
ತಿ.ನರಸೀಪುರ: ಪಟ್ಟಣದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್‌ಐಸಿ) ಆವರಣದಲ್ಲಿ ತಾಲ್ಲೂಕು ವಿವಿಧೋದ್ದೇಶ ಕ್ರೀಡಾಂಗಣ ತಲೆ ಎತ್ತಲಿದ್ದು, ಅಲ್ಲಿ ಬೆಳೆಬಾಳುವ 552 ಮರಗಳ ಹನನಕ್ಕೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಯುವಜನ ಹಾಗೂ ಕ್ರೀಡಾ ಸಬಲೀಕರಣ ಇಲಾಖೆಯ ಅಧಿಕಾರಿಗಳು ಈಚೆಗೆ ಕ್ರೀಡಾಂಗಣ ನಿರ್ಮಾಣ ಜಾಗದ ಪರಿಶೀಲನೆಗೆ ಬಂದಿದ್ದು, ಈ ಬಗ್ಗೆ ಕಾರ್ಖಾನೆ ಅಧಿಕಾರಿಗಳಿಗೂ ಗೊತ್ತಿಲ್ಲ. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರು, ‘ಮರಗಳ ಹನನಕ್ಕೆ ಮುಂದಾದರೆ ಪರಿಸರಕ್ಕೆ ತೀವ್ರ ಹಾನಿಯಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
5 ಎಕರೆ ಮಂಜೂರು
ತಾಲ್ಲೂಕು ಕ್ರೀಡಾಂಗಣ ನಿರ್ಮಾಣವು ಹಲವು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ತಾಲ್ಲೂಕಿನ ಕ್ರೀಡಾಪ್ರಿಯರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ 5 ಎಕರೆ ಪ್ರದೇಶ ನಿಗದಿ ಮಾಡಿ, ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೇ ಸದರಿ ಜಾಗವನ್ನು ಈಗಾಗಲೇ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಯಾವ್ಯಾವ ಮರಗಳಿವೆ
55 ತೇಗ, 24 ಗಂಧ, ತಲಾ 7 ಅರಳಿ, ಮಹಾಗನಿ, 12 ಬೇವು, 53 ತೆಂಗು, 82 ಅಡಿಕೆ, 14 ಸಿಲ್ವರ್, ತಲಾ 11 ಹುಣಸೆ, ಸೀಬೆ, ನೇರಳೆ ಸೇರಿದಂತೆ 552 ಮರಗಳಿದ್ದು, ಕ್ರೀಡಾಂಗಣಕ್ಕೆ ಇಷ್ಟು ಮರಗಳು ಉರುಳಲಿವೆ. ಈಗಾಗಲೇ ಜೆಸಿಬಿ ಯಂತ್ರಗಳು ಆವರಣಕ್ಕೆ ಬಂದಿದ್ದು, ಅದರಿಂದ ಪಟ್ಟಣಕ್ಕಿದ್ದ ಹಸಿರು ವಲಯ ನಾಶವಾಗಲಿದೆ.
ಪರಿಸರವಾದಿಗಳ ಭೇಟಿ
ಕಾಂಗ್ರೆಸ್ ಮುಖಂಡ ಅಹಿಂದ ಜವರಪ್ಪ, ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ, ಬಾನು ಪ್ರಶಾಂತ್, ಶೈಲಜೇಶ, ಗಂಟಯ್ಯ ಮೈಸೂರಿನಿಂದ ತಿ.ನರಸೀಪುರಕ್ಕೆ ಬುಧವಾರ ಆಗಮಿಸಿ ಪರಿಶೀಲನೆ ನಡೆಸಿದರು.
‘ಮರಗಳು ಸಮೃದ್ಧವಾಗಿದ್ದು, ಜೀವಸಂಕುಲದ ತಾಣವಾಗಿದೆ. ಕ್ರೀಡಾಂಗಣ ಕಟ್ಟುವುದು ಅಮಾನವೀಯ. ಅದಕ್ಕಾಗಿ ಬೇರೆಡೆಗೆ ಸ್ಥಳ ಮಂಜೂರು ಮಾಡಲಿ’ ಎಂದು ಪರಶುರಾಮೇಗೌಡ ಒತ್ತಾಯಿಸಿದರು.
ಸಂಜಯ್‌ಗುಬ್ಬಿ ಬೆಂಬಲ
ಪರಿಸರಕ್ಕಾಗಿ ನಾವು ಸಂಘಟನೆಯ ಹೋರಾಟಕ್ಕೆ ವನ್ಯಜೀವಿ ತಜ್ಞ ಸಂಜಯ್‌ಗುಬ್ಬಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳ ಮರಗಳನ್ನು ಉರುಳಿಸುವುದೆಂದರೆ ಅದು ಯಾವ ಅಭಿವೃದ್ಧಿ? ಉದ್ದೇಶಿತ ಕ್ರೀಡಾಂಗಣ ನಿರ್ಮಾಣ ಬೇರೆಡೆಗೆ ಸ್ಥಳಾಂತರಿಸದಿದ್ದರೆ ಹೋರಾಟ ಅನಿವಾರ್ಯ
–ಪರಶುರಾಮೇಗೌಡ ಪರಿಸರಕ್ಕಾಗಿ ನಾವು ಸಂಘಟನೆ
70–80 ವರ್ಷಗಳಲ್ಲಿ ಬೆಳೆದಿರುವ ಪರಿಸರ ವ್ಯವಸ್ಥೆಯನ್ನು ನಾಶ ಮಾಡುವುದು ಅತ್ಯಂತ ದುರ್ಬುದ್ಧಿಯ ನಿರ್ಧಾರ. ಪರ್ಯಾಯ ಜಾಗ ಹುಡುಕಿ ಒಂದೊಂದು ಮರದ ಮೌಲ್ಯ ಅಪಾರ
–ಸಂಜಯ್ ಗುಬ್ಬಿ ವನ್ಯಜೀವಿ ತಜ್ಞ
–––
‘ಯಾವುದೇ ತೊಂದರೆ ಇಲ್ಲ’
‘ಮರಗಳನ್ನು ಹನನ ಮಾಡದೇ ಕ್ರೀಡಾಂಗಣ ನಿರ್ಮಿಸಲಾಗುವುದು. ಈ ಬಗ್ಗೆ ಆತಂಕ ಬೇಡ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ 5 ಎಕರೆ ಭೂಮಿ ಗುರುತಿಸಿ ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸರ್ವೆ ಕೂಡ ಮಾಡಲಾಗಿದೆ. ಕ್ರೀಡಾಂಗಣದಿಂದ ಕೆಎಸ್‌ಐಸಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ಇಲಾಖೆ ಪರಿಸರ ಸ್ನೇಹಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.