
ಮೈಸೂರು: ‘ಪ್ರತಿ ಟನ್ ಕಬ್ಬಿಗೆ ₹ 100 ಹೆಚ್ಚುವರಿ ದರ ನಿಗದಿ ಮಾಡಿರುವ ಆದೇಶವನ್ನು ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಮುಖ್ಯಮಂತ್ರಿ ಅವರಿಗೆ ಮನವಿ ನೀಡಿದ ಮುಖಂಡರು, ‘ಬೆಳಗಾವಿಯ ರೈತ ಚಳವಳಿ ಗಂಭೀರತೆಯನ್ನು ಮನಗಂಡು ಎಫ್‌ಆರ್‌ಪಿ ದರದ ಮೇಲೆ ಸಕ್ಕರೆ ಕಾರ್ಖಾನೆಗಳಿಂದ ₹ 50 ಹಾಗೂ ಸರ್ಕಾರದಿಂದ ₹ 50 ನೀಡುವುದಾಗಿ ಘೋಷಣೆ ಮಾಡಲಾಗಿದೆ. ಎಫ್‌ಆರ್‌ಪಿ ಹಣ ಪಾವತಿ ವೇಳೆಯಿಂದಲೇ ಈ ನಿಯಮ ಅನ್ವಯ ಆಗುವಂತೆ ಮಾಡಬೇಕು’ ಎಂದು ಕೋರಿದರು.
‘20 ದಿನದಲ್ಲಿ ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮೂವರು ರೈತರು ಮೃತಪಟ್ಟಿದ್ದು, ಮತ್ತೊಬ್ಬರು ಸಾವು– ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಲೇ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಕಿರಗಸೂರು ಶಂಕರ್, ವರಕೋಡು ಎಂ.ನಾಗೇಶ್, ಲಕ್ಷ್ಮಿಪುರ ವೆಂಕಟೇಶ್, ವಾಜಮಂಗಲ ಮಹದೇವು, ಬಿ.ಜಯರಾಮ ವರಕೋಡು, ರಂಗರಾಜು, ಪ್ರಭಾಕರ್ ವರುಣ, ಆರ್.ಬಸವರಾಜು, ಸಿದ್ದರಾಮ, ಶಿವಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.