ADVERTISEMENT

ಸುತ್ತೂರು | ಸಾಮೂಹಿಕ ವಿವಾಹ: ಸಮಾಜಕ್ಕೆ ಆಸರೆ: ಪ್ರಲ್ಹಾದ ಜೋಶಿ ಅಭಿಮತ

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

ಮೋಹನ್ ಕುಮಾರ ಸಿ.
Published 28 ಜನವರಿ 2025, 5:18 IST
Last Updated 28 ಜನವರಿ 2025, 5:18 IST
<div class="paragraphs"><p>ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.&nbsp;</p></div>

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. 

   

ಸುತ್ತೂರು: ಕಂಕಣಧಾರಿಗಳಾದ ವಧು–ವರರು ಕೈ ಹಿಡಿದು ಕತೃಗದ್ದುಗೆಯಿಂದ ಮಂಗಳ ಮಂಟಪದ ವೇದಿಕೆಗೆ ಹೆಜ್ಜೆ ಹಾಕುತ್ತಿದ್ದಾಗ ಮಂಗಳವಾದ್ಯ, ನಾದಸ್ವರ ಜಾನಪದ ಕಲಾತಂಡಗಳು ಸ್ವಾಗತಿಸಿದವು. ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದ ಗಳಿಗೆಯಲ್ಲಿ ಪೋಷಕರ ಕಣ್ಗಳು ತುಂಬಿ ಬಂದವು.

ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ನಡೆದ ಸಾಮೂಹಿಕ ಮದುವೆಯಲ್ಲಿ ಕಂಡ ಸಂಭ್ರಮದ ಸನ್ನಿವೇಶವಿದು.

ADVERTISEMENT

ಮದುವೆಯಾದ 155 ನವ ದಂಪತಿಗಳು ಆರ್ಥಿಕ ದುಂದುವೆಚ್ಚ ಮಾಡಬಾರದೆಂದು ಸರಳ ಸಾಮೂಹಿಕ ಮದುವೆಯಲ್ಲಿ ಕೈಹಿಡಿದು ಆದರ್ಶವಾದರು. ಇದಕ್ಕೂ ಮೊದಲು ಜೆಎಸ್‌ಎಸ್‌ ಶಾಲೆ ಮಕ್ಕಳು ‘ಪ್ರಾರ್ಥನಾ ಗೀತೆ’ಗಳನ್ನು ಹಾಡಿ ಮದುವೆ ಶುಭವಾಗಲಿ ಎಂದರು.

ತಮಿಳುನಾಡಿನ 17 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷ. ಕೊಯಮತ್ತೂರಿನ 15, ಈರೋಡ್‌, ನೀಲಗಿರಿಯ ತಲಾ ಒಂದು ಜೋಡಿಗಳು ಇದ್ದವು. ರಾಜ್ಯದ ಮೈಸೂರು ಜಿಲ್ಲೆಯ 79, ಚಾಮರಾಜನಗರದ 43, ಮಂಡ್ಯದ 6, ರಾಮನಗರದ 4, ಹಾವೇರಿಯ 2, ಗದಗ, ಬೆಂಗಳೂರು, ಹಾಸನದ ತಲಾ ಒಂದು ಜೋಡಿ ಕೈ ಹಿಡಿದವು. ಎಲ್ಲರಿಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಜ್ಞಾವಿಧಿ ಬೋಧಿಸಿದರು.   

ನಂತರ ಮಾತನಾಡಿ, ‘155 ಜೋಡಿಗಳಿಗೆ ಒಂದೇ ಸಮಯದಲ್ಲಿ ವಿವಾಹ ಏರ್ಪಡಿಸಿರುವುದು ದೊಡ್ಡ ಕಾರ್ಯ. ಸಮಾಜಕ್ಕೆ ಮಾರ್ಗದರ್ಶನವನ್ನು ಸುತ್ತೂರು ಮಠ ತನ್ನ ಸೇವಾ ಕಾರ್ಯಕ್ರಮಗಳ ಮೂಲಕ ನೀಡುತ್ತಿದೆ. ಚರಿತ್ರೆ ಹಾಗೂ ಚಾರಿತ್ರ್ಯಕ್ಕೆ ಮಠವು ಉದಾಹರಣೆಯಾಗಿದೆ’ ಎಂದರು. 

‘ಜಾತಿ, ಮತಗಳನ್ನು ಮೀರಿದ ಮಾನವೀಯ ಬಾಂಧವ್ಯವನ್ನು ಸುತ್ತೂರು ಮಠವು ಶತಮಾನದಿಂದ ಸಾರಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ದಾಸೋಹವನ್ನು ನೀಡಿ ಏಳಿಗೆಗೆ ಕಾರಣವಾಗಿದೆ’ ಎಂದು ಶ್ಲಾಘಿಸಿದರು. 

‘ಚೋಳರು ಮತ್ತು ಗಂಗರ ನಡುವೆ ಯುದ್ಧ ಕೊನೆಗೊಳಿಸಿ ಶಾಂತಿ– ನೆಮ್ಮದಿಯಿಂದ ಬದುಕಲು ಶಿವರಾತ್ರೀಶ್ವರರು ದಾರಿ ತೋರಿದ್ದರು. ಅದೇ ಪರಂಪರೆ ಮುಂದುವರಿದಿದೆ’ ಎಂದು ಸ್ಮರಿಸಿದರು. 

