ಸುತ್ತೂರು (ಮೈಸೂರು ಜಿಲ್ಲೆ): ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕೃಷಿಮೇಳದಲ್ಲಿ ಈ ಬಾರಿ ‘ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ತಾಂತ್ರಿಕತೆ’ ಹಾಗೂ ‘ಜೈವಿಕ ಇದ್ದಿಲು’ ತಯಾರಿಕೆಯ ಪ್ರಾತ್ಯಕ್ಷಿಕೆಯು ವಿಶೇಷ ಆಕರ್ಷಣೆಯಾಗಿದೆ.
ಜಮೀನುಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಬೆಳೆಗಳ ಮೇಲ್ವಿಚಾರಣೆ, ಸಮೀಕ್ಷೆ ಮತ್ತು ತಾಕುಗಳ ಮ್ಯಾಪಿಂಗ್ ಮಾಡುವುದು, ಸಮಯ ಹಾಗೂ ಹಣ ಎರಡನ್ನೂ ಉಳಿಸಲು ತರ್ಕಬದ್ಧ ಕೃಷಿ ನಿರ್ವಹಣೆಯ ಪ್ರಾತ್ಯಕ್ಷಿಕೆ ಅನಾವರಣಗೊಂಡಿದೆ. ರೈತರು ಇದನ್ನು ವೀಕ್ಷಿಸಿ ತಮ್ಮ ಜಮೀನುಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಆಶಯವನ್ನು ಹೊಂದಲಾಗಿದೆ.
ಸುತ್ತೂರಿನಲ್ಲಿರುವ 5 ಎಕರೆ ಪ್ರದೇಶದಲ್ಲಿ ಕೃಷಿ ಮೇಳ ಮೈದಳೆದಿದೆ. ವೈವಿಧ್ಯಮಯ ಬೆಳೆಗಳನ್ನು ಕಡಿಮೆ ನೀರು, ಗೊಬ್ಬರ ಮೊದಲಾದವುಗಳನ್ನು ಬಳಸಿ ಮಾದರಿ ಕೃಷಿ ಮಾಡಲು ಸಾಧ್ಯ ಎಂಬುದನ್ನು ಅಲ್ಲಿ ಸಾಬೀತುಪಡಿಸಲಾಗಿದೆ. ಐಒಟಿ (ಇಂಟರ್‌ನೆಟ್ ಅಫ್ ಥಿಂಗ್ಸ್) ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿಕೊಳ್ಳುವ ಕುರಿತು ಕೃಷಿಕರಿಗೆ ‘ಪಾಠ’ ಮಾಡುವ ಪ್ರಯತ್ನವನ್ನೂ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತಂಡ ಮಾಡಿದೆ. ರೈತರು, ಸಂಬಂಧಿಸಿದ ಮಾಹಿತಿಯನ್ನು ವಿಜ್ಞಾನಿಗಳಿಂದ ಸ್ಥಳದಲ್ಲೇ ಪಡೆಯಬಹುದಾಗಿದೆ. ಅಗತ್ಯ ತಾಂತ್ರಿಕ ನೆರವನ್ನೂ ತಂಡ ಒದಗಿಸಲಿದೆ.
ಐಒಟಿ ತಂತ್ರಜ್ಞಾನ ಅಧಾರಿತ:
‘ಈ ಬಾರಿ ಹೆಚ್ಚಿನ ಪ್ರಾತ್ಯಕ್ಷಿಕೆಗೆ ಒತ್ತು ನೀಡಲಾಗಿದೆ. ಕಬ್ಬಿನಲ್ಲಿ ಯಾಂತ್ರಿಕತೆಯನ್ನು ಪರಿಚಯಿಸುವ ಉದ್ದೇಶದಿಂದ ಕಬ್ಬು ಕಟಾವು ಯಂತ್ರದ ಪ್ರದರ್ಶನ ಇರಲಿದೆ. ಐಒಟಿ ಆಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು. ವಿವಿಧ ಹೊಸ ತಳಿಗಳ ತಾಕುಗಳು ಇವೆ. ವಿನಾಶದ ಅಂಚಿನಲ್ಲಿರುವ ತಳಿಗಳನ್ನು ಹಾಕಲಾಗಿದೆ. 22 ರೀತಿಯ ಮೇವಿನ ಪ್ರಾತ್ಯಕ್ಷಿಕೆಯೂ ಇದೆ’ ಎಂದು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಬಿ.ಎನ್. ಜ್ಞಾನೇಶ್ ಮಾಹಿತಿ ನೀಡಿದರು.
