ಮೈಸೂರು: ‘ಕೇಂದ್ರ ಸರ್ಕಾರವು ‘ಅನ್ನಪೂರ್ಣ’ ಯೋಜನೆಯಡಿ 60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಉಚಿತವಾಗಿ ತಲಾ 10 ಕೆ.ಜಿ. ಅಕ್ಕಿ ನೀಡುತ್ತದೆ. ಆದರೆ, ರಾಜ್ಯ ಸರ್ಕಾರದಿಂದ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸದ ಕಾರಣ ಕರ್ನಾಟಕದಲ್ಲಿ ಜಾರಿಯಾಗಿಲ್ಲ’ ಎಂದು ರಾಜ್ಯಸಭಾ ಸದಸ್ಯ, ಭಾರತೀಯ ಆಹಾರ ನಿಗಮದ ರಾಜ್ಯ ಮಟ್ಟದ ಸಲಹಾ ಸಮಿತಿಯ (ಎಸ್‌ಎಲ್‌ಸಿಸಿ) ಅಧ್ಯಕ್ಷರೂ ಆಗಿರುವ ಈರಣ್ಣ ಕಡಾಡಿ ದೂರಿದರು.
‘ಹಲವು ರಾಜ್ಯಗಳಲ್ಲಿ ಯೋಜನೆಯ ಲಾಭ ಪಡೆದುಕೊಳ್ಳಲಾಗುತ್ತಿದೆ. ಆದರೆ, ನಮ್ಮಲ್ಲಿ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಕಲ್ಪಿಸುವ ಕಾಳಜಿಯನ್ನು ಕಾಂಗ್ರೆಸ್ ಸರ್ಕಾರ ತೋರಿಲ್ಲ. ಈಗಲೂ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರಕ್ಕೆ ಒದಗಿಸಿದರೆ, ಇಲ್ಲೂ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದು ಇಲ್ಲಿ ಗುರುವಾರ ನಡೆದ ಸಲಹಾ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
‘ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವರಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲು 24 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. 10 ಕೆ.ಜಿ. ಕೊಡುವುದಾದರೆ 48 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 10 ಕೆ.ಜಿ. ಉಚಿತವಾಗಿ ನೀಡುವ ಭರವಸೆ ಕೊಟ್ಟಿತ್ತು. ಈಗ, ರಾಜ್ಯದಲ್ಲೇ 50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆ ಆಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ, ಭತ್ತ ಖರೀದಿಸಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡಬಹುದು. ಇದರಿಂದ ರೈತರಿಗೂ ಅನುಕೂಲ ಆಗುತ್ತದೆ’ ಎಂದರು.
‘ರೈತರಿಂದ ನೇರವಾಗಿ ಅಕ್ಕಿ ಖರೀದಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಅಲ್ಲದೇ, ಎಷ್ಟು ಅಕ್ಕಿ ಬೇಕಾಗುತ್ತದೆ ಎಂಬ ಬೇಡಿಕೆ ಸಲ್ಲಿಸಿದರೆ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರೇ ಹೇಳಿದ್ದಾರೆ’ ಎಂದು ತಿಳಿಸಿದರು.
‘5 ಕೆ.ಜಿ. ಅಕ್ಕಿ ಬದಲಿಗೆ ಹಣ ಕೊಟ್ಟರೆ ಅದು ‘ಅನ್ನಭಾಗ್ಯ’ ಆಗುವುದಿಲ್ಲ. ಅಕ್ಕಿ ಲಭ್ಯವಿದ್ದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲವೇಕೆ?’ ಎಂದು ಕೇಳಿದರು.
ನಿಗಮದ ಪ್ರಧಾನ ವ್ಯವಸ್ಥಾಪಕ (ಕರ್ನಾಟಕ) ಬಿ.ಒ. ಮಹೇಶ್ವರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕ ಸಿ.ಎನ್. ಮಂಜುನಾಥ್, ಸದಸ್ಯರಾದ ಶಂಕರಪ್ಪ ಮುನವಳ್ಳಿ ಹಾಗೂ ರಾಘವೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.