ್ಟು ರೋಗಿಗಳಿಗೆ ಅನುಕೂಲ
ಎಂಎಂಸಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವು ಸದ್ಯದಲ್ಲೇ ನಡೆಯಲಿದ್ದು ಆ ವೇಳೆಗೆ ಚರ್ಮ ಬ್ಯಾಂಕ್ ಸ್ಥಾಪನೆಗೆ ಯೋಜಿಸಿದ್ದೇವೆ. ಯೋಜನೆಯು ಅಂತಿಮ ರೂಪುರೇಷೆಯ ಹಂತದಲ್ಲಿದೆಡಾ. ಕೆ.ಆರ್. ದಾಕ್ಷಾಯಿಣಿ ಡೀನ್ ಮೈಸೂರು ಮೆಡಿಕಲ್ ಕಾಲೇಜು
ಚರ್ಮ ಬ್ಯಾಂಕ್ ಸ್ಥಾಪನೆಯಿಂದ ಸುಟ್ಟ ರೋಗಿಗಳಿಗೆ ಸಕಾಲದಲ್ಲಿ ಬದಲಿ ಚರ್ಮ ಸಿಗಲಿದೆ. ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವ ಈ ಚರ್ಮವು ರೋಗಿಯ ದೇಹದಲ್ಲಿ 2–3 ವಾರ ಕಾಲ ಉಳಿದು ಸೋಂಕಿನಿಂದ ಕಾಪಾಡಲಿದೆಡಾ. ಮೋಹನ್ ಜಿ. ಕಾಕೋಳ ಪ್ರಾಧ್ಯಾಪಕ ಮೈಸೂರು ಮೆಡಿಕಲ್ ಕಾಲೇಜು
ಎಂಎಂಸಿ: 50 ಸೀಟು ಹೆಚ್ಚಳ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಮೈಸೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 150ರಿಂದ 200ಕ್ಕೆ ಹೆಚ್ಚಿಸಿದೆ. 2024–25ನೇ ಸಾಲಿನಿಂದಲೇ ಇದು ಜಾರಿಗೆ ಬರಲಿದೆ ಎಂದು ಕಾಲೇಜಿನ ಡೀನ್ ಡಾ. ಕೆ.ಆರ್. ದಾಕ್ಷಾಯಿಣಿ ತಿಳಿಸಿದ್ದಾರೆ. 2011ನೇ ಸಾಲಿನಲ್ಲಿ ಇಲ್ಲಿನ ಎಂಬಿಬಿಎಸ್ ಸೀಟುಗಳ ಸಂಖ್ಯೆಯು 100ರಿಂದ 150ಕ್ಕೆ ಏರಿಕೆ ಆಗಿತ್ತು. ಸೀಟು ಹೆಚ್ಚಳ ಕೋರಿ ಕಾಲೇಜು 2021ರಲ್ಲಿ ಎನ್‌ಎಂಸಿಗೆ ಪ್ರಸ್ತಾವ ಸಲ್ಲಿಸಿತ್ತು. ‘ಸದ್ಯ ಪ್ರವೇಶಾತಿ ಪ್ರಕ್ರಿಯೆಯು ಮ್ಯಾಟ್ರಿಕ್ಸ್ ನಿಗದಿ ಹಂತದಲ್ಲಿದ್ದು ಸೆಪ್ಟೆಂಬರ್‌ನಲ್ಲಿ ಪ್ರವೇಶಾತಿ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.