ADVERTISEMENT

ಸುತ್ತೂರು ಜಾತ್ರೆಗೆ ಬಂದರು ಹತ್ತೂರ ಜನ!: ಕಿಲೋಮೀಟರ್ ಉದ್ದಕ್ಕೂ ಸಂಚಾರದಟ್ಟಣೆ

ಆರ್.ಜಿತೇಂದ್ರ
Published 19 ಜನವರಿ 2026, 4:28 IST
Last Updated 19 ಜನವರಿ 2026, 4:28 IST
ಸುತ್ತೂರು ಜಾತ್ರೆಯಲ್ಲಿ ಭಾನುವಾರ ಕಂಡ ಜನಸ್ತೋಮ
ಸುತ್ತೂರು ಜಾತ್ರೆಯಲ್ಲಿ ಭಾನುವಾರ ಕಂಡ ಜನಸ್ತೋಮ   

ಮೈಸೂರು: ಸುತ್ತೂರ ಜಾತ್ರೆಯಲ್ಲಿ ಭಾನುವಾರ ಜನಜಾತ್ರೆಯೇ ನೆರೆದಿತ್ತು. ಕಣ್ಣು ಹಾಯಿಸಿದಷ್ಟು ದೂರ ಬರೀ ಭಕ್ತರೇ. ಕಾಲಿಡಲು ಜಾಗವಿಲ್ಲದಷ್ಟು ಪರಿಸ್ಥಿತಿ ಇದ್ದು, ನೂಕುನುಗ್ಗಲು ನಿಯಂತ್ರಿಸಲು ಪೊಲೀಸರೇ ಹರಸಾಹಸ ಪಟ್ಟರು.

ಕಪಿಲಾ ನದಿ ತೀರದಿಂದ ಆರಂಭಗೊಂಡು ಕರ್ತೃಗದ್ದುಗೆ, ವಸ್ತುಪ್ರದರ್ಶನದ ಆವರಣದವರೆಗೆ ಎಲ್ಲಿ ನೋಡಿದರಲ್ಲಿ ಜನರು ಪ್ರವಾಹದಂತೆ ಹರಿದುಬಂದರು. ಅದರಲ್ಲೂ ಮಧ್ಯಾಹ್ನದ ಹೊತ್ತು ನಿರೀಕ್ಷೆಗೂ ಮೀರಿದ ಜನಸಂದಣಿ ಇತ್ತು.

ಸುಡು ಬಿಸಿಲನ್ನೂ ಲೆಕ್ಕಿಸದೇ ಜಾತ್ರೆಗೆ ಬಂದವರು ಮೊದಲಿಗೆ ಕರ್ತೃ ಗದ್ದುಗೆಗೆ ತೆರಳಿ ಶಿವಯೋಗಿಗಳಿಗೆ ನಮನ ಸಲ್ಲಿಸಿದರು. ಅಲ್ಲಿಯೇ ಹೊರ ಆವರಣದಲ್ಲಿ ನಿಲ್ಲಿಸಿದ್ದ ರಥಕ್ಕೆ ಹಣ್ಣು–ಜವನ ಎಸೆದರು. ನಂತರ ಕೃಷಿ ಮೇಳ, ವಸ್ತುಪ್ರದರ್ಶನದತ್ತ ಚಿತ್ತ ಹರಿಯಿತು. ಜನಪ್ರವಾಹ ಹೆಚ್ಚಾದಾಗ ಸ್ವಯಂಸೇವಕರು ದ್ವಾರಗಳನ್ನು ಕೆಲ ಹೊತ್ತು ಬಂದ್ ಮಾಡಬೇಕಾಯಿತು.

ADVERTISEMENT

ಜಾತ್ರೆ ಅಂಗವಾಗಿ ನಿತ್ಯ ಮೂರು ಹೊತ್ತು ಭಕ್ತರಿಗೆ ದಾಸೋಹದ ವ್ಯವಸ್ಥೆ ಇದ್ದು, ಭಾನುವಾರವೂ ಲಕ್ಷಾಂತರ ಮಂದಿಗೆ ಅನ್ನಪ್ರಸಾದ ವಿನಿಯೋಗವಾಯಿತು. ಹತ್ತಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಜನರು ಸಾಲುಗಟ್ಟಿ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಬಿಸಿಬೇಳೆ ಬಾತ್‌, ಪಾಯಸ, ಬೂಂದಿ, ಅನ್ನ ಸಾಂಬಾರ್‌ ಜೊತೆಗೆ ಮೈಸೂರು ಪಾಕ್‌ ಸಹ ವಿತರಿಸಲಾಯಿತು. ನೂರಾರು ಬಾಣಸಿಗರ ಜೊತೆಗೆ ಸಾವಿರಾರು ಸ್ವಯಂಸೇವಕರು ಪ್ರಸಾದ ವಿತರಣೆಯ ಕಾಯಕದಲ್ಲಿ ತೊಡಗಿದ್ದರು.

