ADVERTISEMENT

ಕೊಳೆಗೇರಿ ಮಕ್ಕಳಿಗೆ ಖಾಸಗಿ ಶಾಲೆ ಶಿಕ್ಷಕರಿಂದ ಪಾಠ

ಶಾಲೆ ತೊರೆಯದಿರಲು ಕ್ರಮ, ಖಾಸಗಿ ಶಾಲೆ ಶಿಕ್ಷಕರಿಂದ ಸೇವೆ

ಕೆ.ಓಂಕಾರ ಮೂರ್ತಿ
Published 24 ಜುಲೈ 2020, 5:33 IST
Last Updated 24 ಜುಲೈ 2020, 5:33 IST
ಮೈಸೂರು ನಗರದ ಎಲ್ಲಮ್ಮ ಕೊಳೆಗೇರಿಯ ಮಕ್ಕಳಿಗೆ ನಿತ್ಯ ಪಾಠ
ಮೈಸೂರು ನಗರದ ಎಲ್ಲಮ್ಮ ಕೊಳೆಗೇರಿಯ ಮಕ್ಕಳಿಗೆ ನಿತ್ಯ ಪಾಠ   

ಮೈಸೂರು: ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿರುವ ಕಾರಣ ಕೊಳೆಗೇರಿ ಮಕ್ಕಳು ಕೆಲಸಕ್ಕೆ ಸೇರುತ್ತಿದ್ದು, ಇನ್ನು ಕೆಲವರು ಸಿಗ್ನಲ್‌ಗಳಲ್ಲಿ ಮಾರಾಟ, ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ಕೆಲಸಗಳಿಂದ ಮಕ್ಕಳನ್ನು ದೂರವಿರಿಸಿ, ಶಿಕ್ಷಣದಲ್ಲಿ ತೊಡಗಿಸಲು ಖಾಸಗಿ ಶಾಲೆ ಶಿಕ್ಷಕರು ಕೊಳೆಗೇರಿಗೆ ಹೋಗಿ ನಿತ್ಯ ಪಾಠ ಮಾಡುತ್ತಿದ್ದಾರೆ.

ಮೈಸೂರು ನಗರದ ಬನ್ನಿಮಂಟಪ ಸನಿಹದ ಎಲ್ಲಮ್ಮ ಕೊಳೆಗೇರಿಯಲ್ಲಿ 60ಕ್ಕೂ ಅಧಿಕ ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಶಾಲೆ ತೊರೆದಿದ್ದಾರೆ. ಇನ್ನು ಕೆಲವರು ಏಳೆಂಟು ವರ್ಷದವರಾಗಿದ್ದರೂ ಶಾಲೆಗೆ ಸೇರಿಲ್ಲ. ಈ ಮಕ್ಕಳ ಹೆಚ್ಚಿನ ಪೋಷಕರು ಪೌರಕಾರ್ಮಿಕರು.

ಹೀಗಾಗಿ, ಸೇಂಟ್‌ ಜೋಸೆಫ್‌ ಸೆಂಟ್ರಲ್‌ ಶಾಲೆ ಪ್ರಾಚಾರ್ಯ ಸುನಿಲ್‌ ಪ್ಯಾಟ್ರಿಕ್‌ ನೇತೃತ್ವದಲ್ಲಿ ಕೆಲ ಉತ್ಸಾಹಿ ಶಿಕ್ಷಕರು, ಯುವಕರು, ಕೊಳೆಗೇರಿ ಮಕ್ಕಳಿಗೆ ಪುಸ್ತಕ, ಇತರ ಪರಿಕರ ನೀಡುತ್ತಿದ್ದಾರೆ. ಇಲ್ಲಿನ ದೇವಸ್ಥಾನವೊಂದರಲ್ಲಿ ನಿತ್ಯ ಮಧ್ಯಾಹ್ನ 3 ಗಂಟೆ ‍ಪಾಠ ಮಾಡುತ್ತಾರೆ.

ADVERTISEMENT

‘ಖಾಸಗಿ ಹಾಗೂ ಸರ್ಕಾರದ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಬೋಧನೆ ಮಾಡಲಾಗುತ್ತಿದೆ. ಆದರೆ, ಕೊಳೆಗೇರಿ ಮಕ್ಕಳ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಇವರಿಗೆ ಯಾವುದೇ ಸೌಲಭ್ಯವೂ ಇಲ್ಲ. ಹೀಗಾಗಿ, ನಾವೆಲ್ಲಾ ಸೇರಿ ಸ್ವಂತ ಖರ್ಚಿನಿಂದ ಎರಡು ತಿಂಗಳಿನಿಂದ ಈ ಮಕ್ಕಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿದ್ದೇವೆ’ ಎಂದು ಸುನಿಲ್‌ ಪ್ಯಾಟ್ರಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕೊಳೆಗೇರಿಯಲ್ಲಿ 1ರಿಂದ 10ನೇ ತರಗತಿ ಓದುತ್ತಿರುವ ಮಕ್ಕಳು ಇದ್ದಾರೆ. ಇವರನ್ನು 1ರಿಂದ 4, 5ರಿಂದ 7, 8ರಿಂದ 10ನೇ ತರಗತಿ... ಹೀಗೆ 3 ಗುಂಪು ಮಾಡಿ ಬೋಧನೆ ಮಾಡುತ್ತಿದ್ದಾರೆ. ನಿತ್ಯ ಹಾಜರಿ ಹಾಕುತ್ತಾರೆ. ಭಾಷೆ ಕಲಿಕೆ, ಗಣಿತ, ವಿಜ್ಞಾನ ಬೋಧನೆ, ಮೌಲ್ಯಗಳನ್ನು ಹೇಳಿಕೊಡುತ್ತಿದ್ದಾರೆ. ಹಾಡು, ವ್ಯಾಯಾಮ, ಯೋಗಾಸನ ಕಲಿಸುತ್ತಿದ್ದಾರೆ.

‘ಈ ಮಕ್ಕಳನ್ನು ಆರ್ಥಿಕವಾಗಿ ಮುಂದೆ ತರಲು ಸಾಧ್ಯವಾಗದೇ ಇರಬಹುದು. ಶಿಕ್ಷಣವನ್ನಾದರೂ ನೀಡ ಬಹುದಲ್ಲವೇ?’ ಎಂದು ಕೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.