
ಮೈಸೂರು: ‘ನಾನು ಜೆಡಿಎಸ್‌ನಿಂದ ಗೆದ್ದಿದ್ದೇನೆ. ಇಲ್ಲೇ ಗಟ್ಟಿಯಾಗಿ ಇದ್ದೇನೆ. ಮುಂದೆಯೂ ಇರುತ್ತೇನೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಪಕ್ಷದ ವರಿಷ್ಠರು ಬೆಂಗಳೂರಿನಲ್ಲಿ ತಮ್ಮ ಗೈರುಹಾಜರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಭೆ ನಡೆಸಿದ್ದಾರೆ ಎನ್ನಲಾದ ಕುರಿತು ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಆಗ ಆ ಕುರಿತು ಚರ್ಚೆ ಮಾಡೋಣ’ ಎಂದರು.
‘ಯಾರಿಗೂ ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಹೋದ ಮೇಲೆ ಮೈಸೂರು ಭಾಗದಲ್ಲಿ ಜೆಡಿಎಸ್ ಕಟ್ಟಿದ್ದೇನೆ. ವಿವಿಧ ಹುದ್ದೆಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಎಚ್.ಡಿ. ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನಾವೆಲ್ಲರೂ ಒಟ್ಟಾಗಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು ಪಕ್ಷ ಕಟ್ಟಿದ್ದೇನೆ. ವರಿಷ್ಠರ ಬಗ್ಗೆ ಯಾವತ್ತೂ ಟೀಕೆ ಮಾಡಿಲ್ಲ’ ಎಂದು ಹೇಳಿದರು.
‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ. ಆ ಜನರ ಸೇವೆ ಮಾಡುತ್ತಿದ್ದೇನೆ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಇನ್ನೂ ದೂರವಿದೆ. ಪಕ್ಷದಿಂದ ಒಂದು ಹೆಜ್ಜೆಯನ್ನೂ ಹೊರಗಿಡುವುದಿಲ್ಲ. ನನಗೆ ಕೆಲ ವಿಚಾರದಲ್ಲಿ ನೋವಾಗಿದೆ. ಅದು ಪಕ್ಷದ ನಾಯಕರಿಗೂ ಗೊತ್ತು. ನೋವಾಯಿತೆಂದು ಪಕ್ಷದಿಂದ ಹೊರ ಹೋಗಿಲ್ಲ’ ಎಂದರು.
‘ಜೆಡಿಎಸ್ ವಿರುದ್ಧ ನಾನು ಮಾತನಾಡಿಲ್ಲ, ಮುಂದೆಯೂ ಮಾತನಾಡುವವನಲ್ಲ. ಒಳ್ಳೆಯ ಸಮಯ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ. ಕಾಲ ಕಳೆದಂತೆ ಎಲ್ಲಾ ಮುನಿಸು, ನೋವು ಮಾಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.