ನೈಜ ಬೆಳೆ ಪ್ರಾತ್ಯಕ್ಷಿಕೆ: 250ಕ್ಕೂ ಹೆಚ್ಚು ತರಕಾರಿ, ಸೊಪ್ಪು, ಹೂವು, ಕಿರುಧಾನ್ಯ, ಸುಗಂಧದ್ರವ್ಯ, ಔಷಧೀಯ ಹಾಗೂ ಚಿಯಾ, ಕಿನ್ವಾ ಮೊದಲಾದ ಬೆಳೆಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಸಾವಯವ ಕೃಷಿಯಲ್ಲಿ ಜೀವಾಮೃತ, ಗೋಕೃಪಾಮೃತ ತಯಾರಿಸುವುದನ್ನೂ ತಿಳಿಸಿಕೊಡಲಾಗುವುದು. ಉಪಕಸುಬುಗಳಾದ ಎರೆಗೊಬ್ಬರ ತಯಾರಿಕೆ, ಮೀನು ಕೃಷಿ ಹಾಗೂ ಜೇನು ಕೃಷಿಯ ಬಗ್ಗೆಯೂ ‘ಕೃಷಿ ಬ್ರಹ್ಮಾಂಡ’ ಬೆಳಕು ಚೆಲ್ಲಿದೆ. ಕುರಿ, ಕೋಳಿ ಹಾಗೂ ಮೇಕೆ ಮೊದಲಾದ ದೇಸಿ ಜಾನುವಾರುಗಳ ಪ್ರದರ್ಶನವೂ ಇರಲಿದೆ.
ಸಂಪನ್ಮೂಲ ಹೆಚ್ಚಿಸಲು:
‘ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಜೊತೆಗೆ ಈ ಬಾರಿ ನಿಖರ ಕೃಷಿ ಬೇಸಾಯದ ಮಾಹಿತಿ ದೊರೆಯಲಿದೆ. ನಿಖರ ಕೃಷಿಯಿಂದ ಸಂಪನ್ಮೂಲ ಬಳಕೆಯ ದಕ್ಷತೆ ಹೆಚ್ಚಿಸಿ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಸುಲಭವಾಗಿ ಹೆಚ್ಚಿಸಬಹುದಾಗಿದೆ. ಒಟ್ಟು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬಹುದಾಗಿದೆ’ ಎನ್ನುತ್ತಾರೆ ಜ್ಞಾನೇಶ್.
ಸಣ್ಣ ಹಾಗೂ ಅತಿ ಸಣ್ಣ ರೈತರ ಸುಸ್ಥಿರ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಖರ್ಚಿನಲ್ಲಿ ಸಮಗ್ರ ಸುಸ್ಥಿರ ಕೃಷಿ ಮಾದರಿ ‘ಕೃಷಿ ಬ್ರಹ್ಮಾಂಡ’ವನ್ನು ಒಂದು ಎಕರೆಯಲ್ಲಿ ಮಾಡಲಾಗಿದೆ. ಅಲ್ಲಿ ಕೃಷಿ, ತೋಟಗಾರಿಕೆ, ಮೇವು ಔಷಧಿ ಸಸ್ಯ, ವಿವಿಧ ಸೊಪ್ಪಿನ ಬೆಳೆಗಳು ಹಾಗೂ ಪಶುಸಂಗೋಪನೆ ಮೂಲಕ ಕೃಷಿಕರು ಆರ್ಥಿಕವಾಗಿ ಸದೃಢರಾಗಬಹುದು ಎಂಬುದನ್ನು ಅನಾವರಣಗೊಳಿಸಲಾಗಿದೆ.
