ಪಂಡಿತ್ ವೆಂಕಟೇಶ್ ಕುಮಾರ್
ಮೈಸೂರು: ‘ನಾನು ಮಾತಾಡಂವಲ್ಲ.. ಹಾಡಂವ’ ಎನ್ನುತ್ತಲೇ ಪಂಡಿತ್ ವೆಂಕಟೇಶ್ ಕುಮಾರ್ ಅವರು ಕನಕದಾಸರ ‘ತೊರೆದು ಜೀವಿಸಬಹುದೇ.. ಹರಿ ನಿನ್ನ ಚರಣಗಳ’ ಕೀರ್ತನೆಯನ್ನು ‘ಕೇದಾರಗೌಳ’ ರಾಗದಲ್ಲಿ ಭಾವದುಂಬಿ ಹಾಡುತ್ತಲೇ ತಮಗೆ ಸಂಗೀತ ಕಲಿಸಿದ ಗುರು ಪುಟ್ಟರಾಜ ಗವಾಯಿಗಳ ಕಾರುಣ್ಯವನ್ನು ನೆನೆಯುವುದನ್ನು ಮರೆಯಲ್ಲಿಲ್ಲ.
ಅರಮನೆಯ ಜಗಮಗಿಸುವ ವೇದಿಕೆಯಲ್ಲಿ ಸೋಮವಾರ ನಾಡಹಬ್ಬ ದಸರಾ ಮಹೋತ್ಸವದ 2025ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ವೀಕರಿಸಿ, ‘ಕಣ್ಣಿಲ್ಲದವರಾಗಿ ಹುಟ್ಟಿ ಎಲ್ಲರಿಗೂ ಕಣ್ಣಾದ ಗುರು ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಿಸುವೆ’ ಎಂದರು.
‘ಗುರುಗಳು ಎಲ್ಲ ಧರ್ಮ, ಜಾತಿಯ ಮಕ್ಕಳ ಉದ್ಧಾರಕ್ಕೆ ಶ್ರಮಿಸಿದರು. ಬಡತನದ ಕುಟುಂಬದಿಂದ ಬಂದವ ನಾನು. 12 ವರ್ಷ ತಮ್ಮ ಪುಣ್ಯಾಶ್ರಮದಲ್ಲಿ ಸಾಕಿ, ವಿದ್ಯೆ ಕೊಟ್ಟರು. ಇಂದು ದೇಶ ವಿದೇಶದಲ್ಲಿ ವೆಂಕಟೇಶ ಕುಮಾರ ಹೆಸರು ಮಾಡಿದ್ದರೆ, ಅದು ಅವರ ಕೃಪಾಶೀರ್ವಾದ’ ಎಂದು ಭಾವುಕರಾದರು.
‘ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವವರು ಬೇಕಾಗಿದೆ. ಉಳಿದಿದ್ದೆಲ್ಲ ಶೂನ್ಯ. ಜಾತಿ ನೋಡಬೇಡಿ, ನೀತಿ ನೋಡಿ ಎನ್ನುತ್ತಿದ್ದರು ಪುಟ್ಟರಾಜರು. ಬಡ ವಿದ್ಯಾರ್ಥಿಗಳನ್ನು ಹಳ್ಳಿಯಿಂದ ದೆಹಲಿಗೆ ಕಳುಹಿಸಿದರು. 40 ವರ್ಷದ ಹಿಂದೆ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಹಾಡಿದ್ದೆ. ಸಾಂಸ್ಕೃತಿಕ ನಗರಿಗಳಾದ ಮೈಸೂರು, ಧಾರವಾಡದ ಮಂದಿ ನನ್ನ ಸಂಗೀತ ಕೇಳಿದ್ದಾರೆ. ಸಂಗೀತ ವಿದ್ವಾನ್ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಹಲವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಜವಾಬ್ದಾರಿಯನ್ನು ಸರ್ಕಾರವು ಈ ಹಿಂದೆ ನೀಡಿತ್ತು. ಇದೀಗ ನನಗೆ ಪ್ರಶಸ್ತಿ ಕೊಡಮಾಡಿದೆ’ ಎಂದು ನಮಸ್ಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ವೆಂಕಟೇಶ್ ಕುಮಾರ್ ಅವರು ಸಂಗೀತ ಕ್ಷೇತ್ರದಲ್ಲಿ ಮೇರು ವ್ಯಕ್ತಿತ್ವವನ್ನು ಪುಟ್ಟರಾಜ ಗವಾಯಿಗಳಿಂದ ರೂಪಿಸಿಕೊಂಡರು. ದೇಶ– ವಿದೇಶದಲ್ಲಿ ಸಂಗೀತದ ರುಚಿಯನ್ನು ಜನರಿಗೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಈ ಹಿಂದೆ ಕೆಲವರಿಗೆ ಮಾತ್ರ ಸಂಗೀತ ಕಲಿಯುವ ಅವಕಾಶವಿತ್ತು. ಬಡತನದ ಕುಟುಂಬದಿಂದ ಬಂದು ಎತ್ತರದ ಸಾಧನೆ ಮಾಡಿರುವುದು ಆಶ್ಚರ್ಯ ತರಿಸುತ್ತದೆ. ಕಲಿಯುವ ಮನಸ್ಸು, ಶ್ರದ್ಧೆ, ಪರಿಶ್ರಮದಿಂದ ಸಾಧನೆ ಸಾಧ್ಯ’ ಎಂದು ಶ್ಲಾಘಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.