ADVERTISEMENT

ಏರುತ್ತಲೇ ಇದೆ ಬಿಸಿಲಿನ ತಾಪ

35 ಡಿಗ್ರಿ ದಾಟಿದ ಉಷ್ಣಾಂಶ, ಸುಡು ಬಿಸಿಲಿಗೆ ಹೈರಾಣಾದ ಜನ

ಕೆ.ಎಸ್.ಗಿರೀಶ್
Published 4 ಏಪ್ರಿಲ್ 2020, 19:45 IST
Last Updated 4 ಏಪ್ರಿಲ್ 2020, 19:45 IST
ಮೈಸೂರು- ನಂಜನಗೂಡು ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೆಳ್ಳುಳ್ಳಿ ಖರೀದಿಸಿ ಬಿಸಿಲಿನಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು ಚಿತ್ರ: ಬಿ.ಆರ್.ಸವಿತಾ
ಮೈಸೂರು- ನಂಜನಗೂಡು ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೆಳ್ಳುಳ್ಳಿ ಖರೀದಿಸಿ ಬಿಸಿಲಿನಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು ಚಿತ್ರ: ಬಿ.ಆರ್.ಸವಿತಾ   

ಮೈಸೂರು: ಜಿಲ್ಲೆಯಲ್ಲಿ ಬಿಸಿಲಿನ ಪ್ರಕೋಪ ದಿನ ಕಳೆದಂತೆ ಏರುತ್ತಿದೆ. ಒಂದು ವಾರದಿಂದೀಚೆಗೆ ತಾಪಮಾನದಲ್ಲಿ ಒಂದು ಡಿಗ್ರಿಯಷ್ಟು ಏರಿಕೆಯಾಗಿದೆ. ಮುಂದಿನ 5 ದಿನಗಳಲ್ಲಿ ಮತ್ತೂ ಒಂದು ಡಿಗ್ರಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರಿಗಿಂತ ಮುಂಗಾರುಪೂರ್ವ ದಲ್ಲೇ ಹೆಚ್ಚು ಮಳೆಯಾಗುತ್ತಿತ್ತು. ಯುಗಾದಿಗೂ ಮುನ್ನವೇ ಫೆಬ್ರುವರಿಯಲ್ಲಿ ಒಂದು ಬಾರಿ, ಯುಗಾದಿ ಸನಿಹದಲ್ಲಿ ಮತ್ತೊಂದೆರಡು ಬಾರಿ ಮಳೆ ಬಿದ್ದು ಬೇಸಿಗೆಯ ತಾಪಮಾನ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಮುಂಗಾರುಪೂರ್ವದಲ್ಲಿ ಉತ್ತಮ ಎಂದು ಹೇಳಬಹುದಾದ ಮಳೆಯಾಗಿಲ್ಲ. ಇದು ತಾಪಮಾನ ಏರಿಕೆಗೆ ಕಾರಣವಾಗಿದೆ.

ಇದರ ಜತೆಗೆ, ಮೇಲ್ಮೈ ಸುಳಿ ಗಾಳಿಯೂ ಬೀಸುತ್ತಿಲ್ಲ. ಮೋಡಗಳೂ ಬರುತ್ತಿಲ್ಲ. ಇದರಿಂದಾಗಿಯೂ ತಾಪಮಾನ ಹೆಚ್ಚುತ್ತಿದೆ.

ADVERTISEMENT

ಮಾರ್ಚ್ ಆರಂಭದಲ್ಲಿ 32 ಡಿಗ್ರಿ ಸೆಲ್ಸಿಯಷ್‌ನಷ್ಟು ಇದ್ದ ತಾಪಮಾನ ಇದೀಗ 35 ಡಿಗ್ರಿ ದಾಟಿದೆ. ಶನಿವಾರ ಅತ್ಯಧಿಕ ತಾಪಮಾನ 36 ಡಿಗ್ರಿ ತಲುಪಿತ್ತು ಎಂದು ಖಾಸಗಿ ಹವಾಮಾನ ಸೇವಾ ಸಂಸ್ಥೆ ‘ಆಕ್ಯೂವೆದರ್‌’ನ ಅಂಕಿಅಂಶಗಳು ಹೇಳುತ್ತವೆ.

ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳೂ ತಾಪಮಾನ ಏರಿಕೆಯಾಗಿದೆ ಎಂದು ಹೇಳುತ್ತವೆ. ಮಾರ್ಚ್ 27ರಂದು 34 ಡಿಗ್ರಿಯಷ್ಟು ಇದ್ದ ಉಷ್ಠಾಂಶ ಮಾರ್ಚ್ 31ರಂದು 35 ಡಿಗ್ರಿ ಇತ್ತು. ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದೂ ಮುನ್ಸೂಚನೆ ನೀಡಿದೆ.

ನೆತ್ತಿ ಸುಡುವ ಬಿಸಿಲಿನ ಜತೆಗೆ ಉಷ್ಣಾಂಶದ ಏರಿಕೆಯೂ ಸೆಖೆಯನ್ನು ತಂದೊಡ್ಡಿದೆ. ಯುಗಾದಿಯ ನಂತರ ಒಳ್ಳೆಯ ಮಳೆ ಬೀಳುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.