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಗ್ರಾಮೀಣ ಪ್ರದೇಶದ ಜನರಿಗೆ ಜಾತ್ರೆಯ ಮೂಲಕ ಅರಿವು ಮೂಡಿಸುತ್ತಿದೆ. ಸಾಮೂಹಿಕ ವಿವಾಹ, ಭಜನೆ ಮೇಳ, ಕ್ರೀಡಾಕೂಟ, ಕೃಷಿ ಮೇಳ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಳನಿಯ ಪುಲಿಪ್ಪನಿ ಸಿದ್ಧರ್‌ ಆಶ್ರಮದ ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್‌, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್‌ಸೂರಮಠ ಪಾಲ್ಗೊಂಡಿದ್ದರು.

2000 ರಿಂದ 2024ರ ವರೆಗೆ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 3,194 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 462 ಜೋಡಿಗಳು ಕೈ ಹಿಡಿದಿದ್ದಾರೆ. ಇದುವರೆಗೆ ಸುತ್ತೂರಿನಲ್ಲಿ ಒಟ್ಟು 3,656 ಜೋಡಿಗಳು ವಿವಾಹವಾಗಿದ್ದಾರೆ.

ನವ ದಂಪತಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು
ಅಂಧರಾದ ಸಿ.ನಂದೀಶ್‌ ಸಂಗಾತಿಗ ಮಹದೇವಮ್ಮಗೆ ಕಾಲುಂಗುರ ತೊಡಿಸಿದರು
ಸರಳ, ಆದರ್ಶದ ಮದುವೆ ಪೋಷಕರು, ಬಂಧುಗಳು ಭಾಗಿ ತಮಿಳುನಾಡಿನ 17 ಜೋಡಿ

‘ಬಡವರಿಗೆ ಮಠ ಆಸರೆ’

ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿ ‘ಸರ್ವಧರ್ಮಗಳ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹವಾಗಿದೆ. ಮದುವೆಗೆ ಕನಿಷ್ಠ ₹ 10 ಲಕ್ಷ ಬೇಕು. ಬಡವರು ಹಿಂದುಳಿದವರಿಗೆ ಮಠವು ಆಸರೆಯಾಗಿದೆ’ ಎಂದರು. ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದರಿಗೆ ಸಂಗೀತ ಕಲಿಸಿ ಅವರ ಬಾಳಿಗೆ ಬೆಳಕಾದರು. ಸುತ್ತೂರು ಶ್ರೀಗಳು ಅಂಗವಿಕಲರಿಗೆ ವಿವಾಹ ಮಾಡಿಸುವಲ್ಲಿ ನೆರವಾಗಿದ್ದಾರೆ’ ಎಂದರು. ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ‘ರಾಜ್ಯವಲ್ಲದೇ ದೇಶ–ವಿದೇಶದಲ್ಲೂ ಕನ್ನಡ ಹಿರಿಮೆಯನ್ನು ಮಠವು ಸಾರಿದೆ’ ಎಂದರೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಮಠಕ್ಕೂ ಅರಮನೆಗೆ ಅವಿನಾಭಾವ ಸಂಬಂಧವಿದೆ. ಗುರು ಮನೆ ಇಲ್ಲದೆ ಅರಮನೆ ಇಲ್ಲ. ನಮ್ಮ ಅರಮನೆಗೆ ಗುರುಮನೆ ಅನೇಕ ರೀತಿ ಮಾರ್ಗದರ್ಶನ ನೀಡಿದೆ’ ಎಂದು ಸ್ಮರಿಸಿದರು.   

ಪೌರಾಣಿಕ ನಾಟಕಗಳ ಹೂರಣ

ಜಾತ್ರೆಯ ವಿವಿಧ ವೇದಿಕೆಗಳಲ್ಲಿ ಕಲಾವಿದರು ಕಾರ್ಯಕ್ರಮ ನೀಡಿದರು. ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಜನರು ಪೌರಾಣಿಕ ನಾಟಕಗಳ ಹೂರಣ ಸವಿದರು. ಹಿರಿಯರ ಮನೆ ಆವರಣದಲ್ಲಿ ಬನ್ನೂರಿನ ಲಕ್ಷ್ಮೀ ಭೈರವೇಶ್ವರ ಕಲಾಸಂಘದವರು ‘ಕುರುಕ್ಷೇತ್ರ’ ಸಿದ್ಧನಂಜ ದೇಶಿಕೇಂದ್ರ ಮಂಗಳ ಮಂಟಪದ ಮುಂಭಾಗ ಕೂರ್ಗಳ್ಳಿಯ ಸಪ್ತಸ್ವರ ಕಲಾಸಂಘದ ಕಲಾವಿದರು ‘ತ್ರಿಪುರ ಸಂಹಾರ’ ನಾಟಕ ಪ್ರದರ್ಶಿಸಿದರು.  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೆಬ್ಬಕವಾಡಿಯ ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ‘ದಕ್ಷಯಜ್ಞ’ ನಾಟಕ ಘನಲಿಂಗ ಶಿವಯೋಗಿ ಅತಿಥಿಗೃಹದ ಹಿಂಭಾಗದ ವೇದಿಕೆಯಲ್ಲಿ ಮೈಸೂರಿನ ಜನತಾನಗರದ ವಿಘ್ನೇಶ್ವರ ಸಾಂಸ್ಕೃತಿಕ ಚಾರಿಟಬಲ್‌ ಟ್ರಸ್ಟ್‌ ಕಲಾವಿದರು ‘ದಕ್ಷಯಜ್ಞ’ ನಾಟಕ ಪ್ರದರ್ಶಿಸಿದರು. ಕತೃ ಗದ್ದುಗೆ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ಪ್ರದರ್ಶನ ಕಲಾ ವಿಭಾಗದವರು ಎಚ್‌.ಎಸ್. ಶಿವಪ್ರಕಾಶ್ ರಚನೆಯ ‘ಮಂಟೇಸ್ವಾಮಿ’ ನಾಟಕ ಪ್ರದರ್ಶಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.