ADVERTISEMENT

ಧರ್ಮಗಳ ವೈಭವೀಕರಣ ನಿಲ್ಲಲಿ: ಸಂಸದ ಶ್ರೀನಿವಾಸಪ್ರಸಾದ್

ಮತಗಳ ಅಮಲಿನಲ್ಲಿ ಗಲಾಟೆ ಮಾಡುವುದು ಸಲ್ಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 2:23 IST
Last Updated 17 ಏಪ್ರಿಲ್ 2022, 2:23 IST
ಮೈಸೂರು ಜಿಲ್ಲಾ ವಕೀಲರ ಸಂಘವು ನ್ಯಾಯಾಲಯದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ವಕೀಲ ಎಸ್.ಉಮೇಶ್ ಹಾಗೂ ‌ಕೆ.ಗೋವಿಂದರಾಜು ಅವರನ್ನು ಅಭಿನಂದಿಸಲಾಯಿತು. ಸಿ.ಎಸ್.ದ್ವಾರಕನಾಥ, ಶರತ್‌ಚಂದ್ರ ಸ್ವಾಮೀಜಿ, ವಿ.ಶ್ರೀನಿವಾಸಪ್ರಸಾದ್, ಎಂ.ಎಲ್.ರಘುನಾಥ್ ಇದ್ದಾರೆ
ಮೈಸೂರು ಜಿಲ್ಲಾ ವಕೀಲರ ಸಂಘವು ನ್ಯಾಯಾಲಯದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ವಕೀಲ ಎಸ್.ಉಮೇಶ್ ಹಾಗೂ ‌ಕೆ.ಗೋವಿಂದರಾಜು ಅವರನ್ನು ಅಭಿನಂದಿಸಲಾಯಿತು. ಸಿ.ಎಸ್.ದ್ವಾರಕನಾಥ, ಶರತ್‌ಚಂದ್ರ ಸ್ವಾಮೀಜಿ, ವಿ.ಶ್ರೀನಿವಾಸಪ್ರಸಾದ್, ಎಂ.ಎಲ್.ರಘುನಾಥ್ ಇದ್ದಾರೆ   

ಮೈಸೂರು: ‘ಒಂದು ಧರ್ಮದವರು ಮತ್ತೊಂದು ಧರ್ಮದವರನ್ನು ಗೌರವಿಸಿ, ಪ್ರೀತಿಸಬೇಕೇ ಹೊರತು ನಮ್ಮ ಧರ್ಮವೇ ಮೇಲು ಎಂದು ವೈಭವೀಕರಿಸಬಾರದು’ ಎಂದು ಸಂಸದ ಶ್ರೀನಿವಾಸಪ್ರಸಾದ್ ಪ್ರತಿಪಾದಿಸಿದರು.

ಮೈಸೂರು ಜಿಲ್ಲಾ ವಕೀಲರ ಸಂಘವು ನ್ಯಾಯಾಲಯದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ವಿಶ್ವದಲ್ಲಿರುವ ಎಲ್ಲ ಧರ್ಮಗಳೂ ನಮ್ಮ ದೇಶದಲ್ಲಿವೆ. ಧರ್ಮದ ಅಮಲಿನಲ್ಲಿ ಗಲಾಟೆ ಮಾಡುವುದು ಸರಿಯಲ್ಲ. ಧರ್ಮ ಇರುವುದು ಮನುಷ್ಯರ ಒಳಿತಿಗಾಗಿ ಎಂಬುದನ್ನು ಯಾರು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಗಣರಾಜ್ಯೋತ್ಸವದ ದಿನ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ ಪ್ರಕರಣದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳದ ಹಾಗೂ ಕೊಪ್ಪಳದಲ್ಲಿ ದೇಗುಲ ಪ್ರವೇಶಿಸಿದ 3 ವರ್ಷದ ಬಾಲಕನಿಗೆ ₹ 10 ಸಾವಿರ ದಂಡ ವಿಧಿಸಿರುವ ಈ ಹೊತ್ತಿನಲ್ಲಿ ಮುಖ್ಯಮಂ‌ತ್ರಿಗಳಿಂದ ಅಸ್ಪೃಶ್ಯತೆ ನಿವಾರಣೆ ಹೇಗೆ ಸಾಧ್ಯ’ ಎಂದೂ ಪ್ರಶ್ನಿಸಿದರು.

‘ಇಂತಹ ಮುಖ್ಯಮಂತ್ರಿಯು ಮುಂದಿನ ಬಜೆಟ್‌ನಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿ ಅಸ್ಪೃಶ್ಯತೆ ನಿವಾರಿಸುತ್ತಾರೆ ಎನ್ನುವುದನ್ನು ಅವರೇ ಹೇಳಬೇಕು’ ಎಂದರು.

‘ಅಂಬೇಡ್ಕರ್ ಅನುಭವಿಸಿದ ನೋವನ್ನು ಮತ್ತಾವ ನಾಯಕರೂ ಅನುಭವಿಸಿಲ್ಲ. ಇಂದು ನಾವೆಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ನೀಡಿದ ಸಂದೇಶ ಕಾರಣ’ ಎಂದು ಹೇಳಿದರು.

ಅಂಬೇಡ್ಕರ್ ಬರೆದ ಸಂವಿಧಾನವನ್ನು ಅಮೆರಿಕದ ಮುಖ್ಯ ನ್ಯಾಯಮೂರ್ತಿಗಳು ‘ಭಾರತದ ಸಂವಿಧಾನ ಪ್ರಪಂಚದಲ್ಲೇ ಅತ್ಯುತ್ತಮ’ ಎಂದು ಶ್ಲಾಘಿಸಿದರು. ಅಷ್ಟು ವ್ಯವಸ್ಥಿತ ರೀತಿಯಲ್ಲಿ ಸಂವಿಧಾನ ಬರೆದಿದ್ದಾರೆ ಎಂದರು.

ಹಿರಿಯ ವಕೀಲ ಸಿ.ಎನ್.ದ್ವಾರಕನಾಥ್ ಮಾತನಾಡಿ, ‘ಅಂಬೇಡ್ಕರ್ ಕೇವಲ ದಲಿತ, ಭಾರತೀಯ ನಾಯಕರಲ್ಲ, ಅವರೊಬ್ಬ ವಿಶ್ವ ನಾಯಕ’ ಎಂದು ಶ್ಲಾಘಿಸಿದರು.

‘ಮೀಸಲಾತಿ ಎಂಬುದು ಸಾಮಾಜಿಕ ಕಳಂಕವನ್ನು ತೊಡೆದು ಹಾಕಲು ನೀಡುತ್ತಿರುವ ಸಾಮಾಜಿಕ ನ್ಯಾಯದ ಕಾರ್ಯಕ್ರಮವೇ ಹೊರತು ಕೇವಲ ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ’ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪಡೆದ ವಕೀಲ ಎಸ್.ಉಮೇಶ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದ ಕೆ.ಗೋವಿಂದರಾಜು ಅವರನ್ನು ಅಭಿನಂದಿಸಲಾಯಿತು.

ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಬಿ.ಆರ್.ಚಂದ್ರಮೌಳಿ, ವಕೀಲರಾದ ಎಚ್.ಎಸ್.ಮಹದೇವಸ್ವಾಮಿ, ಜಿ.ಎಂ.ನಾಗೇಶ್, ಬಿ.ಎಸ್.ಭಾಗ್ಯಮ್ಮ, ಎನ್.ಪುನೀತ್, ಭೀಮಯ್ಯ, ವಿಷ್ಣು, ಮೇಘನಾ, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.