ಅಂಗಡಿ ಮಳಿಗೆಗಳಲ್ಲಿ ಭರ್ಜರಿ ವಹಿವಾಟು ನಡೆಯಿತು. ಬೆಂಡು–ಬತಾಸಿನಿಂದ ಹಿಡಿದು ವಿವಿಧ ಭಕ್ಷ್ಯಗಳ ಖರೀದಿ ಹೆಚ್ಚಿತ್ತು. ಮಹಿಳೆಯರು ದಿನಬಳಕೆ ಸಾಮಗ್ರಿಗಳನ್ನು ಕೊಂಡರು. ರಾತ್ರಿ ನಾಟಕ ನೋಡಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಅಮಾವಾಸ್ಯೆಯ ಕತ್ತಲಲ್ಲೂ ಖರೀದಿ ನಡೆದಿತ್ತು.

ಸಂಚಾರ ದಟ್ಟಣೆ:

ಸುತ್ತೂರು ಹಾಗೂ ಸುತ್ತಲಿನ ರಸ್ತೆಗಳಲ್ಲೂ ಇಡೀ ದಿನ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಅದರಲ್ಲೂ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ಆಗಮನದ ಸಂದರ್ಭ ಸಾರ್ವಜನಿಕ ವಾಹನಗಳ ನಿರ್ಬಂಧಕ್ಕೆ ತಡೆ ಒಡ್ಡಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಪೊಲೀಸರು ನದಿಯ ಆಚೆ ದಂಡೆಯ ಗದ್ದೆಗಳಲ್ಲೇ ವಾಹನ ನಿಲುಗಡೆ ಮಾಡಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದರು.

ಗ್ರಾಮೀಣ ಕ್ರೀಡೆಗಳ ಸೊಬಗು

ಜಾತ್ರೆ ಅಂಗವಾಗಿ ಭಾನುವಾರ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಗ್ರಾಮೀಣ ಆಟೋಟಗಳನ್ನು ಆಯೋಜಿಸಿದ್ದು ರಂಜನೆ ಒದಗಿಸಿದವು. ಹಗ್ಗ–ಜಗ್ಗಾಟ ನಿಂಬೆ ಹಣ್ಣು ಓಟ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವುದು ತುಂಬಿದ ಬಿಂದಿಗೆ ತಲೆಯ ಮೇಲಿಟ್ಟುಕೊಂಡು ಓಡುವುದು ಅಳಿಗುಳಿ ಮನೆ ಅಣ್ಣೆಕಲ್ಲು ಚೌಕಾಬಾರ ಮೊದಲಾದ ಬಗೆಯ ಆಟಗಳನ್ನು ಆಡುತ್ತ ಮಕ್ಕಳು ರಂಜನೆ ಪಡೆದರು. ಸುತ್ತಲಿನ ಜನರೂ ಈ ದೇಸಿ ಆಟಗಳನ್ನು ವೀಕ್ಷಿಸಿ ಖುಷಿ ಪಟ್ಟರು. ಮಧ್ಯಾಹ್ನ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲೆ ಪ್ರೌಢಶಾಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿವಿಧ ವಿನ್ಯಾಸ ಹಾಗೂ ಬಣ್ಣದ ಪಟಗಳು ಆಗಸದಲ್ಲಿ ಹಾರಾಡುತ್ತ ಗಮನ ಸೆಳೆದವು. ಅಂತರರಾಷ್ಟ್ರೀಯ ಗಾಳಿಪಟ ಸ್ಪರ್ಧಿಗಳಾದ ವಿ.ಕೆ. ರಾವ್‌ ಮತ್ತು ತಂಡದವರು ವಿಶೇಷ ವಿನ್ಯಾಸದ ಪಟಗಳ ಹಾರಾಟದ ಮೂಲಕ ಗಮನ ಸೆಳೆದವು. ಶಾಲಾ ವಿದ್ಯಾರ್ಥಿಗಳಿಗಾಗಿ ಬೆಳಿಗ್ಗೆ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆಗಳು ನಡೆದವು. ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾತ್ರಿ 7ಕ್ಕೆ ಮಠದ ಆವರಣದಲ್ಲಿ ಮಹದೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ ಗುರು ಬ್ರಹ್ಮೋತ್ಸವ ಹಾಗೂ ಜಂಗಮೋತ್ಸವ ನಡೆಯಿತು. ರಾತ್ರಿ 8.30ಕ್ಕೆ ನಡೆದ ಲಕ್ಷ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ದೀಪಗಳನ್ನು ಬೆಳಗಿಸಿದರು. ಇಡೀ ಬೀದಿ ಬೆಳಕಲ್ಲಿ ಪ್ರಜ್ವಲಿಸಿತು. ಸೋಮವಾರ ರಾತ್ರಿ ಕಪಿಲಾರತಿ ಹಾಗೂ ತೆಪ್ಪೋತ್ಸವ ಇರಲಿದೆ. ಈ ಬಾರಿ ₹30 ಲಕ್ಷ ವೆಚ್ಚದಲ್ಲಿ ವಿಶೇಷ ಬಗೆಯ ತೆಪ್ಪವನ್ನು ವಿನ್ಯಾಸಗೊಳಿಸಲಾಗಿದೆ.

