ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧರಿತ ಶಿಕ್ಷಣದ ಅಗತ್ಯ ಇದ್ದು, ಶಿಕ್ಷಕರು ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೌರವ ಸಲಹೆಗಾರ ಸುದರ್ಶನ್ ರಾಮರಾಜು ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಸೈನಿಕರು, ಕೃಷಿಕರು ಮತ್ತು ಶಿಕ್ಷಕರು – ಈ ಮೂರು ವರ್ಗದವರ ಸೇವೆಯಿಂದಾಗಿ ದೇಶ ಅಭಿವೃದ್ಧಿ ಸಾಧ್ಯವಾಗಿದ್ದು, ಶಿಕ್ಷಕರು ಸಮಾಜದ ಸತ್ಪ್ರಜೆಗಳನ್ನು ತಯಾರು ಮಾಡುವ ಶಿಲ್ಪಿಗಳಿದ್ದಂತೆ’ ಎಂದು ತಿಳಿಸಿದರು.
‘ಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನ ಸುಂದರ ಬದುಕಿಗೆ ಬುನಾದಿ. ಹೀಗಾಗಿ ನಮ್ಮ ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಸದಾ ಋಣಿಯಾಗಿರುವುದು ಕೂಡಾ ನಮ್ಮ ಕರ್ತವ್ಯ’ ಎಂದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿದರು. ಕುಲಸಚಿವೆ ವಿ.ಆರ್.ಶೈಲಜಾ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.