ADVERTISEMENT

ಮೈಸೂರು | ಅರಿವಿನ ಯಾತ್ರೆಗೆ ಅದ್ದೂರಿ ತೆರೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:55 IST
Last Updated 21 ಜನವರಿ 2026, 2:55 IST
<div class="paragraphs"><p>ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಸಂಜೆ ಶಿವಯೋಗಿಗಳ ಉತ್ಸವಮೂರ್ತಿಯನ್ನು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಮೂಲಮಠಕ್ಕೆ ವಾಪಸ್ ತರಲಾಯಿತು. ಇದರೊಂದಿಗೆ ಜಾತ್ರೆಯು ಸಂಪನ್ನಗೊಂಡಿತು</p></div>

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಸಂಜೆ ಶಿವಯೋಗಿಗಳ ಉತ್ಸವಮೂರ್ತಿಯನ್ನು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಮೂಲಮಠಕ್ಕೆ ವಾಪಸ್ ತರಲಾಯಿತು. ಇದರೊಂದಿಗೆ ಜಾತ್ರೆಯು ಸಂಪನ್ನಗೊಂಡಿತು

   

ಮೈಸೂರು: ಜ್ಞಾನ ಮತ್ತು ದಾಸೋಹದ ಯಾತ್ರೆಯಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.

ಸಂಜೆ ಉತ್ಸವಮೂರ್ತಿಯನ್ನು ಮೂಲಮಠಕ್ಕೆ ವಾಪಸ್ ತರುವುದರೊಂದಿಗೆ ಆರು ದಿನಗಳ ಜಾತ್ರೆಯು ಸಂಪನ್ನಗೊಂಡಿತು. ಬೆಳಿಗ್ಗೆ ಶಿವಯೋಗಿಗಳ ಕರ್ತೃ ಗದ್ದುಗೆಯನ್ನು ವಿಶೇಷ ಹೂವು ಹಾಗೂ ಫಲಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ನಂತರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗದ್ದುಗೆಯ ಆವರಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು.

ADVERTISEMENT

ಕಪಿಲಾ ನದಿ ತೀರದಲ್ಲಿ ಅಷ್ಟೋತ್ತರ ಕುಂಭೋತ್ಸವ ಹಾಗೂ ಅನ್ನಬ್ರಹ್ಮೋತ್ಸವ ನಡೆಯಿತು. ಮಧ್ಯಾಹ್ನ 4ಕ್ಕೆ ಮಹಾರುದ್ರಾಭಿಷೇಕದ ತರುವಾಯ ಸಂಜೆ 6.30ಕ್ಕೆ ಉತ್ಸವ ಮೂರ್ತಿಯನ್ನು ಮಠಕ್ಕೆ ಕರೆದೊಯ್ಯಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾಂಪ್ರದಾಯಿಕ ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿದರು. ವೀರಗಾಸೆ ಹಾಗೂ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಲಕ್ಷಾಂತರ ಭಕ್ತರು:

ಆರು ದಿನಗಳ ಉತ್ಸವವು ಕೇವಲ ಧಾರ್ಮಿಕ ಆಚರಣೆ ಆಗಿರದೇ ಅರಿವಿನ ಯಾತ್ರೆಯಾಯಿತು. ರಾಜ್ಯ–ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಧಾವಿಸಿ ಬಂದರು. ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಅನ್ನ ಬ್ರಹ್ಮೋತ್ಸವ, ಪ್ರಾಕಾರೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಎಂದಿನಂತೆ ಈ ಬಾರಿಯೂ ಕೃಷಿ ಮೇಳ ಎಲ್ಲರ ಆಕರ್ಷಣೆ ಆಯಿತು. ‘ಕೃಷಿ ಬ್ರಹ್ಮಾಂಡ’ ವೀಕ್ಷಿಸಲು ಲಕ್ಷಾಂತರ ಮಂದಿ ಬಂದರು. ಜೊತೆಗೆ ‘ಕೃಷಿಯಲ್ಲಿ ಮಹಿಳೆ’ ಕೇಂದ್ರವಾಗಿರಿಸಿ ವಿಚಾರಸಂಕಿರಣವೂ ನಡೆಯಿತು. ಆರೋಗ್ಯ ತಪಾಸಣಾ ಶಿಬಿರ, ದೋಣಿವಿಹಾರ, ದೇಸಿ ಆಟ, ಭಜನಾ ಮೇಳ, ಸಾಂಸ್ಕೃತಿಕ ಮೇಳ, ರಂಗೋಲಿ, ಚಿತ್ರಕಲೆ, ಗಾಳಿಪಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಜ. 16ರಂದು ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹದಲ್ಲಿ 11 ಅಂತರ್ಜಾತಿ, 3 ಮರು ಮದುವೆ ಸೇರಿ 135 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟವು.

ನಿತ್ಯ ದಾಸೋಹ:

ಜಾತ್ರೆಗೆ ಬಂದ ಭಕ್ತರಿಗೆ ಪ್ರತಿ ದಿನವೂ ತ್ರಿಕಾಲ ದಾಸೋಹ ನಡೆಯಿತು. 20–25 ಲಕ್ಷದಷ್ಟು ಮಂದಿಗೆ ಪ್ರಸಾದ ವಿನಿಯೋಗವಾಯಿತು. ಸಾವಿರಕ್ಕೂ ಹೆಚ್ಚು ಬಾಣಸಿಗರು, ಐದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.