ADVERTISEMENT

ಬನ್ನೂರು ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

ಶಿಥಿಲಗೊಂಡ ಕಟ್ಟಡ, ಕಿತ್ತು ಬರುವ ಚಾವಣಿ ಗಾರೆ; ಆತಂಕದಲ್ಲೇ ಓದುವ ಸಾಹಿತ್ಯಾಸಕ್ತರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 4:12 IST
Last Updated 18 ಡಿಸೆಂಬರ್ 2021, 4:12 IST
ಬನ್ನೂರು ಗ್ರಂಥಾಲಯದ ಎದುರು ಎತ್ತಿನಗಾಡಿ, ವಾಹನಗಳನ್ನು ನಿಲ್ಲಿಸಲಾಗಿದೆ (ಎಡಚಿತ್ರ). ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿರುವ ಸಾರ್ವಜನಿಕರು
ಬನ್ನೂರು ಗ್ರಂಥಾಲಯದ ಎದುರು ಎತ್ತಿನಗಾಡಿ, ವಾಹನಗಳನ್ನು ನಿಲ್ಲಿಸಲಾಗಿದೆ (ಎಡಚಿತ್ರ). ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿರುವ ಸಾರ್ವಜನಿಕರು   

ಬನ್ನೂರು: ಶಿಥಿಲಗೊಂಡ ಕಟ್ಟಡ, ಕಿತ್ತು ಬರುವ ಚಾವಣಿ ಗಾರೆ, ಜೀವಭಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಆತಂಕದಲ್ಲೇ ಓದುವ ಸಾಹಿತ್ಯಾಸಕ್ತರು, ಹೊರಭಾಗದಲ್ಲಿ ವಾಹನ, ಎತ್ತಿನಗಾಡಿ ನಿಲುಗಡೆ...

ಇದು ಪಟ್ಟಣದ ಗ್ರಂಥಾಲಯದ ದುಸ್ಥಿತಿ. 15 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದರೂ, ಸ್ವಂತ ಕಟ್ಟಡವಿಲ್ಲದೆ ಪುರಸಭೆಯ ಹಳೇ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಓದುಗರಿಗೆ ಬೇಕಾದ ಮೂಲಸೌಕರ್ಯ ಮರೀಚಿಕೆಯಾಗಿದೆ.

ಈ ಹಿಂದೆ ಬನ್ನೂರು ಬಸ್‌ ನಿಲ್ದಾಣದ ಜಾಗದಲ್ಲಿ ಸ್ಥಾಪನೆಗೊಂಡಿದ್ದ ಗ್ರಂಥಾಲಯವನ್ನು, ನಿಲ್ದಾಣದ ಕಾಮಗಾರಿ ವೇಳೆ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಪುರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಿಸ ಲಾಯಿತು. ಗವೀಗೌಡ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡಕ್ಕೆ ನಿವೇಶನ ದೊರೆತಿದೆ. ಆದರೆ, ಇನ್ನೂ ಕಟ್ಟಡ ನಿರ್ಮಾಣಗೊಂಡಿಲ್ಲ.

ADVERTISEMENT

ಈಗ ಇರುವ ಗ್ರಂಥಾಲಯದಲ್ಲಿ ಕಥೆ, ಕವನ, ಕಾದಂಬರಿಗಳು, ರಾಮಾಯಣ, ಮಹಾಭಾರತ ದಂತಹ ಪುರಾಣ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇವೆ. 300ಕ್ಕೂ ಹೆಚ್ಚು ಸದಸ್ಯರಿದ್ದು, ಪ್ರತಿದಿನ ಓದಲು ಬರುತ್ತಾರೆ. ಆದರೆ, ಗ್ರಂಥಾಲಯದ ಒಳಾಂಗಣ ತೀರ ಕಿರಿದಾಗಿದ್ದು, ಹೆಚ್ಚು ಜನರು ಕುಳಿತು ಓದಲು ಸಾಧ್ಯವಾಗುತ್ತಿಲ್ಲ. ಕಟ್ಟಡದ ಚಾವಣಿಯ ಗಾರೆ ಬೀಳುತ್ತಿದೆ. ಜಾಗದ ಕೊರತೆಯಿಂದಾಗಿ ಡಿಜಿಟಲ್‌ ಗ್ರಂಥಾಲಯದ ಸೌಲಭ್ಯವೂ
ದೊರೆತಿಲ್ಲ.

ಗ್ರಂಥಾಲಯ ಕಟ್ಟಡದ ಮುಂಭಾಗ ದಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಕೆಲವರು ಜಾನುವಾರುಗಳನ್ನು ಕಟ್ಟುತ್ತಾರೆ. ಎತ್ತಿನಗಾಡಿಗಳನ್ನೂ ನಿಲ್ಲಿಸುತ್ತಾರೆ. ಇದರಿಂದ ಕಟ್ಟಡ ಮರೆಯಾಗುತ್ತಿದ್ದು, ಗ್ರಂಥಾಲಯ ತೆರೆದಿರುವ ವಿಚಾರ ತಿಳಿಯದಂತಾಗುತ್ತಿದೆ.

ಸ್ವಂತ ಕಟ್ಟಡ ನಿರ್ಮಿಸಲು ಆಗ್ರಹ
‘ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಶಿಥಿಲಗೊಂಡ ಕಟ್ಟಡದಲ್ಲಿ ನೆಮ್ಮದಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಗ್ರಂಥಾಲಯದಲ್ಲಿರುವ ಅಮೂಲ್ಯ ಪುಸ್ತಕಗಳನ್ನು ರಕ್ಷಿಸಬೇಕು. ಸ್ವಂತ ಕಟ್ಟಡ ನಿರ್ಮಿಸಿ, ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಡಿಜಿಟಲ್‌ ಗ್ರಂಥಾಲಯ ಆರಂಭಿಸಿ, ಓದುಗರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಎಂ.ಎ ವಿದ್ಯಾರ್ಥಿ ಮಂಜುನಾಥ್‌ ತಿಳಿಸಿದರು.

‘50x30 ಅಡಿ ಜಾಗ’
‘ಗ್ರಂಥಾಲಯಕ್ಕಾಗಿ 50x30 ಅಡಿ ಜಾಗ ದೊರೆತಿದೆ. ಕಟ್ಟಡ ನಿರ್ಮಿಸುವಂತೆ ಮೇಲಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಗ್ರಂಥಾಲಯದ ಅಕ್ಕಪಕ್ಕದಲ್ಲಿ ಸ್ಥಳೀಯರು ಜಾನುವಾರುಗಳನ್ನು ಕಟ್ಟುತ್ತಿದ್ದು, ಇದರಿಂದ ಓದುಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಕಟ್ಟಡದ ಎದುರು ವಾಹನ ನಿಲ್ಲಿಸದಂತೆ ಜನರಿಗೆ ಸೂಚಿಸುತ್ತಿದ್ದೇವೆ’ ಎಂದು ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.