ಮೈಸೂರು: ‘ತಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುವ ಮೂಲಕ ಕಾರ್ಖಾನೆ ಹಾಗೂ ಪರಿಸರಕ್ಕೆ ಧಕ್ಕೆ ತರುವ ಯತ್ನವನ್ನು ಕೈಬಿಡದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಬೇಕಾಗುತ್ತದೆ’ ಎಂದು ಮೈಸೂರು ಗ್ರಾಹಕರ ಪರಿಷತ್ ಎಚ್ಚರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ದಿನೇಶ್, ‘ನಾವು ಕ್ರೀಡಾಂಗಣ ನಿರ್ಮಾಣದ ವಿರುದ್ಧವಲ್ಲ. ಆದರೆ ಆಯ್ಕೆ ಮಾಡಿರುವ ಜಾಗ ಸೂಕ್ತವಾದುದಲ್ಲ. ಮೈಸೂರು ರೇಷ್ಮೆ ಸೀರೆಗೆ ಉತ್ತಮ ಬೇಡಿಕೆಯಿದ್ದು, ಅದಕ್ಕೆ ಅಗತ್ಯವಾದ ನೂಲು ನೀಡುವ ಈ ಕಾರ್ಖಾನೆಯನ್ನು ಇನ್ನಷ್ಟು ವಿಸ್ತರಿಸಬೇಕಾಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಹ ಸಿಗಲಿದೆ. ಕ್ರೀಡಾಂಗಣ ನಿರ್ಮಿಸುವುದರಿಂದ ಇದಕ್ಕೆ ಅಡ್ಡಿಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸ್ಥಾಪಕ ಅಧ್ಯಕ್ಷ ಭಾಮಿ ವಿ. ಶೆಣೈ ಮಾತನಾಡಿ, ‘ಕಾರ್ಖಾನೆಯ 12 ಎಕರೆ ಜಾಗದಲ್ಲಿ 5 ಎಕರೆಯನ್ನು ಕ್ರೀಡಾಂಗಣಕ್ಕೆ ನೀಡಲಾಗುತ್ತಿದೆ. ಇದರ ವಿರುದ್ಧ ಹಲವರು ಧ್ವನಿಯೆತ್ತಿದ್ದರೂ ಹಠಕ್ಕೆ ಬಿದ್ದು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಸುಮಾರು 550 ಮರಗಳನ್ನು ಕಡಿಯಬೇಕಾಗುತ್ತದೆ. ಮರಗಳು ಹವಾಮಾನ ವೈಪರೀತ್ಯ ತಡೆಯುವ ಕೆಲಸ ಮಾಡುತ್ತಿವೆ. ಈ ಕಾರಣ ಪರಿಷತ್ತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಚಿಂತಿಸಿದೆ’ ಎಂದರು.
ವಕೀಲ ಅರುಣ್‌ಕುಮಾರ್ ಮಾತನಾಡಿ, ‘ಮೈಸೂರು ರೇಷ್ಮೆ ಸೀರೆಗೆ ತಿ.ನರಸೀಪುರ ಕಾರ್ಖಾನೆಯೇ ಆಧಾರವಾಗಿದೆ. ಇಲ್ಲಿ ನಿತ್ಯ ಆರರಿಂದ ಏಳು ಟನ್ ಕಲ್ಲಿದ್ದಲು ಸುಡುತ್ತಾರೆ. ಇದರಿಂದ ಬರುವ ಹಾರು ಬೂದಿ ಎಲ್ಲೆಡೆ ಹರಡದಂತೆ ಈ ಮರಗಳು ನೋಡಿಕೊಂಡು, ಹವಾಮಾನ ವೈಪರೀತ್ಯ ತಡೆಯುತ್ತಿವೆ. ಇಲ್ಲಿ ಕ್ರೀಡಾಂಗಣ ನಿರ್ಮಿಸಿದರೂ ಕಾರ್ಖಾನೆಯಿಂದ ಬರುವ ಕೆಟ್ಟ ವಾಸನೆ ನಡುವೆ ಕ್ರೀಡೆಗಳು ನಡೆಯವುದು ಅಸಾಧ್ಯ. ಕಾರ್ಖಾನೆಯಲ್ಲಿ ಬಾಯ್ಲರ್ ಸಹ ಇರುವುದರಿಂದ ಅಪಾಯಕಾರಿಯಾಗಿದೆ. ಆದರೂ ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿರುವುದು ಅನುಮಾನ ಮೂಡಿಸುತ್ತದೆ’ ಎಂದು ಹೇಳಿದರು.
ಪರಿಷತ್‌ನ ಸದಸ್ಯರಾದ ಪ್ರಭಾ ನಂದೀಶ್, ಪ್ರಗ್ಯಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.