ಸುತ್ತೂರು ಜಾತ್ರೆಯಲ್ಲಿ ಇಂದು

ಕರ್ತೃ ಗದ್ದುಗೆ: ಮಹಾರುದ್ರಾಭಿಷೇಕ–ಬೆಳಿಗ್ಗೆ 4. ಶಿವರಾತ್ರಿ ರಾಜೇಂದ್ರ ಶ್ರೀಗಳ 39ನೇ ಸಂಸ್ಮರಣೆ– ಬೆಳಿಗ್ಗೆ 6.15. ಧ್ವಜಾರೋಹಣ–ಬೆಳಿಗ್ಗೆ 7.30. ಕಪಿಲಾರತಿ–ರಾತ್ರಿ 8.30. ತೆಪ್ಪೋತ್ಸವ–ರಾತ್ರಿ 9

ಮುಖ್ಯ ವೇದಿಕೆ: ಭಜನಾ ಮೇಳ ಸಮಾರೋಪ. ಸಾನ್ನಿಧ್ಯ– ಪ್ರಭುಸಾರಂಗ ದೇವ ಶಿವಾಚಾರ್ಯ ಸ್ವಾಮೀಜಿ, ಹಿರಿಶಾಂತವೀರ ಸ್ವಾಮೀಜಿ. ಸಮಾರೋಪ ಭಾಷಣ– ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ. ಅಧ್ಯಕ್ಷತೆ– ವೈದ್ಯಕೀಯ ಮತ್ತು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ– ಬೆಳಿಗ್ಗೆ 10ಕುಸ್ತಿ ಟೂರ್ನಿ ಉದ್ಘಾಟನೆ: ಸಾನ್ನಿಧ್ಯ– ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ, ಚಿದಾನಂದ ಸ್ವಾಮೀಜಿ. ಉದ್ಘಾಟನೆ– ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜ್. ಅಧ್ಯಕ್ಷತೆ– ಶಾಸಕ ಆರ್‌.ವಿ. ದೇಶಪಾಂಡೆ. ಮಧ್ಯಾಹ್ನ 2

ಕೃಷಿ ಮೇಳ, ದನಗಳ ಜಾತ್ರೆ ಸಮಾರೋಪ: ಸಾನ್ನಿಧ್ಯ– ನಿರ್ಮಲಾನಂದನಾಥ ಸ್ವಾಮೀಜಿ, ಅಶೋಕ ರಾಜೇಂದ್ರ ಸ್ವಾಮೀಜಿ. ಸಮಾರೋಪ ಭಾಷಣ– ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌. ಅತಿಥಿಗಳು– ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ. ಅಧ್ಯಕ್ಷತೆ– ಅರಣ್ಯ ಸಚಿವ ಈಶ್ವರ ಖಂಡ್ರೆ. ಸಂಜೆ 5

ಸಾಂಸ್ಕೃತಿಕ ಕಾರ್ಯಕ್ರಮಗಳು

ಗದ್ದುಗೆ ಆವರಣ: ಬೆಳಿಗ್ಗೆ 7ರಿಂದ ರಾತ್ರಿ 8

ನಾಟಕಗಳು– ರಾತ್ರಿ 10

ಹಿರಿಯರ ಮನೆ ಆವರಣ: ನಾಟಕ– ಶಿವರಾತ್ರೀಶ್ವರ ವಿಜಯ. ಅಭಿನಯ– ಜೆಎಸ್‌ಎಸ್ ಕಲಾಮಂಟಪ. ಮಂಗಳ ಮಂಟಪದ ಮುಂಭಾಗ: ನಾಟಕ– ದಕ್ಷಯಜ್ಞ. ಅಭಿನಯ– ಬೆನಕ ಕಲಾಸಂಘ, ಬೆನಕನಹಳ್ಳಿ. ಶಾಲೆಯ ಪಕ್ಕದ ಆವರಣ: ನಾಟಕ– ಭಕ್ತ ಪ್ರಹ್ಲಾದ. ಅಭಿನಯ– ಮಲ್ಲಿಕಾರ್ಜುನ ಕೃಪಾಪೋಷಿತ ಸಂಘ, ಉಕ್ಕಲಗೆರೆ. ಅತಿಥಿಗೃಹದ ಹಿಂಭಾಗ: ನಾಟಕ– ದಕ್ಷಯಜ್ಞ. ಅಭಿನಯ– ಬದನವಾಳು ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಮೇಗಳಕೊಪ್ಪಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.