ADVERTISEMENT

ಎಚ್‌.ಡಿ.ಕೋಟೆ ಪುರಸಭೆ: ಜೆಡಿಎಸ್‌ಗೆ ಒಲಿಯುವುದೇ ಅಧ್ಯಕ್ಷ ಸ್ಥಾನ?

ಎಚ್‌.ಡಿ.ಕೋಟೆ ಪುರಸಭೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೂ ಗದ್ದುಗೆ ಭಾಗ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:28 IST
Last Updated 10 ಅಕ್ಟೋಬರ್ 2020, 2:28 IST
ಎಚ್.ಡಿ.ಕೋಟೆ ಪುರಸಭೆ
ಎಚ್.ಡಿ.ಕೋಟೆ ಪುರಸಭೆ   

ಎಚ್.ಡಿ.ಕೋಟೆ: ಪುರಸಭೆಯ ಆಡಳಿತ ಮಂಡಳಿಗೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ.

ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿ ಪುರಸಭೆಯಾದ ನಂತರ ‌13 ವಾರ್ಡ್‌ನಿಂದ 23 ವಾರ್ಡ್‌ಗಳಾಗಿ ವಿಂಗಡಣೆಯಾಗಿದ್ದು, ಕಳೆದ 2 ವರ್ಷದ ಹಿಂದೆಯೇ ಈ ಎಲ್ಲಾ ವಾರ್ಡ್‌ಗಳಿಗೂ ಚುನಾವಣೆ ನಡೆದಿತ್ತು. ನ್ಯಾಯಾಲಯದಲ್ಲಿ ಈ ವಿಚಾರ ಇದ್ದುದರಿಂದ ಮೀಸಲಾತಿ ಪ್ರಕಟವಾಗಿರಲಿಲ್ಲ. ಸದಸ್ಯರಿಗೆ ಅಧಿಕಾರ ಭಾಗ್ಯವೂ ಸಿಕ್ಕಿರಲಿಲ್ಲ. ಈಗ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಪುರಸಭೆಯ ಸದಸ್ಯರಲ್ಲಿ ಅಧಿಕಾರ ಸಿಗುವುದೆಂಬ ಉತ್ಸಾಹ ಮೂಡಿದೆ.

ಕಾಂಗ್ರೆಸ್‌ನ 11 ಸದಸ್ಯರಿದ್ದು, ದೊಡ್ಡ ಪಕ್ಷವಾಗಿದೆ. ಜೆಡಿಎಸ್‌ 8 ಸದಸ್ಯರನ್ನು, ಬಿಜೆಪಿ ಒಂದು, ಬಿಎಸ್‌ಪಿ ಒಂದು, ಪಕ್ಷೇತರರು ಇಬ್ಬರು ಚುನಾಯಿತರಾಗಿದ್ದರು.

ADVERTISEMENT

23 ಸದಸ್ಯರ ಬಲವಿರುವ ಪುರಸಭೆಗೆ ಕಾಂಗ್ರೆಸ್‌ನಿಂದ 11 ಸದಸ್ಯರು ಹಾಗೂ ಪಕ್ಷೇತರರ ಸದಸ್ಯರ ಬೆಂಬಲವೂ ಇದೆ. ಆದರೆ, ಅಧ್ಯಕ್ಷ ಸ್ಥಾನ ಪಡೆಯಲು ಮೀಸಲಾತಿ ಅಡ್ಡಿಯಾಗಿದೆ. ಏಕೆಂದರೆ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಸದಸ್ಯರು ಇವರಲ್ಲಿ ಒಬ್ಬರೂ ಇಲ್ಲ. ಕಾಂಗ್ರೆಸ್‌ ಶಾಸಕರ ಮತವಿದ್ದರೂ ಅಧಿಕಾರದ ಭಾಗ್ಯ ದೊರೆಯದಂತಾಗಿದೆ.

8 ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಪಕ್ಷದಲ್ಲಿ ಮೂವರು ಸದಸ್ಯರು ಪರಿಶಿಷ್ಟ ಪಂಗಡ ಮೀಸಲಿನಲ್ಲಿ ಜಯ ಗಳಿಸಿದ್ದಾರೆ. ಮೂವರು ಸದಸ್ಯರು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದರೆ ನಿರಾಯಾಸವಾಗಿ ಅಧಿಕಾರ ಸಿಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.