
ಸಾಂದರ್ಭಿಕ ಚಿತ್ರ
ಮೈಸೂರು: ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದಿಂದ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 22 ಹಾಗೂ 23ರಂದು ಬೆಳಿಗ್ಗೆ 10ಕ್ಕೆ ರಾಜ್ಯಮಟ್ಟದ ಪ್ರಥಮ ಯೋಗ ಸಮ್ಮೇಳನವನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
‘ಸಮ್ಮೇಳನದ ಅಧ್ಯಕ್ಷರಾಗಿ ಕೆ.ಎಲ್. ಶಂಕರನಾರಾಯಣ ಜೋಯಿಸ್ ಆಯ್ಕೆಯಾಗಿದ್ದು, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ ಸ್ವಾಮೀಜಿ, ದತ್ತಪೀಠದ ವಿಜಯಾನಂದ ತೀರ್ಥ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಗುವುದು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಯೋಗ ಶಿಕ್ಷಕ ಎನ್.ಅನಂತ ಅವರ ‘ಮೈಸೂರು ಯೋಗ ಪರಂಪರೆ’ ಕೃತಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸುವರು’ ಎಂದು ಒಕ್ಕೂಟದ ಅಧ್ಯಕ್ಷ ಎಸ್.ಪಿ. ಯೋಗಣ್ಣ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಮ್ಮೇಳನದಲ್ಲಿ ಯೋಗದ ಇತಿಹಾಸ, ಪತಂಜಲಿಯ ಯೋಗಸೂತ್ರಗಳಲ್ಲಿ ವೈಜ್ಞಾನಿಕತೆ, ಭಗವದ್ಗೀತೆ, ಚಿಕಿತ್ಸೆಯಾಗಿ, ಅಧ್ಯಾತ್ಮ ಸಾಧನೆಗಾಗಿ ಯೋಗ ಮುಂತಾದ ವೈಜ್ಞಾನಿಕ ನೋಟವನ್ನು ಬಿಂಬಿಸುವ ವಿಚಾರಗೋಷ್ಠಿಗಳು ನಡೆಯಲಿದ್ದು, ಎಚ್.ವಿ. ನಾಗರಾಜರಾವ್, ನಾ. ಸೋಮೇಶ್ವರ, ನಾರಾಯಣ ಹೆಗ್ಗಡೆ, ಎಂ.ಪಿ. ವಿಜಯಕುಮಾರ್, ಯು.ಜೆ. ಆದರ್ಶ ವಿಚಾರ ಮಂಡಿಸಲಿದ್ದಾರೆ’ ಎಂದು ಹೇಳಿದರು.
‘ಯೋಗ ಸಿರಿ ಸವಿ’ ಸಂಚಿಕೆ, ಸಾಧಕರಿಗೆ ‘ಯೋಗ ರತ್ನಾಕರ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಯೋಗದ ಪ್ರಾತ್ಯಕ್ಷಿಕೆಗಳು, ಛಾಯಾಚಿತ್ರ ಪ್ರದರ್ಶನ, ಯೋಗ ಕುರಿತ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಮಾರೋಪ ಸಮಾರಂಭವವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದು, ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್ ಯೋಗ ಸಂಬಂಧಿತ ಕೃತಿಗಳನ್ನು ಬಿಡುಗಡೆ ಮಾಡುವರು’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ವಿ.ರಾಜೀವ್, ಬಿ.ಪಿ.ಮೂರ್ತಿ, ಟಿ.ಜಲೇಂದ್ರಕುಮಾರ್, ಎನ್.ಅನಂತ, ಅರವಿಂದ ಶರ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.