ಜೈವಿಕ ಇದ್ದಿಲನ್ನು ಈಗಾಗಲೇ ಕೆಲವು ರೈತರು ಬಾಳೆ ತೆಂಗು ಮೊದಲಾದವುಗಳಿಗೆ ಬಳಸುತ್ತಿದ್ದಾರೆ. ಸುತ್ತೂರು ಕೆವಿಕೆಯಲ್ಲಿ ಮುಸುಕಿನ ಜೋಳ ಹಾಗೂ ತೊಗರಿಗೆ ಬಳಸಲು ಉದ್ದೇಶಿಸಲಾಗಿದೆಜ್ಞಾನೇಶ್ ಮುಖ್ಯಸ್ಥ ಜೆಎಸ್‌ಎಸ್ ಕೆವಿಕೆ
ಏನಿದು ‘ಜೈವಿಕ ಇದ್ದಿಲು’?
ಬಯೋಚಾರ್ (ಜೈವಿಕ ಇದ್ದಿಲು) ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬಹುದಾಗಿದೆ. ಇದು ಜೀವರಾಶಿಯ ಇಂಗಾಲೀಕರಣದಿಂದ ಪಡೆದ ಘನವಸ್ತುವಾಗಿದೆ. ಮಣ್ಣಿನ ಕಾರ್ಯಚಟುವಟಿಕೆಗಳನ್ನು ಸುಧಾರಿಸುವ ಉದ್ದೇಶದಿಂದ ಜೈವಿಕ ಇದ್ದಿಲನ್ನು ಮಣ್ಣಿನಲ್ಲಿ ಸೇರಿಸಬಹುದು. ಭೂಮಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಬೆಳೆಗಳ ಇಳುವರಿ ಕುಂಠಿತಗೊಳ್ಳುವುದನ್ನು ತಪ್ಪಿಸಲು ವಿಜ್ಞಾನ ಕೇಂದ್ರವು ಮೈರಾಡ ಸಹಯೋಗದಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದೆ. ಇಲ್ಲಿ ಜೈವಿಕ ಇದ್ದಿಲನ್ನು ಸಿದ್ಧಪಡಿಸುವುದು ಬಳಸುವುದು ಹೇಗೆ ಎಂಬುದನ್ನು ಮತ್ತು ಅದರಿಂದ ಆಗುವ ಪ್ರಯೋಜನವನ್ನೂ ತಿಳಿದುಕೊಳ್ಳಬಹುದಾಗಿದೆ. ಜಮೀನುಗಳಲ್ಲಿ ಸಿಗುವ ತ್ಯಾಜ್ಯವನ್ನೇ ಬಳಸಿಕೊಂಡು ಈ ಜೈವಿಕ ಇದ್ದಿಲು ತಯಾರಿಸಬಹುದು. ಘಟಕಕ್ಕೆ ₹ 7500 ಖರ್ಚಾಗುತ್ತದೆ. ಡ್ರಮ್‌ನಲ್ಲಿ ತ್ಯಾಜ್ಯವನ್ನು ತುಂಬಿಸಿ ಮುಚ್ಚಳದಿಂದ ಭದ್ರಪಡಿಸಿ 550ರಿಂದ 600 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸುಡಲಾಗುತ್ತದೆ. ಎರಡೂವರೆ ಗಂಟೆಯ ನಂತರ ಅದು ಜೈವಿಕ ಇದ್ದಿಲಾಗುತ್ತದೆ. ಒಂದು ಡ್ರಮ್‌ನಲ್ಲಿ 30 ಕೆ.ಜಿ.ಯಷ್ಟು ಜೈವಿಕ ಇದ್ದಿಲು ಸಿದ್ಧಪಡಿಸಬಹುದು. ಅದನ್ನು ಕೊಟ್ಟಿಗೆ ಗೊಬ್ಬರದ ಜೊತೆಗೆ ಬೆರಸಿ ಗಿಡಗಳಿಗೆ ನೀಡುವುದರಿಂದ ಹೆಚ್ಚಿನ ಇಳುವರಿ ಸಾಧ್ಯ; ಮಣ್ಣಿನಲ್ಲಿ ಇಂಗಾಲವನ್ನು ಕಾಪಾಡಿಕೊಳ್ಳಬಹುದು ಎಂದು ಜ್ಞಾನೇಶ್ ಹಾಗೂ ಮೈರಾಡಾದ ಯೋಜನಾ ಸಂಯೋಜಕ ಮಹದೇವಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.